logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಲ್ಲ, ನನಗೆ ಖುಷಿಯಾಗಿಲ್ಲ; ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಕುರಿತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಪ್ರತಿಕ್ರಿಯೆ

ಇಲ್ಲ, ನನಗೆ ಖುಷಿಯಾಗಿಲ್ಲ; ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಕುರಿತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಪ್ರತಿಕ್ರಿಯೆ

Jayaraj HT Kannada

Jun 22, 2024 02:45 PM IST

google News

ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಕುರಿತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಪ್ರತಿಕ್ರಿಯೆ

    • ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ‌ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಕುರಿತು ವಿವರವಾಗಿ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಕುರಿತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಪ್ರತಿಕ್ರಿಯೆ
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಕುರಿತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಪ್ರತಿಕ್ರಿಯೆ (PTI)

ಟಿ20 ವಿಶ್ವಕಪ್‌ ಸೂಪರ್‌ 8 ಹಂತದಲ್ಲಿ ಭಾರತ ಕ್ರಿಕೆಟ್‌ ತಂಡದ ಇಂದಿನ ಎದುರಾಳಿ ಬಾಂಗ್ಲಾದೇಶ (India vs Bangladesh). ಟೂರ್ನಿಯಲ್ಲಿ ಇಲ್ಲಿಯವರೆಗೆ ಅಜೇಯ ಓಟ ಮುಂದುವರೆಸಿರುವ ತಂಡವು, ಏಷ್ಯಾದ ಎದುರಾಳಿಯ ವಿರುದ್ಧವೂ ಸುಲಭ ಜಯ ಸಾಧಿಸಿ ಸೆಮಿಫೈನಲ್‌ ಹಂತಕ್ಕೇರುವ ಗುರಿ ಹಾಕಿಕೊಂಡಿದೆ. ಆದರೆ ಪಂದ್ಯಾವಳಿಯುದ್ದಕ್ಕೂ ರನ್‌ ಗಳಿಸಲು ಹೆಣಗಾಡುತ್ತಿರುವ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಫಾರ್ಮ್‌ ತಂಡದ ದೊಡ್ಡ ಚಿಂತೆಯಾಗಿದೆ. ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ವಿರುದ್ಧ ಭಾರತ ಜಯಗಳಿಸಿದರೂ, ಅಲ್ಲಿ ವಿರಾಟ್‌ ಬ್ಯಾಟ್‌ ಸದ್ದು ಮಾಡಲಿಲ್ಲ. ಮೊದಲು ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಐದು ರನ್‌ ಮಾತ್ರ ಗಳಿಸಿ ಎರಡಂಕಿ ಮೊತ್ತ ದಾಟಲು ವಿಫಲರಾದರು. ಆ ಬಳಿಕ ಅಫ್ಘಾನಿಸ್ತಾನ ವಿರುದ್ಧ ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ ಎಸೆತಕ್ಕೊಂದರಂತೆ 24 ರನ್ ಪೇರಿಸಿ ಔಟಾದರು.

ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಭಾರತದ ಬ್ಯಾಟಿಂಗ್ ದಿಗ್ಗಜ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆರಂಭಿಕರಾಗಿ ಯಶಸ್ಸು ಗಳಿಸಿರುವ ವಿರಾಟ್‌, ವಿಶ್ವಕಪ್‌ನಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿದ್ದಾರೆ. ಇದು ಅಭಿಮಾನಿಗಳ ವಿರೋಧಕ್ಕೂ ಕಾರಣವಾಗಿದೆ. ವಿರಾಟ್‌ ಅವರನ್ನು ಅವರ ಸಾಂಪ್ರದಾಯಿಕ ಮೂರನೇ ಕ್ರಮಾಂಕಕ್ಕೆ ಕಳುಹಿಸಿ, ಯಶಸ್ವಿ ಜೈಸ್ವಾಲ್‌ ಅವರನ್ನು ಆರಂಭಿಕರಾಗಿ ಆಡಿಸಬೇಕು ಎಂಬುದು ಅಭಿಮಾನಿಗಳ ಒತ್ತಾಯ. ಆದರೆ, ವಿರಾಟ್‌ ಟೂರ್ನಿಯ ಮುಂದಿನ ಪಂದ್ಯಗಳಲ್ಲೂ ಅಗ್ರಕ್ರಮಾಂಕದಲ್ಲೇ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮಾತನಾಡಿದ್ದು, ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿಯ ಫಾರ್ಮ್ ಕುರಿತು ಹೇಳಿಕೊಂಡಿದ್ದಾರೆ. ರಾಥೋಡ್ ಅವರ ಪ್ರಕಾರ ಕೊಹ್ಲಿ ಮುಂದೆ ಸವಾಲು ಇದೆ. ಆದರೆ ಅವರ ನಿಧಾನಗತಿಯ ಆಟವು ತಂಡದಲ್ಲಿ ಕಡಿಮೆ ಅನುಭವ ಹೊಂದಿರುವ ಆಟಗಾರರಿಗೆ ತಂಡಕ್ಕೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತಿದೆ.

“ವಿರಾಟ್‌ ಫಾರ್ಮ್‌ನಿಂದ ನಾನಂತೂ ಸಂತೋಷವಾಗಿಲ್ಲ. ಅವರು ಹೆಚ್ಚು ರನ್ ಗಳಿಸಿದರೆ ನಾನು ಅದನ್ನು ಇಷ್ಟಪಡುತ್ತೇನೆ,” ಎಂದು ತಂಡದ ಅಜೇಯ ಓಟದ ಬಗ್ಗೆ ರಾಥೋಡ್‌ ಹೇಳಿದರು.

ಯುವ ಆಟಗಾರರಿಗೆ ಅವಕಾಶ ಸಿಗುತ್ತಿದೆ

“ಆದರೆ ಹೌದು, ಕೆಲವೊಮ್ಮೆ ಸಮಯವು ನಮಗೆ ಸವಾಲು ಹಾಕುತ್ತದೆ. ಅದು ಒಳ್ಳೆಯದೇ. ಭಾರತ ತಂಡದಲ್ಲಿ ಹೆಚ್ಚು ಬ್ಯಾಟಿಂಗ್ ಅವಕಾಶ ಪಡೆಯದ ಆಟಗಾರರು ಇಂದು ರನ್‌ ಕಲೆ ಹಾಕುತ್ತಿದ್ದಾರೆ. ನಮ್ಮ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಅವಕಾಶ ಸಿಕ್ಕಿದೆ. ಅದನ್ನು ನೋಡುವುದು ಖುಷಿಯಾಗುತ್ತಿದೆ,” ಎಂದು ಅವರು ಹೇಳಿದ್ದಾರೆ.

ಕೊನೆಯ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಭಾರತದ‌ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ತಂಡದ ಮುಂದೆ ಇನ್ನೂ ಪಂದ್ಯಗಳು ಉಳಿದಿವೆ. ಬಾಂಗ್ಲಾದೇಶದ ಬಳಿಕ ಸೋಮವಾರ ತಂಡವು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಹೀಗಾಗಿ ಮುಂದೆ ವಿರಾಟ್‌ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದರೂ ಅಚ್ಚರಿಯಿಲ್ಲ. ಟೂರ್ನಿಯಲ್ಲಿ ಈವರೆಗೆ ನಡೆದ ಪಂದ್ಯಗಳ ಬಳಿಕ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ ಅಗ್ರ 15ರಲ್ಲಿ ಭಾರತದ ಯಾವ ಆಟಗಾರರೂ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ