logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ; 5ನೇ ಪಂದ್ಯಕ್ಕೂ ಮರಳೋದು ಅನುಮಾನ

ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ; 5ನೇ ಪಂದ್ಯಕ್ಕೂ ಮರಳೋದು ಅನುಮಾನ

Jayaraj HT Kannada

Feb 07, 2024 09:39 PM IST

google News

ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ

    • India vs England: ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಮತ್ತು 4ನೇ ಟೆಸ್ಟ್ ಪಂದ್ಯಗಳಿಗೂ ವಿರಾಟ್ ಕೊಹ್ಲಿ ಅಲಭ್ಯರಾಗಲಿದ್ದಾರೆ. ಆ ಬಳಿಕ ಐದನೇ ಟೆಸ್ಟ್‌ ಪಂದ್ಯಕ್ಕೂ ಮರಳುವ ಬಗ್ಗೆ ಖಚಿತವಾಗಿಲ್ಲ. ಫೆಬ್ರವರಿ 15ರಂದು ರಾಜ್‌ಕೋಟ್‌ನಲ್ಲಿ ಮೂರನೇ ಟೆಸ್ಟ್ ನಡೆಯಲಿದೆ. ರಾಂಚಿಯಲ್ಲಿ 4ನೇ ಟೆಸ್ಟ್ ಪಂದ್ಯ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ
ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ (BCCI-X)

ಭಾರತ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ (Virat Kohli), ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ (India vs England) ಪಂದ್ಯಗಳಿಗೆ ಮರಳುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಭಾರತದ ಮಾಜಿ ನಾಯಕ ಕೊಹ್ಲಿ, ವೈಯಕ್ತಿಕ ಕಾರಣಗಳಿಂದಾಗಿ ಬೆನ್‌ ಸ್ಟೋಕ್ಸ್‌ ನೇತೃತ್ವದ ಆಂಗ್ಲರ್ ಬಳಗದ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ವಿರಾಟ್ ಅನುಪಸ್ಥಿತಿಯಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲು ಹಾಗೂ ಗೆಲುವನ್ನು ಅನುಭವಿಸಿದೆ. ಸದ್ಯ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ.

ವೈಯಕ್ತಿಕ ಕಾರಣಗಳಿಂದಾಗಿ, ಜನವರಿ 22 ರಂದು ಹೈದರಾಬಾದ್‌ನಲ್ಲಿ ಆರಂಭವಾದ ಸರಣಿಯ ಮೊದಲ ಪಂದ್ಯಕ್ಕೂ ಮೂರು ದಿನ ಮುಂಚಿತವಾಗಿ ಆರ್‌ಸಿಬಿ ಆಟಗಾರ ತಂಡದಿಂದ ಹೊರ ನಡೆದರು. ಟೀಮ್‌ ಇಂಡಿಯಾ ಮಾಜಿ ನಾಯಕನ ನಿರ್ಗಮನದ ಬಗ್ಗೆ ಗೌಪ್ಯತೆ ಕಾಪಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಾಧ್ಯಮಗಳು ಮತ್ತು ಅಭಿಮಾನಿಗಳಲ್ಲಿ ವಿನಂತಿಸಿತು. ಈ ನಡುವೆ ವಿರಾಟ್‌ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ ಎಂದು ಎಬಿ ಡಿವಿಲಿಯರ್ಸ್‌ ಹೇಳಿಕೆ ನೀಡಿದ್ದು, ವಿರಾಟ್‌ ಕಂಬ್ಯಾಕ್‌ ಮತ್ತೆ ತಡವಾಗುವ ಬಗ್ಗೆ ಅಭಿಮಾನಿಗಳಿಗೂ ಅನುಮಾನವಿತ್ತು.

ಇದನ್ನೂ ಓದಿ | ವಿಶಾಖಪಟ್ಟಣ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತ ತೊರೆದ ಇಂಗ್ಲೆಂಡ್; 3ನೇ ಟೆಸ್ಟ್‌ಗೂ ಮುನ್ನ ಸ್ಟೋಕ್ಸ್ ಪಡೆ ಹೋಗಿದ್ದೆಲ್ಲಿ?

ಇದೀಗ ಇಂಗ್ಲೆಂಡ್ ವಿರುದ್ಧದ 3 ಮತ್ತು 4ನೇ ಟೆಸ್ಟ್ ಪಂದ್ಯಗಳಿಗೂ ಕೊಹ್ಲಿ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಎಸ್‌ಪಿಎನ್ ಕ್ರಿಕ್ಇನ್ಫೋ ಮಾಡಿರುವ ವರದಿಯ ಪ್ರಕಾರ, ರಾಜ್‌ಕೋಟ್ ಮತ್ತು ರಾಂಚಿ ಟೆಸ್ಟ್‌ಗಳಿಂದಲೂ ಕೊಹ್ಲಿ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಸರಣಿಯ ಮೊದಲ ಎರಡು ಪಂದ್ಯಗಳಿಂದ ಕೊಹ್ಲಿ ಹೊರಗುಳಿದಿದ್ದರಿಂದ, ಅವರ ಬದಲಿಯಾಗಿ ರಜತ್ ಪಾಟೀದಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಯ್ತು. ವಿರಾಟ್‌ ಅನುಪಸ್ಥಿತಿ ನಡುವೆಯೇ, ಗಾಯದಿಂದಾಗಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಮಾಜಿ ಉಪನಾಯಕ ಕೆಎಲ್ ರಾಹುಲ್ ಕೂಡಾ ತಂಡದಿಂದ ಹೊರಬಿದ್ದರು.

ಇದನ್ನೂ ಓದಿ | ಇಂಗ್ಲೆಂಡ್ ಬಜ್‌ಬಾಲ್ ತಂತ್ರದಿಂದ ಭಾರತದಲ್ಲಿ ಟೆಸ್ಟ್ ಪಂದ್ಯ ನೋಡಲು ಅಭಿಮಾನಿಗಳು ಬರುತ್ತಿದ್ದಾರೆ; ಇಯಾನ್ ಬೋಥಮ್

ಐದನೇ ಟೆಸ್ಟ್‌ಗೂ ಕೊಹ್ಲಿ ಮರಳೋದು ಡೌಟ್

ದ್ವಿಪಕ್ಷೀಯ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದಲ್ಲೂ ಕೊಹ್ಲಿ ಆಡುವ ಬಗ್ಗೆ ಅನುಮಾನಗಳಿವೆ ಎಂದು ವರದಿ ಹೇಳಿದೆ. ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಫೆಬ್ರವರಿ 15ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಂಚಿಯಲ್ಲಿ 4ನೇ ಟೆಸ್ಟ್ ಪಂದ್ಯ ನಡೆಯಲಿದೆ. ಆ ಬಳಿಕ ಮಾರ್ಚ್ 7ರಂದು ಧರ್ಮಶಾಲಾದಲ್ಲಿ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.‌ ಇದೀಗ ಈ ಪಂದ್ಯಕ್ಕೂ ವಿರಾಟ್‌ ಮರಳುವುದು ಅನುಮಾನ ಎನ್ನಲಾಗಿದೆ.

ರಾಹುಲ್ ಮತ್ತು ಜಡೇಜಾ

ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಗಾಯಾಳುಗಳಾದ ಜಡೇಜಾ ಮತ್ತು ಕೆಎಲ್ ರಾಹುಲ್ ಅವರ ಫಿಟ್ನೆಸ್ ಕುರಿತು ಬಿಸಿಸಿಐ ಮೇಲ್ವಿಚಾರಣೆ ಮಾಡುತ್ತಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಜಡೇಜಾ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಸರಣಿಯ ಆರಂಭಿಕ ಪಂದ್ಯದ ನಂತರ ರಾಹುಲ್ ತಮ್ಮ ಬಲಗಾಲಿನ ನೋವಿನ ಬಗ್ಗೆ ದೂರು ನೀಡಿದರು. ಹೀಗಾಗಿ ಮುಂಬೈ ಬ್ಯಾಟರ್‌ ಸರ್ಫರಾಜ್ ಖಾನ್, ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಂಡ ಸೇರಿಕೊಂಡಿದ್ದಾರೆ.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ