ಜೈಸ್ವಾಲ್, ಶಿವಂ ದುಬೆ ಅಬ್ಬರ; ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20ಯಲ್ಲೂ ಭಾರತಕ್ಕೆ ಗೆಲುವು, ಸರಣಿ ಕೈವಶ
Jan 14, 2024 10:24 PM IST
ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್.
- India vs Afghanistan: ಇಂದೋರ್ನ ಹೋಲ್ಕರ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಸರಣಿಯನ್ನೂ ವಶಪಡಿಸಿಕೊಂಡಿದೆ.
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ (India vs Afghanistan) ಭರ್ಜರಿ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಭಾರತ ಅಮೋಘ 6 ವಿಕೆಟ್ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿತು. ಇದು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿದೆ.
ಇಂದೋರ್ನ ಹೋಲ್ಕರ್ ಮೈದಾನದಲ್ಲಿ ಜರುಗಿದ ಎರಡನೇ ಚುಟುಕು ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ, ಅಫ್ಘನ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ, ಗುಲ್ಬದೀನ್ ನಯೀಬ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಅರ್ಷದೀಪ್ 3, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಜೈಸ್ವಾಲ್, ಶಿವಂ ದುಬೆ ಅಬ್ಬರ
173 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಪಡೆಯಲಿಲ್ಲ. ರೋಹಿತ್ ಸತತ 2ನೇ ಡಕೌಟ್ಗೆ ಬಲಿಯಾದರು. ಆ ಬಳಿಕ 14 ನಂತರ ಟಿ20 ಕ್ರಿಕೆಟ್ನಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಜೊತೆಗೂಡಿ ಉತ್ತಮ ಪ್ರದರ್ಶನ ತೋರಿದರು. ಇಬ್ಬರು ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದರು. ಅಲ್ಲದೆ, ಈ ಜೋಡಿ 2ನೇ ವಿಕೆಟ್ಗೆ 57 ರನ್ಗಳ ಜೊತೆಯಾಟವಾಡಿತು.
ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ವಿರಾಟ್ ಕೊಹ್ಲಿ, 29 ರನ್ ಗಳಿಸಿ ನಿರ್ಗಮಿಸಿದರು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡುತ್ತಿದ್ದ ಜೈಸ್ವಾಲ್ಗೆ ಶಿವಂ ದುಬೆ ಸಖತ್ ಸಾಥ್ ನೀಡಿದರು. ದುಬೆ ಸಹ ಬೆಂಕಿ-ಬಿರುಗಾಳಿ ನಡೆಸಿ ಗಮನ ಸೆಳೆದರು. ಇಬ್ಬರೂ ಸಹ ವೇಗದ ಅರ್ಧಶತಕ ಸಿಡಿಸಿದರು. ಜೈಸ್ವಾಲ್ 27 ಎಸೆತಗಳಲ್ಲಿ 50ರ ಗಡಿ ದಾಟಿದರೆ, ಶಿವಂ ದುಬೆ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ದುಬೆಗೆ ಇದು ಸತತ 2ನೇ ಅರ್ಧಶತಕ.
34 ಎಸೆತಗಳಲ್ಲಿ 6 ಸಿಕ್ಸರ್, 5 ಬೌಂಡರಿ ಸಹಿತ 68 ರನ್ ಗಳಿಸಿ ಕರಿಮ್ ಜನ್ನತ್ ಬೌಲಿಂಗ್ ಔಟಾದರು. 32 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 63 ರನ್ ಗಳಿಸಿದ ದುಬೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಜಿತೇಶ್ ಶರ್ಮಾ ಡಕೌಟ್ಗೆ ಬಲಿಯಾದರೆ, ರಿಂಕು ಸಿಂಗ್ ಅಜೇಯ 9 ರನ್ ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. 15.4 ಓವರ್ಗಳಲ್ಲಿ ಭಾರತ ಗೆದ್ದು ಬೀಗಿತು.
ಮೂರನೇ ಪಂದ್ಯ ಯಾವಾಗ?
ಮೊದಲ ಟಿ20 ಪಂದ್ಯದಲ್ಲೂ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಮೂರನೇ ಟಿ20 ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಡಲು ಸಜ್ಜಾಗಿದೆ. ಜನವರಿ 17ರಂದು ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲೂ ಗೆಲುವು ದಾಖಲಿಸಿ ಸರಣಿ ಕ್ಲೀನ್ ಸ್ವೀಪ್ ಸಾಧಿಸಲು ರೋಹಿತ್ ಪಡೆ ಸಜ್ಜಾಗಿದೆ.
ಭಾರತ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್
ಅಫ್ಘಾನಿಸ್ತಾನ ಆಡುವ 11ರ ಬಳಗ
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ರಹ್ಮಾನ್ ಉರ್ಹಕ್.