ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸಾಯಿ ಸುದರ್ಶನ್ ಯಾರು? ನಿಮಗೆ ಗೊತ್ತಿರದ ಹಲವು ಮಾಹಿತಿ ಇಲ್ಲಿದೆ!
Dec 17, 2023 07:52 PM IST
ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್.
- Who is Sai Sudharsan: ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಜರುಗಿದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆಗೈದು ಅರ್ಧಶತಕ ಸಿಡಿಸಿ ದಾಖಲೆ ಬರೆದ ಸಾಯಿ ಸುದರ್ಶನ್ ಯಾರು? ಇಲ್ಲಿದೆ ವಿವರ
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (India vs South Africa 1st ODI) ಭರ್ಜರಿ ಜಯ ಸಾಧಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಭಾರತ, 8 ವಿಕೆಟ್ಗಳ ಜಯ ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದೆ. ಬೌಲಿಂಗ್ನಲ್ಲಿ ಅರ್ಷದೀಪ್ 5 ವಿಕೆಟ್ ಪಡೆದು ಮಿಂಚಿದರೆ, ಬ್ಯಾಟಿಂಗ್ನಲ್ಲಿ ಸಾಯಿ ಸುದರ್ಶನ್ (Sai Sudarshan) ತಮ್ಮ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದರು.
ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಜರುಗಿದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆಗೈದ ತಮಿಳುನಾಡಿನ ಯುವ ಆಟಗಾರ ಸಾಯಿ ಸುದರ್ಶನ್, ತಮ್ಮ ಹೆಸರಿಗೆ ಹಲವು ದಾಖಲೆಗಳನ್ನು ಬರೆದುಕೊಂಡರು. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ 22 ವರ್ಷದ ಯುವ ಆಟಗಾರ ಸೆಲೆಕ್ಟರ್ಗಳ ಗಮನ ಸೆಳೆದಿದ್ದರು. ಇದೀಗ ಚೊಚ್ಚಲ ಪಂದ್ಯದಲ್ಲೇ 50 ಬಾರಿಸಿ ನಂಬಿಕೆ ಉಳಿಸಿಕೊಂಡಿದ್ದಾರೆ. 43 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 55 ರನ್ ಚಚ್ಚಿದರು.
ಸಾಯಿ ಸುದರ್ಶನ್ ದಾಖಲೆ
ಪದಾರ್ಪಣೆ ಮಾಡಿದ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ 17ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಸುದರ್ಶನ್ ಪಾತ್ರರಾಗಿದ್ದಾರೆ. ಆರಂಭಿಕನಾಗಿ ಡೆಬ್ಯು ಪಂದ್ಯದಲ್ಲಿ 50 ಬಾರಿಸಿದ ಭಾರತದ 4ನೇ ಆಟಗಾರ ಎನಿಸಿದ್ದಾರೆ. ಇದಕ್ಕೂ ಮೊದಲು ರಾಬಿನ್ ಉತ್ತಪ್ಪ (86), ಕೆಎಲ್ ರಾಹುಲ್ (100), ಫಯಾಜ್ ಫಜಲ್ (55) ಆರಂಭಿಕರಾಗಿ ಪದಾರ್ಪಣೆ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು.
ಸಾಯಿ ಸುದರ್ಶನ್ ಹುಟ್ಟಿದ್ದೆಲ್ಲಿ? ಅಪ್ಪ-ಅಮ್ಮ ಯಾರು?
2001ರ ಅಕ್ಟೋಬರ್ 15ರಂದು ಚೆನ್ನೈನ ಮೈಲಾಪುರದ ವೆಂಕಟೇಶ ಅಗ್ರಹಾರದಲ್ಲಿ ಜನಿಸಿದ ಸುದರ್ಶನ್ ತಂದೆ ಆರ್ ಭಾರದ್ವಾಜ್, ತಾಯಿ ಉಷಾ ಭಾರದ್ವಾಜ್. ಸಹೋದರ ಸಾಯಿರಾಮ್ ಭಾರದ್ವಾಜ್. ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚು ಹೆಚ್ಚಿಸಿಕೊಂಡಿದ್ದ ಸುದರ್ಶನ್, ತಂದೆ-ತಾಯಿ ಕ್ರೀಡಾಪಟುಗಳು ಎಂಬುದು ವಿಶೇಷ. ಅಪ್ಪ ಅಂತರರಾಷ್ಟ್ರೀಯ ಲಾಂಗ್ ಜಂಪರ್. ಅಮ್ಮ ವಾಲಿಬಾಲ್ ಆಟಗಾರ್ತಿ. ಈಗವರು ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿದ್ದಾರೆ.
ಸುದರ್ಶನ್ ಡೊಮೆಸ್ಟಿಕ್ಟ್ ಕ್ರಿಕೆಟ್ ಸಾಧನೆ
2022ರಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಾಯಿ, ಅದಕ್ಕೂ ಮೊದಲೇ ಅಂದರೆ 2021ರಲ್ಲಿ ದೇಶೀಯ ಟಿ20 ಮತ್ತು ಲೀಸ್ಟ್ ಎ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ದರು. ಈವರೆಗೂ 12 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸುದರ್ಶನ್, 2 ಶತಕ, 3 ಅರ್ಧಶತಕ ಸಹಿತ 843 ರನ್ ಗಳಿಸಿದ್ದಾರೆ. ಇನ್ನು ದೇಶೀಯ ಏಕದಿನದಲ್ಲಿ 25 ಪಂದ್ಯಗಳಲ್ಲಿ 60.42ರ ಸರಾಸರಿಯಲ್ಲಿ 6 ಶತಕ, 4 ಅರ್ಧಶತಕ ಸಹಿತ 1269 ರನ್ ಸಿಡಿಸಿದ್ದಾರೆ.
ಐಪಿಎಲ್ನಲ್ಲಿ ಸಾಯಿ ಪ್ರದರ್ಶನ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಸುದರ್ಶನ್ ಅಬ್ಬರಿಸಿದ್ದಾರೆ. ಕಳೆದ 2 ಆವೃತ್ತಿಗಳಿಂದ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಸಾಯಿ, ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದರು. ಅಲ್ಲದೆ, ಹಲವು ಪಂದ್ಯಗಳ ರೂವಾರಿಯೂ ಆಗಿದ್ದಾರೆ. 2023ರ ಐಪಿಎಲ್ನಲ್ಲಿ ಕಣಕ್ಕಿಳಿದ 8 ಪಂದ್ಯಗಳಲ್ಲಿ ಸುದರ್ಶನ್, 362 ರನ್ ಸಿಡಿಸಿದ್ದರು. ಸಿಎಸ್ಕೆ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 47 ಎಸೆತಗಳಲ್ಲಿ 96 ರನ್ ಸಿಡಿಸಿದ್ದರು.
ಫೈನಲ್ ಪಂದ್ಯದಲ್ಲಿ ಯುವ ಆಟಗಾರ ಸುದರ್ಶನ್ 8 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿದರು. ಆದರೆ ಅವರ ಅದ್ಭುತ ಆಟಕ್ಕೆ ಗೆಲುವು ದಕ್ಕಲಿಲ್ಲ. ಸಿಎಸ್ಕೆ 5 ವಿಕೆಟ್ಗಳಿಂದ ಚಾಂಪಿಯನ್ ಆಗಿತ್ತು. ಇಲ್ಲಿಯವರೆಗೂ ಆಡಿದ 13 ಪಂದ್ಯಗಳಲ್ಲಿ 4 ಅರ್ಧಶತಕ ಸಹಿತ 507 ರನ್ ಸಿಡಿಸಿದ್ದಾರೆ. 46.09ರ ಬ್ಯಾಟಿಂಗ್ ಸರಾಸರಿ, 137.03ರ ಸ್ಟ್ರೇಕ್ರೇಟ್ನಲ್ಲಿ ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಇದೀಗ ಭಾರತ ತಂಡದ ಪರವೂ ಅದ್ಭುತ ಆರಂಭ ಪಡೆದಿರುವ ಸುದರ್ಶನ್ ಮತ್ತಷ್ಟು ಮಿಂಚಲಿ ಎಂಬುದೇ ನಮ್ಮೆಲ್ಲರ ಆಶಯ.