ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಘೋರ ಪರಾಜಯ; ಭಾರತ ಮಹಿಳಾ ತಂಡಕ್ಕೆ ಐತಿಹಾಸಿಕ ದಿಗ್ವಿಜಯ
Dec 24, 2023 06:09 PM IST
ಭಾರತಕ್ಕೆ ಐತಿಹಾಸಿಕ ದಿಗ್ವಿಜಯ.
- India Women vs Australia Women Only Test: ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 8 ವಿಕೆಟ್ಗಳ ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಇಂಗ್ಲೆಂಡ್ ಬಳಿಕ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧವೂ ಭಾರತದ ವನಿತೆಯರು ಐತಿಹಾಸಿಕ ಜಯ ಸಾಧಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ಹರ್ಮನ್ ಪಡೆ, 8 ವಿಕೆಟ್ಗಳ ಭರ್ಜರಿ ಜಯಭೇರಿ ಬಾರಿಸಿದೆ. ಇದರೊಂದಿಗೆ ಐತಿಹಾಸಿಕ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿದೆ.
ಆಸೀಸ್ ವಿರುದ್ದ ಮೊದಲ ಗೆಲುವು
ಹೊಸ ಇತಿಹಾಸ ನಿರ್ಮಿಸಿದ ಭಾರತ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಟ್ಟ ಮೊದಲ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಆಸೀಸ್ ವಿರುದ್ಧ 10 ಪಂದ್ಯ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿತ್ತು. ಆದರೆ 6 ಪಂದ್ಯಗಳಲ್ಲಿ ಸೋಲು ಮತ್ತು 4 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಭಾರತಕ್ಕೆ ಅವಿಸ್ಮರಣೀಯ ಗೆಲುವು.
ಹೀನಾಯವಾಗಿ ಸೋಲಿಸಿದ ಕೀರ್ತಿ ತನ್ನದಾಗಿಸಿಕೊಂಡ ಭಾರತ, ಟೆಸ್ಟ್ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. 4ನೇ ದಿನದ ಎರಡನೇ ಸೆಷನ್ ಮುಗಿಯುವುದರೊಳಗೆ ಭಾರತೀಯ ಪಡೆ ಜಯದ ನಗೆ ಬೀರಿದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಖಡಕ್ ಪ್ರದರ್ಶನ ತೋರಿದ ಹಿನ್ನೆಲೆ ಅಮೋಘ ಗೆಲುವು ಸಾಧಿಸಿದ್ದು ವಿಶೇಷ.
ಸ್ಕೋರ್ ವಿವರ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪಮೊತ್ತಕ್ಕೆ ಕುಸಿಯಿತು. ಭಾರತದ ಬೌಲರ್ಗಳ ಎದುರು ರನ್ ಗಳಿಸಲು ಪರದಾಡಿದ ಕಾಂಗರೂ ಪಡೆ, 219 ರನ್ಗಳಿಗೆ ಕುಸಿಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ, ಮೊದಲ ಇನ್ನಿಂಗ್ಸ್ನಲ್ಲಿ 406 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಇದರೊಂದಿಗೆ 187 ರನ್ಗಳ ಮುನ್ನಡೆ ಪಡೆಯಿತು. ಈ ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, 261 ರನ್ ಕಲೆ ಹಾಕಿತು. ಅಲ್ಲದೆ, ಭಾರತಕ್ಕೆ ಕೇವಲ 75 ರನ್ಗಳ ಅಲ್ಪ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಹರ್ಮನ್ ಪಡೆ, 2 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿ ಐತಿಹಾಸಿಕ ಗೆಲುವಿಗೆ ಮುತ್ತಿಕ್ಕಿತು.
ಸ್ನೇಹ್ ರಾಣಾ ಮಿಂಚು
ಸ್ನೇಹ್ ರಾಣಾ ಅವರು ಆಲ್ರೌಂಡ್ ಆಟದ ಮೂಲಕ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಎರಡೂ ಇನ್ನಿಂಗ್ಸ್ ಸೇರಿ 7 ವಿಕೆಟ್ ಉರುಳಿಸಿದ ರಾಣಾ, ಆಸೀಸ್ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಅವರಷ್ಟೇ ಅಲ್ಲದೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ ಸಹ ಸ್ನೇಹ್ ರಾಣಾ ಅವರಿಗೆ ಸಖತ್ ಸಾಥ್ ನೀಡಿದರು.
5 ವಿಕೆಟ್ ನಷ್ಟಕ್ಕೆ 233 ರನ್ಗಳೊಂದಿಗೆ 4ನೇ ದಿನದಾಟ ಬ್ಯಾಟಿಂಗ್ ನಡೆಸಿದ ಆಸೀಸ್, ಕೇವಲ 28 ರನ್ ಗಳಿಸಿ ಉಳಿದ ಐದು ವಿಕೆಟ್ಗಳನ್ನೂ ಕಳೆದುಕೊಂಡಿತು. 75 ರನ್ಗಳ ಗುರಿ ಹಿಂಬಾಲಿಸಿದ ಭಾರತ ಪರ ಶೆಫಾಲಿ ವರ್ಮಾ ನಿರಾಸೆ ಮೂಡಿಸಿದರು. ರಿಚಾ ಘೋಷ್ 13 ರನ್ಗಳಿಗೆ ಔಟಾದರು. ಬಳಿಕ ಸ್ಮೃತಿ ಮಂಧಾನಾ 38, ಜೆಮಿಮಾ 12 ರನ್ ಬಾರಿಸಿ ಗೆಲುವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ತಂಡದ ಮೊದಲ ಇನ್ನಿಂಗ್ಸ್: 219/10 (ತಹ್ಲಿಯಾ ಮೆಗ್ರಾತ್ 50; ಪೂಜಾ ವಸ್ತ್ರಾಕರ್ 53/4)
ಭಾರತ ತಂಡದ ಮೊದಲನೇ ಇನ್ನಿಂಗ್ಸ್: 406/10 (ದೀಪ್ತಿ ಶರ್ಮಾ 78; ಆ್ಯಶ್ಲೆ ಗಾರ್ಡನರ್ 100/4)
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: 261/10 (ತಹ್ಲಿಯಾ ಮೆಗ್ರಾತ್ 73; ಕೆ.ಎಲ್. ಸ್ನೇಹ್ ರಾಣಾ 63/4)
ಭಾರತ ಎರಡನೇ ಇನ್ನಿಂಗ್ಸ್: 75/2 (ಸ್ಮೃತಿ ಮಂಧಾನಾ 38*; ಆ್ಯಶ್ಲೆ ಗಾರ್ಡನರ್ 18/1)