ಅಂಡರ್ 19 ವಿಶ್ವಕಪ್; ಸೆಮಿಫೈನಲ್‌ನಲ್ಲಿ ಆತಿಥೆಯ ದಕ್ಷಿಣ ಆಫ್ರಿಕಾ ಮಣಿಸಿ ಫೈನಲ್‌ಗೆ ಜಿಗಿದ ಭಾರತ
Feb 06, 2024 11:00 PM IST
ಆತಿಥೆಯ ದಕ್ಷಿಣ ಆಫ್ರಿಕಾ ಮಣಿಸಿ ಫೈನಲ್‌ಗೆ ಜಿಗಿದ ಭಾರತ
- ICC under 19 ODI world cup 2024: ಉದಯ್ ಸಹರಾನ್ ಮತ್ತು ಸಚಿನ್ ದಾಸ್ ಐದನೇ ವಿಕೆಟ್‌ಗೆ ದಾಖಲೆಯ 171 ರನ್‌ಗಳ ಜೊತೆಯಾಟವಾಡಿದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಆ ಮೂಲಕ ಐದು ಬಾರಿಯ ಚಾಂಪಿಯನ್ ಭಾರತ ಅಂಡರ್ 19 ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿ ಅಂಡರ್ 19 ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಅಂಡರ್ 19 ವಿಶ್ವಕಪ್‌ನಲ್ಲಿ (ICC under 19 ODI World Cup 2024) ಭಾರತ ಕ್ರಿಕೆಟ್ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಸೆಮಿ ಫೈನಲ್ (India U19 vs South Africa U19) ಪಂದ್ಯದಲ್ಲಿ 2 ವಿಕೆಟ್ ಅಂತರಲ್ಲಿ ಗೆದ್ದ ಉದಯ್ ಸಹರಾನ್ ಬಳಗವು, ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ಗೆ ಮುನ್ನುಗ್ಗಿದೆ.
ದಕ್ಷಿಣ ಆಫ್ರಿಕಾದ ಬೆನ್ನೋಯಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು, ಹರಿಣಗಳನ್ನು ಬ್ಯಾಟಿಂಗ್‌ಗೆ ಇಳಿಸಿತು. ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್ ನಷ್ಟಕ್ಕೆ 244 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತವು, ಆರಂಭಿಕ ಆಘಾತದ ನಡುವೆಯೂ ಅಬ್ಬರಿಸಿ ರೋಚಕ ಗೆಲುವು ಸಾಧಿಸಿತು. 48.5 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿ ಗುರಿ ಸಾಧಿಸಿತು.
ಇದನ್ನೂ ಓದಿ | ಬೆನ್ ಸ್ಟೋಕ್ಸ್ ರನೌಟ್ ಬಳಿಕ ಶ್ರೇಯಸ್ ಅಯ್ಯರ್ ಸನ್ನೆ ಮಾಡಿದ್ದೇಕೆ; ಸೇಡಿನ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಶರ್ಮಾ
ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಚೇಸಿಂಗ್ ನಡೆಸಿದ ಭಾರತವು, ಒಂದು ಹಂತದಲ್ಲಿ 32 ರನ್ ವೇಳೆಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ನಾಯಕ ಉದಯ್ ಸಹಾರನ್ ಹಾಗೂ ಸಚಿನ್ ದಾಸ್ ಅಮೋಘ ಜೊತೆಯಾಟವು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಇವರಿಬ್ಬರೂ ಐದನೇ ವಿಕೆಟ್‌ಗೆ ದಾಖಲೆಯ 171 ರನ್‌ಗಳ ಜೊತೆಯಾಟವಾಡಿದರು. ಈ ಜೋಡಿಯ ಪ್ರಬುದ್ಧ ಆಟವು, ಆತಿಥೇಯರ ನೆಲದಲ್ಲಿ ದಕ್ಷಿಣ ಆಫ್ರಿಕಾಗೆ ಸೋಲುಣಿಸುವಲ್ಲಿ ನೆರವಾಯ್ತು.
ಭಾರತ 33.3 ಓವರ್‌ಗಳಲ್ಲಿ 150 ರನ್‌ಗಳ ಗಡಿ ದಾಟಿತು. ನಾಯಕ ಸಹರಾನ್ ಬೌಂಡರಿ ನೆರವಿನಿಂದ 40.4 ಓವರ್‌ಗಳಲ್ಲಿ ತಂಡವು 200 ರನ್‌ಗಳ ಗಡಿ ದಾಟಿ ಗೆಲುವಿನ ಸನಿಹ ಬಂತು. 95 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 96 ರನ್ ಗಳಿಗಸಿದ ದಾಸ್, ಔಟಾಗುವುದರೊಂದಿಗೆ ಭಾರತವು 42.1 ಓವರ್‌ಗಳಲ್ಲಿ 203 ರನ್ ವೇಳೆಗೆ 5 ವಿಕೆಟ್ ಕಳೆದುಕೊಂಡಿತು.
ಅಂತಿಮ ಐದು ಓವರ್‌ಗಳಲ್ಲಿ ಭಾರತದ ಗೆಲುವಿಗೆ ಕೇವಲ 28 ರನ್‌ಗಳ ಅಗತ್ಯವಿತ್ತು. ಈ ವೇಳೆ ಅರವೆಲ್ಲಿ ಅವನೀಶ್ 10 ರನ್ ಗಳಿಸಿದ್ದಾಗ ಮಫಂಕ ಎಸೆತದಲ್ಲಿ ಔಟಾದರು. ಮುರುಗನ್ ಅಭಿಷೇಕ್ ಕೂಡ ರನ್ ಔಟ್ ಆಗಿ ನಿರಾಶೆ ಮೂಡಿಸಿದರು. 47.2 ಓವರ್‌ಗಳಲ್ಲಿ 227 ರನ್‌ಗೆ 7 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟ ಅನುಭವಿಸಿತು. ಆಗ ತಂಡದ ಭರವಸೆ ನಾಯಕನ ಮೇಲಿತ್ತು.
ಇದನ್ನೂ ಓದಿ | ಮುಂಬೈ ನಾಯಕತ್ವದಿಂದ ರೋಹಿತ್ ಕೆಳಗಿಳಿಸಲು ಬೌಚರ್ ಸಮರ್ಥನೆ ತಳ್ಳಿ ಹಾಕಿದ ರಿತಿಕಾ; ರೋಹಿತ್ ಪತ್ನಿ ಹೊಸ ಬಾಂಬ್
ರಾಜ್ ಲಿಂಬಾನಿ ಬೃಹತ್ ಸಿಕ್ಸರ್‌ನೊಂದಿಗೆ ತಂಡದ ಒತ್ತಡವನ್ನು ಕಡಿಮೆ ಮಾಡಿದರು. ಭಾರತವು ಅಂತಿಮ ಎರಡು ಓವರ್‌ಗಳಲ್ಲಿ ಒಂಬತ್ತು ರನ್ ಗುರಿ ಪಡೆಯಿತು. ತಂಡದ ಗೆಲುವಿಗೆ ಕೇವಲ ಒಂದು ರನ್ ಅಗತ್ಯವಿದ್ದಾಗ, ನಾಯಕ ಸಹರಾನ್ 124 ಎಸೆತಗಳಲ್ಲಿ 81 ರನ್ ಗಳಿಸಿ ಅಚ್ಚರಿಯ ರೀತಿಯಲ್ಲಿ ರನೌಟ್ ಆದರು. ಆದರೆ, ರಾಜ್ ಲಿಂಬಾನಿ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಡಗೌಟ್‌ನಲ್ಲಿದ್ದ ಭಾರತ ತಂಡದ ಎಲ್ಲಾ ಆಟಗಾರರು ಮೈದಾನಕ್ಕೆ ಓಡಿ ಬಂದು ಸಂಭ್ರಮಿಸಿದರು.
ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ
ಭಾರತ ತಂಡವು ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಅಥವಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ವಿಲೋಮೂರ್ ಪಾರ್ಕ್‌ನಲ್ಲಿ ಫೆಬ್ರವರಿ 8ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡದೊಂದಿಗೆ ಫೆಬ್ರವರಿ 11ರ ಭಾನುವಾರ ಭಾರತ ತಂಡವು ವಿಶ್ವಕಪ್‌ಗಾಗಿ ಕಾದಾಡಲಿದೆ.
ಭಾರತ ತಂಡ
ಉದಯ್ ಸಹರಾನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರವೆಲ್ಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಸೌಮಿ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ ಮತ್ತು ನಮನ್ ತಿವಾರಿ.