logo
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ವಿರುದ್ಧ 2ನೇ ಟಿ20ಐ ಪಂದ್ಯದಲ್ಲೂ ಭಾರತಕ್ಕೆ ಗೆಲುವು; ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ

ಶ್ರೀಲಂಕಾ ವಿರುದ್ಧ 2ನೇ ಟಿ20ಐ ಪಂದ್ಯದಲ್ಲೂ ಭಾರತಕ್ಕೆ ಗೆಲುವು; ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ

Prasanna Kumar P N HT Kannada

Jul 29, 2024 12:13 AM IST

google News

ಶ್ರೀಲಂಕಾ ವಿರುದ್ಧ 2ನೇ ಟಿ20ಐ ಪಂದ್ಯದಲ್ಲೂ ಭಾರತಕ್ಕೆ ಗೆಲುವು; ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ

    • India beat Sri Lanka: ಪಲ್ಲೆಕೆಲ್ಲೆ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟಿ20ಐ ಪಂದ್ಯದಲ್ಲೂ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧ 7 ವಿಕೆಟ್​​ಗಳ ಜಯ ಸಾಧಿಸಿದೆ.
ಶ್ರೀಲಂಕಾ ವಿರುದ್ಧ 2ನೇ ಟಿ20ಐ ಪಂದ್ಯದಲ್ಲೂ ಭಾರತಕ್ಕೆ ಗೆಲುವು; ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ
ಶ್ರೀಲಂಕಾ ವಿರುದ್ಧ 2ನೇ ಟಿ20ಐ ಪಂದ್ಯದಲ್ಲೂ ಭಾರತಕ್ಕೆ ಗೆಲುವು; ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ

ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಭಾರತ ತಂಡ, ಶ್ರೀಲಂಕಾ ವಿರುದ್ಧದ 2ನೇ ಟಿ20ಐ ಪಂದ್ಯದಲ್ಲೂ ಡಕ್ವರ್ಥ್ ಲೂಯಿಸ್ ನಿಯಮದಡಿ 7 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಆ ಮೂಲಕ ನೂತನ ಕೋಚ್ ಗೌತಮ್ ಗಂಭೀರ್​ ಮತ್ತು ನೂತನ ನಾಯಕ ಸೂರ್ಯಕುಮಾರ್ ಯಾದವ್ ಅವರು ತಮ್ಮ ಚೊಚ್ಚಲ ಪರೀಕ್ಷೆಯಲ್ಲೇ ಪಾಸ್ ಆಗಿದ್ದಾರೆ.

ಪಲ್ಲೆಕೆಲ್ಲೆ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಎರಡನೇ ಟಿ20ಐಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ತನ್ನ ಪಾಲಿನ 20 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್​ಗಳಿಸಲಷ್ಟೇ ಶಕ್ತವಾಯಿತು. ಭಾರತದ ಬೌಲರ್​​​ಗಳು ಲಂಕಾ ಬ್ಯಾಟರ್​ಗಳ ಮೇಲೆ ದಂಡಯಾತ್ರೆ ನಡೆಸಿದರು. ಆದರೆ ಭಾರತ ಇನ್ನಿಂಗ್ಸ್​ ಆರಂಭಿಸಿದ ಬೆನ್ನಲ್ಲೇ ಮಳೆ ಅಡಚಣೆ ಉಂಟು ಮಾಡಿತು. ಒಂದು ಗಂಟೆ ಕಾಲ ಮಳೆ ಸುರಿಯಿತು.

9:35ಕ್ಕೆ ಶುರುವಾದ ಮಳೆ 10.40ಕ್ಕೆ ನಿಂತಿತು. ಹೀಗಾಗಿ ಡಿಎಲ್​ಎಸ್​ ನಿಯಮದಡಿ ಓವರ್​​​ಗಳ ಕಡಿತ ಮಾಡಿ 8 ಓವರ್​​​ಗಳಲ್ಲಿ 78 ರನ್​​ ಗುರಿ ನೀಡಲಾಯಿತು. ಭಾರತ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಭಾರತ ಇನ್ನೂ 9 ಎಸೆತಗಳನ್ನು ಬಾಕಿ ಉಳಿಸಿಯೇ ಗೆಲುವಿನ ದಡ ಸೇರಿತು. ಭಾರತ 6.3 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತು.

ಭಾರತೀಯ ಬೌಲರ್​​ಗಳ ಪರಾಕ್ರಮ

ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ, ಆರಂಭಿಕ ಆಘಾತ ಎದುರಸಿತು. ಕುಸಾಲ್ ಮೆಂಡಿಸ್ (10) ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಪಾಥುಮ್ ನಿಸ್ಸಾಂಕ ನಿಧಾನವಾಗಿ ಬ್ಯಾಟ್ ಬೀಸಿ 32 ರನ್ ಕಲೆ ಹಾಕಿದರು. ನಂತರ ಕುಸಾಲ್ ಪೆರೇರಾ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಅಲ್ಲದೆ ಅರ್ಧಶತಕವನ್ನೂ ಸಿಡಿಸಿದರು. 34 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ ಸಹಿತ 54 ರನ್ ಗಳಿಸಿದರು. ಕಮಿಂದು ಮೆಂಡಿಸ್ (26) ಮತ್ತು ನಾಯಕ ಚರಿತ್ ಅಸಲಂಕಾ (14) ತಂಡಕ್ಕೆ ಆಸರೆಯಾಗಲಿಲ್ಲ.

ಅರ್ಷದೀಪ್ ಮತ್ತು ಹಾರ್ದಿಕ್ ತಲಾ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ 3 ವಿಕೆಟ್ ಕಬಳಿಸಿ ಲಂಕಾ ಕುಸಿತಕ್ಕೆ ಕಾರಣರಾದರು. ನಿಸ್ಸಾಂಕರನ್ನು ಔಟ್ ಮಾಡಿದ್ದ ಬಿಷ್ಣೋಯ್, ದಸುನ್ ಶನಕ ಮತ್ತು ವನಿಂದು ಹಸರಂಗ ಅವರನ್ನು ಡಕೌಟ್ ಮಾಡಿದರು. ಆ ಮೂಲಕ ಕೆಳ ಕ್ರಮಾಂಕದ ಬ್ಯಾಟರ್​ಗಳು ಅಬ್ಬರಿಸದಂತೆ ನೋಡಿಕೊಂಡರು. ರಮೇಶ್ ಮೆಂಡೀಸ್ 12 ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​​ನಲ್ಲಿ ಸ್ಟಂಪೌಟ್ ಆದರು. ಅಕ್ಷರ್ ಸಹ 2 ವಿಕೆಟ್ ಕಿತ್ತರು.

ಅಬ್ಬರಿಸಿದ ಭಾರತೀಯ ಬ್ಯಾಟರ್ಸ್​

8 ಓವರ್​​ಗಳಲ್ಲಿ 78 ರನ್ ಗುರಿ ಬೆನ್ನಟ್ಟಿದ ಭಾರತದ ಬ್ಯಾಟರ್ಸ್​, ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಶುಭ್ಮನ್ ಗಿಲ್ ಅಲಭ್ಯತೆಯಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್​ ಗೋಲ್ಡನ್ ಡಕ್ ಆಗುವ ಮೂಲಕ ತೀವ್ರ ನಿರಾಸೆ ಮೂಡಿಸಿದರು. ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 30 ರನ್ ಚಚ್ಚಿದರೆ, ಸೂರ್ಯಕುಮಾರ್ 12 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 24 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 9 ಬಾಲ್​​ಗಳಲ್ಲಿ 3 ಬೌಂಡರಿ, 1 ಸಿಕ್ಸರ್​ನೊಂದಿಗೆ 22 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ