IND vs NZ: ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ರೋಹಿತ್ ಬೌಲಿಂಗ್ ಆಯ್ಕೆ; ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ
Oct 22, 2023 01:50 PM IST
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ.
- India vs New Zealand, ICC Cricket World Cup 2023: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 21ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಸೋಲಿಲ್ಲದ ಸರದಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್ ಮತ್ತು ಭಾರತ ತಂಡಗಳು ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 5ನೇ ಗೆಲುವಿಗೆ ಸಿದ್ಧವಾಗಿವೆ. ಸದ್ಯ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯವು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿದೆ.
ಭಾರತ ತಂಡದಲ್ಲಿ ಮಹತ್ವದ ಬದಲಾವಣೆ
ಭಾರತ ತಂಡದಲ್ಲಿ ಮಹತ್ವದ ಎರಡು ಬದಲಾವಣೆಯಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲಿನ ಗಾಯದ ಸಮಸ್ಯೆಗೆ ಒಳಗಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮತ್ತೊಬ್ಬ ಆಟಗಾರ ಶಾರ್ದೂಲ್ ಠಾಕೂರ್ ಅವರ ಬದಲಿಗೆ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
20 ವರ್ಷಗಳಿಂದ ಭಾರತ ಗೆದ್ದಿಲ್ಲ
ಐಸಿಸಿ ಟೂರ್ನಮೆಂಟ್ಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಮೇಲುಗೈ ಸಾಧಿಸುತ್ತಲೇ ಬಂದಿದೆ. ಮೂರು ಫಾರ್ಮೆಂಟ್ಗಳಲ್ಲೂ ಕಿವೀಸ್ ಎದುರು ಗೆಲುವು ಸಾಧಿಸಲು ವಿಫಲವಾಗುತ್ತಿದೆ. 2003ರ ಬಳಿ ಐಸಿಸಿ ಈವೆಂಟ್ಗಳಲ್ಲಿ ಒಟ್ಟು 6 ಬಾರಿ ಮುಖಾಮುಖಿಯಾಗಿದ್ದು, 5ರಲ್ಲಿ ಕಿವೀಸ್ ಜಯಿಸಿದೆ. 1 ಪಂದ್ಯ ರದ್ದು. 2019ರಲ್ಲೂ ಸೆಮಿಫೈನಲ್ನಲ್ಲೂ ಭಾರತವನ್ನು ಸೋಲಿಸಿ ನೂರಾರು ಕೋಟಿ ಭಾರತೀಯರ ಕನಸಿಗೆ ಕೊಳ್ಳಿ ಇಟ್ಟಿತ್ತು. ಇದೀಗ ಆ ಸೇಡು ತೀರಿಸಿಕೊಳ್ಳಲು ಇದೊಳ್ಳೆ ಸದಾವಕಾಶ.
ಹೆಚ್ಪಿಸಿಎ ಮೈದಾನದಲ್ಲಿ ಏಕದಿನ ದಾಖಲೆಗಳು
- ಒಟ್ಟು ಪಂದ್ಯಗಳು - 07
- ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 03
- ಎರಡನೇ ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 04
- ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ - 231
- ಎರಡನೇ ಇನ್ನಿಂಗ್ಸ್ ಸರಾಸರಿ ಮೊತ್ತ - 199
- ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ - 364/9
ಈ ಮೈದಾನದಲ್ಲಿ ದಾಖಲಾದ ಕನಿಷ್ಠ ಮೊತ್ತ - 112/10
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್ ತಂಡ
ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.