ಹಿಂದೆ ಸರಿದ ದೀಪಕ್ ಚಹರ್, ಹೊರಬಿದ್ದ ಮೊಹಮ್ಮದ್ ಶಮಿ; ಆರ್‌ಸಿಬಿ ವೇಗಿಗೆ ಮಣೆ ಹಾಕಿದ ಬಿಸಿಸಿಐ
Dec 16, 2023 12:32 PM IST
ಮೊಹಮ್ಮದ್ ಶಮಿ, ಆಕಾಶ್ ದೀಪ್, ದೀಪಕ್ ಚಹರ್.
- IND vs SA: ವೇಗಿ ದೀಪಕ್ ಚಹಲ್ ವೈಯಕ್ತಿಕ ಕಾರಣಗಳಿಂದ ಏಕದಿನ ಸರಣಿಯಿಂದ ಸರಿದಿದ್ದಾರೆ. ಮತ್ತೊಂದೆಡೆ ಇನ್ನೂ ಫಿಟ್ ಆಗದ ಮೊಹಮ್ಮದ್ ಶಮಿ ಟೆಸ್ಟ್ ಸಿರೀಸ್ನಿಂದ ಹೊರಬಿದ್ದಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು (India vs South Africa) ಸೆಣಸಾಟ ನಡೆಸಲಿವೆ. ಮೊದಲ ಏಕದಿನ ಭಾನುವಾರ (ಡಿಸೆಂಬರ್ 17) ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದ್ದು, ಕೊನೆಯ 2 ಪಂದ್ಯಗಳು ಕ್ರಮವಾಗಿ ಡಿಸೆಂಬರ್ 19 ಮತ್ತು 21 ರಂದು ಗೆಬೆರ್ಹಾದಲ್ಲಿ ಮತ್ತು ಪರ್ಲ್‌ನಲ್ಲಿ ನಡೆಯಲಿವೆ. ಆಫ್ರಿಕಾ ವಿರುದ್ಧದ ಸರಣಿಯ ಆರಂಭಿಕ ಪಂದ್ಯಕ್ಕೂ ಮುನ್ನ 16 ಸದಸ್ಯರ ಏಕದಿನ ತಂಡದಿಂದ ವೇಗಿ ದೀಪಕ್ ಚಹರ್ (Deepak Chahar) ಹಿಂದೆ ಸರಿದಿದ್ದಾರೆ.
ಆರ್‌ಸಿಬಿ ವೇಗಿಗೆ ಮಣೆ
ಟಿ20 ಸರಣಿಗೂ ಆಯ್ಕೆಯಾಗಿ ಒಂದು ಪಂದ್ಯವನ್ನೂ ಆಡದ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್, ಕುಟುಂಬದ ವೈದ್ಯಕೀಯ ತುರ್ತುಸ್ಥಿತಿ ಕಾರಣ ಮುಂಬರುವ ಏಕದಿನ ಸರಣಿಯಿಂದ ಹಿಂದೆ ಸರಿದಿರುವ ಬಗ್ಗೆ ಬಿಸಿಸಿಐ ಪ್ರಕಟಿಸಿದೆ. ಇದು ತಂಡಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ. ಈಗ ದೀಪಕ್ ಚಹರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.
27ರ ವರ್ಷದ ಆಕಾಶ್ ದೀಪ್ ಭಾರತದ ಪರ ಈವರೆಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದು, ಕಳೆದ 2 ಆವೃತ್ತಿಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿರುವ ಆಕಾಶ್, ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ.
ಕೊನೆಯ ಎರಡು ಪಂದ್ಯಗಳಿಗೆ ಅಯ್ಯರ್ ಇಲ್ಲ
ಚಹಲ್ ಬೆನ್ನಲ್ಲೇ ಮತ್ತೊಂದು ಹಿನ್ನಡೆಯಾಗಿದೆ. ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಕೊನೆಯ 2 ಏಕದಿನ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ದೃಢಪಡಿಸಿದೆ. 29ರ ಹರೆಯದ ಬಲಗೈ ಬ್ಯಾಟರ್ 2 ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬಳಿಕ ಇಂಟರ್-ಸ್ಕ್ವಾಡ್ ಆಟದಲ್ಲಿ ಭಾಗವಹಿಸಲಿದ್ದಾರೆ.
ಅಯ್ಯರ್ ಅನುಪಸ್ಥಿತಿಯಲ್ಲಿ ರಜತ್ ಪಾಟಿದಾರ್ ಅಥವಾ ತಿಲಕ್ ವರ್ಮಾ ಗೆಬರ್ಹಾ ಮತ್ತು ಪರ್ಲ್‌ನಲ್ಲಿ ಭಾರತ ತಂಡದ ಪರ ನಂ 4 ಸ್ಥಾನದಲ್ಲಿ ಆಡಲು ಸಿದ್ಧರಾಗಿದ್ದಾರೆ. ಆರ್‌ಸಿಬಿ ಬ್ಯಾಟರ್ ಪಟಿದಾರ್ ಸಹ ಇದುವರೆಗೆ ಭಾರತಕ್ಕೆ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿಲ್ಲ. ಇದೀಗ ಈ ಸರಣಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಅಲ್ಲದೆ ರಿಂಕು ಸಿಂಗ್ ಕೂಡ ಪದಾರ್ಪಣೆ ಮಾಡಲಿದ್ದಾರೆ.
ಶಮಿ ಸರಣಿಯಿಂದ ರೂಲ್ಡ್ ಔಟ್
ಇನ್ನು ಡಿಸೆಂಬರ್ 26ರಿಂದ ಶುರುವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಬಿಸಿಸಿಐ ಪತ್ರಿಕಾ ಪ್ರಕಟಣೆ ಮೂಲಕ ಏಕದಿನ ವಿಶ್ವಕಪ್ 2023 ಹೀರೋ ಶಮಿ, ಸದ್ಯ ಫಿಟ್‌ನೆಸ್‌ಗೆ ಒಳಪಟ್ಟಿದ್ದಾರೆ. ಬಿಸಿಸಿಐ ವೈದ್ಯರ ಸಲಹೆ ಮೇರೆಗೆ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ
ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ , ಯುಜ್ವೇಂದ್ರ ಚಹಲ್, ಮುಕೇಶ್ ಕುಮಾರ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ಆಕಾಶ್ ದೀಪ್.