ಪಂದ್ಯದ ಚಿತ್ರಣ ಬದಲಿಸಿದ್ದೇ ಕೊಹ್ಲಿ ಆ ಒಂದು ಕ್ಯಾಚ್, ಆ ಒಂದು ಫೀಲ್ಡಿಂಗ್; ಸೂಪರ್ಮ್ಯಾನ್ ಎಂದ ನೆಟ್ಟಿಗರು
Jan 18, 2024 12:56 PM IST
ವಿರಾಟ್ ಕೊಹ್ಲಿ ಫೀಲ್ಡಿಂಗ್ ದೃಶ್ಯಗಳು.,
- IND vs AFG 3rd T20I: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಫೀಲ್ಡಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಒಂದು ರನ್ನಿಂಗ್ ಕ್ಯಾಚ್ ಮತ್ತು ಸೂಪರ್ ಮ್ಯಾನ್ ಫೀಲ್ಡಿಂಗ್ನಿಂದ ಪಂದ್ಯ ಸೂಪರ್ ಓವರ್ವರೆಗೆ ಬರಲು ಕಾರಣವಾಯಿತು.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಅಂತಿಮ ಟಿ20 ಪಂದ್ಯವು (IND vs AFG 3rd T20I) ರಣರೋಚಕತೆಯಿಂದ ಕೂಡಿತ್ತು. ಹೈಸ್ಕೋರಿಂಗ್ ಗೇಮ್, ಬೌಂಡರಿ-ಸಿಕ್ಸರ್ಗಳ ಸುರಿಮಳೆಯಿಂದ ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ಒದಗಿಸಿತು. ಕೊನೆ ಕ್ಷಣದವರೆಗೂ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ಆದರೂ ಕೊನೆಗೆ ಪಂದ್ಯ ಟೈನಲ್ಲಿ ಅಂತ್ಯ ಕಂಡಿತು.
ಸೂಪರ್ ಓವರ್ನಲ್ಲಾದರೂ ಫಲಿತಾಂಶ ನಿರ್ಧಾರವಾಗುತ್ತದೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಆಗಲೂ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿತು. ಸೂಪರ್ ಓವರ್ ಸಹ ಟೈನಲ್ಲಿ ಕೊನೆಗೊಂಡಿತು. ಹಾಗಾಗಿ ಮತ್ತೊಂದು ಸೂಪರ್ ಓವರ್ ನಡೆಸಲಾಯ್ತು. ಕೊನೆಗೆ 2ನೇ ಸೂಪರ್ ಓವರ್ನಲ್ಲಿ ಭಾರತ ಜಯದ ನಗೆ ಬೀರಿತು.
ಕೊಹ್ಲಿ ಖತರ್ನಾಕ್ ಫೀಲ್ಡಿಂಗ್
ಆದರೆ ಸೂಪರ್ ಓವರ್ವರೆಗೆ ಪಂದ್ಯ ಬರಲು ಕಾರಣವಾಗಿದ್ದೇ ವಿರಾಟ್ ಕೊಹ್ಲಿ ಅವರ ಖಡಕ್ ಫೀಲ್ಡಿಂಗ್ನಿಂದ. ಬೌಂಡರಿ ಲೈನ್ನಲ್ಲಿ ನಿಂತು ಸೂಪರ್ ಮ್ಯಾನ್ನಂತೆ ಹಾರಿ ಸಿಕ್ಸರ್ ಹೋಗುವುದನ್ನು ತಡೆದರು. ಆ ಮೂಲಕ ಐದು ರನ್ಗಳ ತಡೆದರು. ಅಲ್ಲದೆ, ಇದರ ನಂತರ ಟೆರ್ರಿಫಿಕ್ ರನ್ನಿಂಗ್ ಕ್ಯಾಚ್ ಹಿಡಿದು ಗಮನ ಸೆಳೆದರು.
16.5 ಎಸೆತದಲ್ಲಿ ಕರಿಮ್ ಜನ್ನತ್, ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಲು ಯತ್ನಿಸಿದರು. ಆದರೆ, ಲಾಂಗ್ ಆನ್ನಲ್ಲಿದ್ದ ವಿರಾಟ್, ಚಿರತೆಯಂತೆ ಹಾರಿ ಚೆಂಡನ್ನು ಹಿಡಿದು ಬೌಂಡರಿ ಲೈನ್ ಒಳಗೆ ಹಾಕಿದರು. ಇನ್ನೇ ಬೌಂಡರಿ ಗೆರೆ ದಾಟಿ ಹೋಗಲಿದೆ ಎನ್ನುವಷ್ಟರಲ್ಲಿ ವಿರಾಟ್ ಚೆಂಡು ತಡೆಯುವಲ್ಲಿ ಯಶಸ್ವಿಯಾದರು.
ಬುಮ್ರಾ ಶೈಲಿಯಲ್ಲಿ ಸಿಕ್ಸರ್ ತಡೆದ ಕೊಹ್ಲಿ
ಸಿಕ್ಸರ್ ತಡೆದ ಸಂದರ್ಭದಲ್ಲಿ ಅಫ್ಘನ್ಗೆ 20 ಎಸೆತಗಳಲ್ಲಿ 48 ರನ್ ಬೇಕಿತ್ತು. ಆದರೆ ಚಿರತೆಯಂತೆ ಹಾರಿದ ಕೊಹ್ಲಿ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಕೊಹ್ಲಿ ಹಾರಿ ಚೆಂಡನ್ನು ಒಳಗೆ ತಳ್ಳಿ 5 ರನ್‌ಗಳನ್ನು ಉಳಿಸಿದರು. ಆದರೆ ಕೊಹ್ಲಿ ಸಿಕ್ಸರ್ ಉಳಿಸಿದ ಶೈಲಿ ಥೇಟ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುವ ರೀತಿಯಲ್ಲಿಲ್ಲೇ ಇತ್ತು. ಇದರ ವಿಡಿಯೋ, ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಎಂಥಾ ರನ್ನಿಂಗ್ ಕ್ಯಾಚ್...
ಅಫ್ಘನ್ ಗೆಲುವಿಗೆ ಇನ್ನೂ 10 ರನ್ಗಳು ಬೇಕಿತ್ತು. ಆವೇಶ್ ಖಾನ್ ಎಸೆದ 18.2ನೇ ಓವರ್ನಲ್ಲಿ ನಜೀಬುಲ್ಲಾ ಚೆಂಡನ್ನು ಜೋರಾಗಿ ಸಿಕ್ಸರ್ ಸಿಡಿಸಲು ಯತ್ನಿಸಿದರು. ಆದರೆ ಚೆಂಡು ಗಾಳಿಯಲ್ಲಿ ಅತಿ ಎತ್ತರಕ್ಕೆ ಹೋಯಿತು. ಆದರೆ ಲಾಂಗ್ ಆನ್ನಲ್ಲಿದ್ದ ಕೊಹ್ಲಿ, ಮತ್ತೆ ಚಿರತೆಯಂತೆ ವೇಗವಾಗಿ ಓಡಿ ಆ ಕ್ಯಾಚ್ ಅನ್ನು ಹಿಡಿದರು. ಆ ಮೂಲಕ ದಿಕ್ಕು ತಪ್ಪುತ್ತಿದ್ದ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಒಂದು ವೇಳೆ ಎರಡೂ ಫೀಲ್ಡಿಂಗ್ನಲ್ಲಿ ಮಿಸ್ ಆಗಿದ್ದರೆ ಅಫ್ಘನ್ ತಂಡವೇ ಗೆಲ್ಲುತ್ತಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಬ್ಯಾಟಿಂಗ್ನಲ್ಲಿ ಫೇಲ್, ಫೀಲ್ಡಿಂಗ್ನಲ್ಲಿ ಪಾಸ್
ಆರ್ಸಿಬಿ ತವರು ಮೈದಾನವಾದ ಚಿನ್ನಸ್ವಾಮಿಯಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಗೋಲ್ಡನ್ ಡಕ್ ಆದರು. ಇದು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತು. ಆದರೆ, ಖತರ್ನಾಕ್ ಫೀಲ್ಡಿಂಗ್ ಮೂಲಕ ಗಮನ ಸೆಳೆದರು. ಪಂದ್ಯದ ಚಿತ್ರಣವನ್ನೇ ಬದಲಿಸಲು ಕಾರಣರಾದರು. ಸಿಕ್ಸರ್ ತಡೆದಿದ್ದು ಮತ್ತು ರನ್ನಿಂಗ್ ಕ್ಯಾಚ್ ಈಗ ಸಖತ್ ವೈರಲ್ ಆಗುತ್ತಿದೆ.