IBSA World Games: ಪಾಕಿಸ್ತಾನದ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತ ಪುರುಷ ಅಂಧರ ಕ್ರಿಕೆಟ್ ತಂಡ
Aug 27, 2023 09:29 AM IST
ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತ ಪುರುಷ ಅಂಧರ ಕ್ರಿಕೆಟ್ ತಂಡ.
- IBSA World Games 2023: ಐಬಿಎಸ್ಎ ವಿಶ್ವ ಕ್ರೀಡಾಕೂಟದ ಭಾರತ ಪುರುಷರ ಅಂಧರ ಕ್ರಿಕೆಟ್ ತಂಡವು, ಬೆಳ್ಳಿ ಪದಕ ಗೆದ್ದಿದೆ. ಆಗಸ್ಟ್ 26, ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದ ಕಾರಣ ಚಿನ್ನ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು.
ಇಂಟರ್ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (IBSA) ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡವು ಚಿನ್ನದ ಪದಕ ಗೆದ್ದರೆ, ಆಗಸ್ಟ್ 26ರ ಶನಿವಾರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತ ಭಾರತ ಅಂಧರ ತಂಡವು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದೆ. ಮತ್ತೊಂದೆಡೆ ಗೆದ್ದ ಪಾಕಿಸ್ತಾನ ಐತಿಹಾಸಿಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಪದಕ ಸುತ್ತಿನ ಅಂತಿಮ ಹೋರಾಟದಲ್ಲಿ ಭಾರತ ತಂಡವು ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್ಗಳಲ್ಲಿ 184 ರನ್ ಗಳಿಸಿತು. ಆದರೆ ಈ ಸವಾಲಿನ ಗುರಿ ಹಿಂಬಾಲಿಸಿದ ಪಾಕಿಸ್ತಾನ ಕೇವಲ ತನ್ನ 2 ವಿಕೆಟ್ ಕಳೆದುಕೊಂಡು ಜಯದ ಗೆರೆ ದಾಟಿತು. ಇದರೊಂದಿಗೆ ಭಾರತದ ಚಿನ್ನದ ಕನಸು ಭಗ್ನಗೊಂಡಿತು. ಅಲ್ಲದೆ, ಲೀಗ್ ಹಂತದ ಸೋಲಿನ ಸೇಡು ತೀರಿಸಿಕೊಳ್ಳಲೂ ವಿಫಲವಾಯಿತು.
ಇನ್ನಿಂಗ್ಸ್ ಆರಂಭಿಸಿದ ಭಾರತ ಪುರುಷರ ಅಂಧರ ತಂಡವು ಅದ್ಭುತ ಆರಂಭ ಪಡೆಯಿತು. ವಿಆರ್ ದುನ್ನಾ ಮತ್ತು ಡಿಆರ್ ಟೊಂಪಕಿ ಅವರು ಪವರ್ ಪ್ಲೇನಲ್ಲೇ 50 ರನ್ಗಳ ಜೊತೆಯಾಟವಾಡಿದರು. ಆದರೆ ದುನ್ನಾ 20 ರನ್ ಗಳಿಸಿ ಔಟಾದರು. ಮತ್ತೊಂದೆಡೆ ಟೊಂಪಕಿ 51 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 76 ರನ್ ಚಚ್ಚಿದರು. ಅಲ್ಲದೆ, ಎಸ್ ರಮೇಶ್, 29 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ತಂಡದ ಮೊತ್ತ 180ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ 184 ರನ್ ಗಳಿಸಿತು.
ಸವಾಲಿನ ಬೆನ್ನಟ್ಟಿದ ಪಾಕಿಸ್ತಾನ ಪುರುಷರ ಅಂಧರ ತಂಡವು, ಭರ್ಜರಿ ಆರಂಭ ಪಡೆಯುವ ಮೂಲಕ ಭಾರತ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪವರ್ಪ್ಲೇಗೂ ಮುನ್ನವೇ ಎಂ ಉಲ್ಲಾ ಮತ್ತು ಎನ್ ಅಲಿ ಅವರು ಅರ್ಧಶತಕದ ಜೊತೆಯಾಟವಾಡಿದರು. ಭಾರತೀಯ ಬೌಲರ್ಗಳು ಶಿಸ್ತುಬದ್ಧ ದಾಳಿ ನಡೆಸಲಿಲ್ಲ. 28 ವೈಡ್ ಸೇರಿದಂತೆ ಹೆಚ್ಚುವರಿಯಾಗಿ 42 ರನ್ ಬಿಟ್ಟುಕೊಟ್ಟರು. ಎಂ ಸಲ್ಮಾನ್ ಅಜೇಯ 48 ರನ್ ಮತ್ತು ಮುನೀರ್ 12 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ, ಪಾಕಿಸ್ತಾನವನ್ನು ಗೆಲುವಿನ ದಡ ಸೇರಿಸಿದ್ದಲ್ಲದೆ, ಐತಿಹಾಸಿ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಚಿನ್ನದ ಪದಕ ಗೆದ್ದ ಭಾರತ ಮಹಿಳಾ ಅಂಧರ ತಂಡ
ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡವು ಇಂಟರ್ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (IBSA) ವಿಶ್ವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಈ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. 9 ವಿಕೆಟ್ಗಳಿಂದ ಜಯಿಸಿದ ಭಾರತ ಮಹಿಳಾ ಅಂಧರ ತಂಡವು, ಐಬಿಎಸ್ಎ ವಿಶ್ವ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.