logo
ಕನ್ನಡ ಸುದ್ದಿ  /  ಕ್ರಿಕೆಟ್  /  ಶುಭ್ಮನ್ ಗಿಲ್ ಶತಕ, ಭಾರತ 255ಕ್ಕೆ ಆಲೌಟ್​​​​; ಇಂಗ್ಲೆಂಡ್​ ತಂಡಕ್ಕೆ 399 ರನ್​ಗಳ ಬೃಹತ್ ಗುರಿ

ಶುಭ್ಮನ್ ಗಿಲ್ ಶತಕ, ಭಾರತ 255ಕ್ಕೆ ಆಲೌಟ್​​​​; ಇಂಗ್ಲೆಂಡ್​ ತಂಡಕ್ಕೆ 399 ರನ್​ಗಳ ಬೃಹತ್ ಗುರಿ

Prasanna Kumar P N HT Kannada

Feb 04, 2024 04:00 PM IST

google News

ಶುಭ್ಮನ್ ಗಿಲ್ ಶತಕ, ಭಾರತ 255ಕ್ಕೆ ಆಲೌಟ್

    • IND vs ENG 2nd Test : ಎರಡನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಭಾರತ ತಂಡ 399 ರನ್​ಗಳ ಗುರಿ ನೀಡಿದೆ. ಮೊದಲ ಟೆಸ್ಟ್ ಸೋಲಿನ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಸಜ್ಜಾಗಿದೆ.​
ಶುಭ್ಮನ್ ಗಿಲ್ ಶತಕ, ಭಾರತ 255ಕ್ಕೆ ಆಲೌಟ್
ಶುಭ್ಮನ್ ಗಿಲ್ ಶತಕ, ಭಾರತ 255ಕ್ಕೆ ಆಲೌಟ್

ಮೊದಲ ಟೆಸ್ಟ್​ ಸೋಲಿಗೆ ಸೇಡು ತಿರಿಸಿಕೊಳ್ಳಲು ಟೀಮ್ ಇಂಡಿಯಾ ಎರಡನೇ ಟೆಸ್ಟ್​ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಿದೆ. ವಿಶಾಖಪಟ್ಟಂನ ಡಾ ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್​​ನಲ್ಲಿ ಶುಭ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ, ಮೊದಲ ಟೆಸ್ಟ್ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್​ಗೆ 399 ರನ್​ಗಳ ಗುರಿ ನೀಡಿದೆ.

ಮೊದಲ ಇನ್ನಿಂಗ್ಸ್​​ನಲ್ಲಿ 143 ರನ್​​ಗಳ ಮುನ್ನಡೆ ಪಡೆದಿದ್ದ ಭಾರತ, ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 28 ರನ್​​ ಗಳಿಸಿತ್ತು. ಈ ಸ್ಕೋರ್​ನೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾಗೆ, ಆರಂಭದಲ್ಲೇ ವಿಘ್ನ ಎದುರಾಯಿತು. ನಾಯಕ ರೋಹಿತ್​ ಶರ್ಮಾ 13 ರನ್ ಗಳಿಸಿ ಮತ್ತೆ ನಿರಾಸೆ ಮೂಡಿಸಿದರು. ಮೊದಲ ಇನ್ನಿಂಗ್ಸ್​ನ ದ್ವಿಶತಕ ವೀರ 17 ರನ್​ ಗಳಿಸಿ ಔಟಾದರು.

ಶುಭ್ಮನ್ ಸೊಗಸಾದ ಆಟ

ಸತತ ವೈಫಲ್ಯ ಅನುಭವಿಸುತ್ತಿದ್ದ ಶುಭ್ಮನ್ ಗಿಲ್, ಕೊನೆಗೂ ಲಯಕ್ಕೆ ಮರಳಿದರು. ಎರಡನೇ ಟೆಸ್ಟ್​ನ ದ್ವಿತೀಯ ಇನ್ನಿಂಗ್ಸ್​ನಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದರು. ಶ್ರೇಯಸ್ ಅಯ್ಯರ್​ ಜೊತೆಗೆ ಮೂರನೇ ವಿಕೆಟ್​ಗೆ 81 ರನ್ ಕಲೆ ಹಾಕಿದ ಗಿಲ್, 6ನೇ ವಿಕೆಟ್​ಗೆ ಅಕ್ಷರ್​ ಜೊತೆಗೆ 89 ರನ್​ಗಳ ಪಾಲುದಾರಿಕೆ ನೀಡಿದರು. ಅಯ್ಯರ್ 29, ಅಕ್ಷರ್​ 45 ರನ್​ಗಳ ಕಾಣಿಕೆ ನೀಡಿದರು. ರಜತ್ (9) ಪಾಟೀದಾರ್ ನಿರಾಸೆ ಮೂಡಿಸಿದರು.

332 ದಿನಗಳ ನಂತರ ಗಿಲ್ ಶತಕ

ಮೊದಲ ಇನ್ನಿಂಗ್ಸ್​​ನಲ್ಲಿ ಜೈಸ್ವಾಲ್​ ಅವರ ದ್ವಿಶತಕದ ನೆರವಿನಿಂದ ಭಾರತ 396 ರನ್ ಕಲೆ ಹಾಕಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಮತ್ತೆ ಬ್ಯಾಟ್ಸ್​ಮನ್​ಗಳು ಕೈಕೊಟ್ಟರು. ಈ ಹಂತದಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿದ ಗಿಲ್​ ಟೆಸ್ಟ್​ನಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. 147 ಎಸೆತಗಳನ್ನು ಎದುರಿಸಿದ ಗಿಲ್​ 11 ಬೌಂಡರಿ, 2 ಸಿಕ್ಸರ್ ಸಹಿತ 104 ರನ್ ಗಳಿಸಿದರು. ಇದರೊಂದಿಗೆ ತಂಡ ಮುನ್ನಡೆ 350ರ ಗಡಿ ದಾಟಿಸಿದರು.

ಇನ್ನು ತವರಿನ ಮೈದಾನದಲ್ಲಿ ಶ್ರೀಕರ್ ಭರತ್ ಎರಡನೇ ಇನ್ನಿಂಗ್ಸ್​ನಲ್ಲೂ ವಿಫಲರಾದರು. ಅಲ್ಲದೆ, ತಾನಾಡಿದ 12 ಟೆಸ್ಟ್​ ಇನ್ನಿಂಗ್ಸ್​ಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ದಾಖಲಿಸಿಲ್ಲ. ರವಿಚಂದ್ರನ್ ಅಶ್ವಿನ್ 29 ರನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಸೊನ್ನೆ ಸುತ್ತಿದರು. ಅಂತಿಮವಾಗಿ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ 78.3 ಓವರ್​ಗಳಲ್ಲಿ 255 ರನ್​ಗಳಿಸಿ ಆಲೌಟ್​ ಆಯಿತು.

ಇದರೊಂದಿಗೆ ಮೊದಲ ಇನ್ನಿಂಗ್ಸ್​ನ 143 ರನ್​ಗಳ ಮುನ್ನಡೆಯೂ ಸೇರಿ 398 ರನ್​ ಆಗಿದ್ದು 399 ರನ್​ಗಳ ಗುರಿ ನೀಡಿದೆ. ಮೊದಲ ಟೆಸ್ಟ್​ನ ಗೆಲುವಿನ ರೂವಾರಿಯಾಗಿದ್ದ ಟಾಮ್​ ಹಾರ್ಟ್ಲೆ 4 ವಿಕೆಟ್ ಪಡೆದರೆ, ರೆಹಾನ್ ಅಹ್ಮದ್ 3, ಜೇಮ್ಸ್ ಆಂಡರ್ಸನ್ 2, ಶೋಯೆಬ್ ಬಶೀರ್​ 1 ವಿಕೆಟ್ ಪಡೆದರು. ಆಂಗ್ಲರು ದ್ವಿತೀಯ ಪಂದ್ಯದಲ್ಲೂ ಜಯದ ನಗೆ ಬೀರುವ ವಿಶ್ವಾಸದಲ್ಲಿದ್ದಾರೆ.

ಮೊದಲ ಇನ್ನಿಂಗ್ಸ್​​ನಲ್ಲಿ ಉಭಯ ತಂಡಗಳ ಪ್ರದರ್ಶನ

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಯಶಸ್ವಿ ಜೈಸ್ವಾಲ್ ಸಿಡಿಸಿದ ದ್ವಿಶತಕದ (209) ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 396 ರನ್​ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 253 ರನ್​ಗಳಿಗೆ ಆಲೌಟ್​ ಆಯಿತು. ಜಸ್ಪ್ರೀತ್​ ಬುಮ್ರಾ ಬಿರುಗಾಳಿ ಬೌಲಿಂಗ್ ನಡೆಸಿ ಭಾರತ ತಂಡಕ್ಕೆ 143 ರನ್​​ಗಳ ಮುನ್ನಡೆ ತಂದುಕೊಟ್ಟರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ