ಸೌತ್ ಆಫ್ರಿಕಾ ವಿರುದ್ಧ ಮೊದಲ ಏಕದಿನದಲ್ಲಿ ಭಾರತಕ್ಕೆ 8 ವಿಕೆಟ್ ಗೆಲುವು; ನಾಯಕ ರಾಹುಲ್, ಸುದರ್ಶನ್ ದಾಖಲೆ
Dec 17, 2023 07:20 PM IST
ಸಾಯಿ ಸುದರ್ಶನ್ ಬ್ಯಾಟಿಂಗ್ ವೈಖರಿ,
- IND vs SA 1st ODI: ಜೋಹಾನ್ಸ್ಬರ್ಗ್ನ ನ್ಯೂ ವಾಂಡರರ್ಸ್ ಮೈದಾನದಲ್ಲಿ ಜರುಗಿದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಯುವಕರೇ ತುಂಬಿದ್ದ ಭಾರತ ತಂಡ, ಸೌತ್ ಆಫ್ರಿಕಾ ನೆಲದಲ್ಲಿ ಭರ್ಜರಿ ಆರಂಭ ಪಡೆದಿದೆ. ಜೋಹಾನ್ಸ್ಬರ್ಗ್ನ ನ್ಯೂ ವಾಂಡರರ್ಸ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. 117 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರಾಹುಲ್ ಪಡೆ 16.4 ಓವರ್ಗಳಲ್ಲಿ ಗೆಲುವಿನ ದಡ ಸೇರಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಭಾರತದ ಬೌಲರ್ಗಳ ಮಾರದ ದಾಳಿಗೆ ತತ್ತರಿಸಿತು. ಅರ್ಷದೀಪ್ (5 ವಿಕೆಟ್) ಮತ್ತು ಆವೇಶ್ ಖಾನ್ (4 ವಿಕೆಟ್) ಅವರ ಬೆಂಕಿ-ಬಿರುಗಾಳಿ ದಾಳಿಗೆ 27.3 ಓವರ್ಗಳಲ್ಲಿ 116 ರನ್ಗಳಿಗೆ ಕುಸಿತ ಕಂಡಿತು. ಈ ಗುರಿ ಬೆನ್ನಟ್ಟಿದ ಭಾರತ, ಪದಾರ್ಪಣೆಗೈದ ಸಾಯಿ ಸುದರ್ಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ತಲಾ ಅರ್ಧಶತಕದ ನೆರವಿನಿಂದ ಗೆದ್ದು ಬೀಗಿತು.
12 ವರ್ಷಗಳ ಬಳಿಕ ಗೆದ್ದ ಭಾರತ
ಜೋಹಾನ್ಸ್ಬರ್ಗ್ನ ನ್ಯೂ ವಾಂಡರರ್ಸ್ ಮೈದಾನದಲ್ಲಿ ಭಾರತ ಕೊನೆಯದಾಗಿ ಗೆದ್ದಿದ್ದು 2012ರಲ್ಲಿ. ಅಂದು ಕೇವಲ 1 ರನ್ನಿಂದ ರೋಚಕ ಜಯ ಸಾಧಿಸಿತ್ತು. ಆ ಬಳಿಕ ಈ ಪಿಚ್ನಲ್ಲಿ ಯಾವುದೇ ಏಕದಿನ ಪಂದ್ಯವನ್ನು ಗೆದ್ದಿರಲಿಲ್ಲ. ಇದೀಗ 12 ವರ್ಷಗಳ ನಂತರ ಈ ಮೈದಾನದಲ್ಲಿ ಗೆಲುವು ದಾಖಲಿಸಿದೆ. ಅಲ್ಲದೆ, ಬಾಲ್ಗಳ ಲೆಕ್ಕಾಚಾರದಲ್ಲಿ ಇನ್ನೂ 200 ಎಸೆತಗಳು ಬಾಕಿ ಇರುವಂತೆ ಗೆದ್ದು ದಾಖಲೆ ಬರೆದಿದೆ.
ಪಿಂಕ್ ಜೆರ್ಸಿಯಲ್ಲಿ 3ನೇ ಸೋಲು
ಸ್ತನ ಕ್ಯಾನ್ಸರ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಿಂಕ್ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ, ಈ ಜೆರ್ಸಿಯಲ್ಲಿ 3ನೇ ಸೋಲು ಕಂಡಿದೆ. ಈವರೆಗೂ ಪಿಂಕ್ ಜೆರ್ಸಿ ಧರಿಸಿ 12 ಏಕದಿನ (ಇಂದಿನ ಪಂದ್ಯವು ಸೇರಿ) ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ಪೈಕಿ 3ನೇ ಬಾರಿಗೆ ಗುಲಾಬಿ ಬಣ್ಣದಲ್ಲಿ ಸೋಲಿನ ಕಹಿ ಅನುಭವಿಸಿದೆ. 2012ರಲ್ಲಿ ಆಫ್ರಿಕಾ ಮೊದಲ ಬಾರಿಗೆ ಪಿಂಕ್ ಜೆರ್ಸಿಯೊಂದಿಗೆ ಕಣಕ್ಕಿಳಿದಿತ್ತು.
ದಾಖಲೆ ಬರೆದ ರಾಹುಲ್
ಭಾರತದ ಪರ ನಾಯಕನಾಗಿ ಕೆಎಲ್ ರಾಹುಲ್, ಹೊಸ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಪಿಂಕ್ ಒಡಿಐ ಪಂದ್ಯವನ್ನು ಗೆದ್ದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಕೂಡ ಈ ಸಾಧನೆಯನ್ನು ಹರಿಣಗಳ ನಾಡಲ್ಲಿ ಮಾಡಲಾಗಲಿಲ್ಲ. ಅಲ್ಲದೆ, 2021-2022ರಲ್ಲಿ ಏಕದಿನ ಸರಣಿ ಸೋತಿದ್ದ ರಾಹುಲ್ ನಾಯಕತ್ವದ ಭಾರತ ವೈಟ್ವಾಶ್ ಆಗಿತ್ತು. ಈಗ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶ ರಾಹುಲ್ ಮುಂದಿದೆ.
ಸಾಯಿ ಸುದರ್ಶನ್ ದಾಖಲೆ
ಏಕದಿನ ಕ್ರಿಕೆಟ್ನಲ್ಲಿ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ 17ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರಂಭಿಕನಾಗಿ ಡೆಬ್ಯು ಪಂದ್ಯದಲ್ಲಿ 50 ಬಾರಿಸಿದ 4ನೇ ಭಾರತದ ಆಟಗಾರ ಎನಿಸಿದ್ದಾರೆ. ಇದಕ್ಕೂ ಮೊದಲು ರಾಬಿನ್ ಉತ್ತಪ್ಪ (86), ಕೆಎಲ್ ರಾಹುಲ್ (100), ಫಯಾಜ್ ಫಜಲ್ (55) ಆರಂಭಿಕರಾಗಿ ಪದಾರ್ಪಣೆ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು.
5 ವಿಕೆಟ್ ಪಡೆದ ಅರ್ಷದೀಪ್ ದಾಖಲೆ
ಸೌತ್ ಆಫ್ರಿಕಾ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾದ ವೇಗಿ ಅರ್ಷದೀಪ್ ಸಿಂಗ್, ಭಾರತದ ಪರ ದಾಖಲೆ ಬರೆದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ 5 ವಿಕೆಟ್ಗಳ ಗೊಂಚಲು ಪಡೆದ ಮೊದಲ ಭಾರತದ ವೇಗದ ಬೌಲರ್ ಎನಿಸಿದ್ದಾರೆ. ಸುನಿಲ್ ಜೋಶಿ, ರವೀಂದ್ರ ಜಡೇಜಾ, ಚಹಲ್ ಈ ಹಿಂದೆ 5 ವಿಕೆಟ್ ಪಡೆದ ದಾಖಲೆ ಬರೆದ ಸ್ಪಿನ್ನರ್ಗಳಾಗಿದ್ದಾರೆ.