ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸಿಗದ ಅವಕಾಶ; ಮತ್ತೆ ಕೌಂಟಿಯತ್ತ ಮುಖ ಮಾಡಿದ ಪೂಜಾರ
Dec 15, 2023 03:42 PM IST
ಭಾರತ ತಂಡದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ.
- India vs South Africa Test Series: ಡಿಸೆಂಬರ್ 26ರಿಂದ ಶುರುವಾಗುವ ಸೌತ್ ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗದ ಹಿನ್ನೆಲೆ ಭಾರತ ತಂಡದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ (India vs South Africa Test Series) ಅವಕಾಶ ಸಿಗದ ಹಿನ್ನೆಲೆ ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ಮತ್ತೆ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಡಿಸೆಂಬರ್ 26 ರಿಂದ ಆತಿಥೇಯರ ವಿರುದ್ಧ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಪೂಜಾರ ಈ ಹಿಂದೆಯೂ ಸಸೆಕ್ಸ್ ಪರ ಆಡಿದ್ದು, 2024 ಕೌಂಟಿ ಚಾಂಪಿಯನ್ಶಿಪ್ನಲ್ಲೂ ಅದೇ ತಂಡದ ಪರ ಆಡಲಿದ್ದಾರೆ.
ಸೌತ್ ಆಫ್ರಿಕಾ ಸರಣಿಗೆ ಅವಕಾಶ ನೀಡದ ಕಾರಣ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಪೂಜಾರ, ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2024ರ ಕೌಂಟಿ ಆವೃತ್ತಿಯಲ್ಲೂ ಸಸೆಕ್ಸ್ ತಂಡದ ಕಣಕ್ಕಿಳಿಯುವುದಾಗಿ ಅನುಭವಿ ಆಟಗಾರ ಅಧಿಕೃತಗೊಳಡಿಸಿದ್ದಾರೆ. ಈಗಾಗಲೇ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. 100 ಟೆಸ್ಟ್ ಆಡಿದ ಹೆಗ್ಗಳಿಕೆ ಹೊಂದಿರುವ ಪೂಜಾರ, ಮತ್ತೆ ಅವಕಾಶ ಸಿಗುವುದು ಅನುಮಾನ.
ಆರಂಭಿಕ 7 ಪಂದ್ಯಗಳಲ್ಲಿ ಕಣಕ್ಕೆ
ತಮ್ಮ ಬ್ಯಾಟಿಂಗ್ ಫಾರ್ಮ್ಗೆ ಮರಳಲು ಕೌಂಟಿಯತ್ತ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದ ಕೂಡ ಅವರು ಕೌಂಟಿ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕಂಬ್ಯಾಕ್ ಮಾಡಿದ್ದರು. ಇದೀಗ ಅಂತಹದ್ದೇ ಸಾಹಕ್ಕೆ ಮುಂದಾಗಿದ್ದಾರೆ. 2022ರಲ್ಲಿ ಮೊದಲ ಬಾರಿಗೆ ಸಸೆಕ್ಸ್ ಪರ ಆಡಿದ್ದ ಪೂಜಾರಗೆ ಇದು ಮೂರನೇ ಆವೃತ್ತಿ. ಆರಂಭಿಕ 7 ಪಂದ್ಯಗಳಲ್ಲಿ ಕಣಕ್ಕಿಳಿಯುವ ಬಗ್ಗೆ ಕ್ಲಬ್ ಮಾಹಿತಿ ನೀಡಿದೆ.
ಕೌಂಟಿಯಲ್ಲಿ ಪೂಜಾರ ಪ್ರದರ್ಶನ
ಪೂಜಾರ ಇದುವರೆಗೆ ಸಸೆಕ್ಸ್ ಪರ 18 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 8 ಶತಕ, 4 ಅರ್ಧಶತಕಗಳನ್ನು ಒಳಗೊಂಡಂತೆ 64.24ರ ಸರಾಸರಿಯಲ್ಲಿ ಒಟ್ಟು 1863 ರನ್ ಗಳಿಸಿದ್ದಾರೆ. ಸಸೆಕ್ಸ್‌ಗೆ ಮರಳಿದ ನಂತರ, ಚೇತೇಶ್ವರ ಪೂಜಾರ ಮುಂಬರುವ ಋತುವಿಗಾಗಿ ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಕೆಲವು ಸೀಸನ್‌ಗಳಲ್ಲಿ ಈ ಕ್ಲಬ್‌ನೊಂದಿಗೆ ಸಾಕಷ್ಟು ಆನಂದಿಸಿದೆ ಎಂದರು.
ಸಂತಸ ವ್ಯಕ್ಯತಪಡಿಸಿದ ಕೋಚ್
ಸಸೆಕ್ಸ್ ಕುಟುಂಬಕ್ಕೆ ಮರಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ತಂಡವನ್ನು ಸೇರಲು ಮತ್ತು ಅದರ ಯಶಸ್ಸಿಗೆ ಕೊಡುಗೆ ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಇನ್ನು ಪೂಜಾರ ಕ್ಲಬ್‌ಗೆ ಮರಳಿದ ಬಗ್ಗೆ ತಂಡದ ಮುಖ್ಯಕೋಚ್ ಪಾಲ್ ಫಾರ್ಬ್ರೇಸ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಪೂಜಾರ 2 ತಿಂಗಳ ಕಾಲ ಕ್ಲಬ್‌ಗೆ ಮರಳಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದು ಫಾರ್ಬ್ರೇಸ್ ಹೇಳಿದ್ದಾರೆ.
ಪೂಜಾರ ವೃತ್ತಿಜೀವನ
35 ವರ್ಷದ ಪೂಜಾರ ಕೊನೆಯ ಬಾರಿಗೆ 2023ರ ಜೂನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ 14 ರನ್ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ 27 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆ ಬಳಿಕ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈವರೆಗೂ 103 ಟೆಸ್ಟ್ ಪಂದ್ಯಗಳಲ್ಲಿ 43.60ರ ಬ್ಯಾಟಿಂಗ್ ಸರಾಸರಿಯಲ್ಲಿ ಒಟ್ಟು 7195 ರನ್ ಗಳಿಸಿದ್ದಾರೆ. ಈ ಪೈಕಿ 19 ಶತಕ, 35 ಅರ್ಧಶತಕ ಸೇರಿವೆ. ಇದಲ್ಲದೇ 5 ಏಕದಿನಗಳಲ್ಲಿ 51 ರನ್ ಗಳಿಸಿದ್ದಾರೆ.