logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಅಫ್ಘಾನ್ 3ನೇ ಟಿ20 ಪಂದ್ಯ ಟೈ; ಕೊನೆಗೂ ಎರಡನೇ ಸೂಪರ್ ಓವರ್ ಗೆದ್ದ ಭಾರತ, ಸರಣಿ ಕ್ಲೀನ್‌ ಸ್ವೀಪ್

ಇಂಡೋ-ಅಫ್ಘಾನ್ 3ನೇ ಟಿ20 ಪಂದ್ಯ ಟೈ; ಕೊನೆಗೂ ಎರಡನೇ ಸೂಪರ್ ಓವರ್ ಗೆದ್ದ ಭಾರತ, ಸರಣಿ ಕ್ಲೀನ್‌ ಸ್ವೀಪ್

Jayaraj HT Kannada

Jan 17, 2024 11:54 PM IST

google News

ಅಫ್ಘಾನಿಸ್ತಾನ ವಿರುದ್ಧ ಭಾರತ ಸರಣಿ ಗೆಲುವು ಸಾಧಿಸಿದೆ

    • India vs Afghanistan 3rd T20I: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಅಪ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ಎರಡೆರಡು ಬಾರಿ ಟೈ ಆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರೋಚಿತ ಸೋಲು ಕಂಡಿದೆ.
ಅಫ್ಘಾನಿಸ್ತಾನ ವಿರುದ್ಧ ಭಾರತ ಸರಣಿ ಗೆಲುವು ಸಾಧಿಸಿದೆ
ಅಫ್ಘಾನಿಸ್ತಾನ ವಿರುದ್ಧ ಭಾರತ ಸರಣಿ ಗೆಲುವು ಸಾಧಿಸಿದೆ (AFP)

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯವು (India vs Afghanistan) 44 ಓವರ್‌ಗಳಿಗೆ ಸಾಕ್ಷಿಯಾಯ್ತು. ಪಂದ್ಯವು ಟೈ ಆಗಿ ಸುದೀರ್ಘ ಅವಧಿಯವರೆಗೂ ಸಾಗಿ, ಅಭಿಮಾನಿಗಳ ಕಾತರ ಹೆಚ್ಚಿಸಿತು. ಕೊನೆಗೂ ಎರಡನೇ ಸೂಪರ್‌ ಓವರ್‌ನಲ್ಲಿ ಪಂದ್ಯಕ್ಕೊಂದು ಫಲಿತಾಂಶ ಸಿಕ್ಕಿತು. ಅಂತಿಮವಾಗಿ ಭಾರತವು 10 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡಿತು.

ಭಾರತ ನೀಡಿದ ಬೃಹತ್‌ ಗುರಿ ಬೆನ್ನಟ್ಟಲು ವಿರೋಚಿತ ಪ್ರಯತ್ನ ನಡೆಸಿದ ಅಫ್ಘಾನಿಸ್ತಾನ, ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಯ್ತು. ಆ ಬಳಿಕ ನಡೆದ ಸತತ ಎರಡು ಸೂಪರ್‌ ಓವರ್‌ಗಳಲ್ಲಿ ಎರಡನೇ ಸೂಪರ್‌ ಓವರ್‌ ಗೆದ್ದು ಬೀಗಿತು.

ಮೊದಲ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ತಾನ, ಮುಖೇಶ್‌ ಕುಮಾರ್‌ ಎಸೆದ ಮೊದಲ ಎಸೆತದಲ್ಲಿ ಒಂದು ರನ್‌ ಗಳಿಸಿ ಗುಲ್ಬುದ್ದೀನ್‌ ವಿಕೆಟ್‌ ಕಳೆದುಕೊಂಡಿತು. ಎರಡನೇ ಎಸೆತದಲ್ಲಿ ಮತ್ತೆ ಒಂದು ರನ್‌ ಮಾತ್ರ ಗಳಿಸಿತು. ಮೂರನೇ ಎಸೆತ ಎದುರಿಸಿದ ಗುರ್ಬಾಜ್‌ ಬೌಂಡರಿ ಗಳಿಸಿದರು. ನಾಲ್ಕನೇ ಎಸೆತದಲ್ಲಿ ಮತ್ತೆ ಸಿಂಗಲ್ ತೆಗೆದರು. ಐದನೇ ಎಸೆತ ಎದುರಿಸಿದ ನಬಿ ಎಸೆತವನ್ನು ಸಿಕ್ಸರ್‌ಗಟ್ಟಿದರು. ಕೊನೆಯ ಎಸೆತದಲ್ಲಿ ಮೂರು ರನ್‌ ಗಳಿಸಿ ಮೊತ್ತವನ್ನು 16ಕ್ಕೇರಿಸಿತು.

ಇದಕ್ಕೆ ಪ್ರತಿಯಾಗಿ ಭಾರತವು ಮೊದಲ ಎಸೆತದಲ್ಲಿ ಭಾರತವು ಒಂದು ರನ್‌ ಗಳಿಸಿತು. ಈ ವೇಳೆ ಜೈಸ್ವಾಲ್‌ ಸ್ವಲ್ಪದರಲ್ಲೇ ರನೌಟ್‌ ತಪ್ಪಿಸಿಕೊಂಡರು. ಎರಡನೇ ಏಸೆತದಲ್ಲಿ ಜೈಸ್ವಾಲ್‌ ಒಂದು ರನ್‌ ಗಳಿಸಿದರು. ಮೂರನೇ ಎಸೆತ ಎದುರಿಸಿದ ರೋಹಿತ್‌ ಶರ್ಮಾ ಸಿಕ್ಸರ್‌ ಸಿಡಿಸಿದರು. ನಾಲ್ಕನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್‌ ಗಳಿಸಿದರು. ಐದು ಮತ್ತು ಆರನೇ ಎಸೆದಲ್ಲಿ ಸಿಂಗಲ್‌ ತೆಗೆದ ಭಾರತ ಮತ್ತೆ ಪಂದ್ಯವನ್ನು ಟೈ ಮಾಡಿತು.

ಸರಣಿ ಕ್ಲೀನ್‌ ಸ್ವೀಪ್

ಎರಡನೇ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತವು ಕೇವಲ 11 ರನ್‌ ಗಳಿಸಿ ಎರಡು ವಿಕೆಟ್‌ ಕಳೆದುಕೊಂಡು ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಕೇವಲ 1 ರನ್‌ ಗಳಿಸಿ ಆಲೌಟ್‌ ಆಯ್ತು. ಹೀಗಾಗಿ ಭಾರತವು 10 ರನ್‌ಗಳಿಂದ ಗೆದ್ದಿತು. ಆ ಮೂಲಕ 3-0 ಅಂತರದಿಂದ ಸರಣಿ ಕ್ಲೀನ್‌ ಸ್ವೀಪ್‌ ಮಾಡಿತು.

ಭಾರತ ಭರ್ಜರಿ ಬ್ಯಾಟಿಂಗ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಭಾರತವು, ಭರ್ಜರಿ ಬ್ಯಾಟಿಂಗ್‌ ನಡೆಸಿತು. ಒಂದು ಹಂತದಲ್ಲಿ ಅಲ್ಪ ಮೊತ್ತಕ್ಕೆ 4 ವಿಕೆಟ್‌ ಕಳೆದುಕೊಂಡ ಭಾರತವು, ಅಂತಿಮವಾಗಿ 212 ರನ್‌ ಕಲೆ ಹಾಕಿತು. ಆ ಮೂಲಕ ಅಫ್ಘನ್‌ ಗೆಲುವಿಗೆ 213 ರನ್‌ಗಳ ಬೃಹತ್‌ ಗುರಿ ನೀಡಿತು.‌ ಚೇಸಿಂಗ್‌ ನಡೆಸಿದ ಅಫ್ಘಾನಿಸ್ತಾನ ಕೂಡಾ ಅಂತಿಮವಾಗಿ 213 ರನ್‌ ಗಳಿಸಿತು. ಪಂದ್ಯ ಟೈ ಆಗಿದ್ದರಿಂದ ಸೂಪರ್‌ ಓವರ್‌ ಮೂಲಕ ವಿಜೇತರನ್ನು ನಿರ್ಧರಿಸಲಾಯ್ತು. ‌

ಅಫ್ಘಾನಿಸ್ತಾನ ಕಠಿಣ ಪೈಪೋಟಿ

ಭಾರತ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ನಾಯಕ ಇಬ್ರಾಹಿಂ ಜದ್ರಾನ್‌ ಮತ್ತು ಗುರ್ಬಾಜ್‌ ಮೊದಲ ವಿಕೆಟ್‌ಗೆ 93 ರನ್‌ಗಳ ಬೃಹತ್‌ ಜೊತೆಯಾಟವಾಡಿದರು. ಉಭಯ ಆಟಗಾರರ ತಲಾ ಅರ್ಧಶತಕ ಸಿಡಿಸಿ ಔಟಾದರು. ಅರ್ಧಶತಕ ಸಿಡಿಸಿದ್ದ ಗುರ್ಬಾಜ್‌ ಹೊಡೆತವನ್ನು ಸುಂದರ್ ಅದ್ಭುತ್‌ ಕ್ಯಾಚ್‌ ಹಿಡಿದರು. ಕುಲ್ದೀಪ್‌ ಯಾದವ್‌ ಮೊದಲ ವಿಕೆಟ್‌ ಪಡೆದು ಮಿಂಚಿದರು. ಆ ಬಳಿಕ 50 ರನ್‌ ಗಳಿಸಿದ್ದ ನಾಯಕ ಜದ್ರಾನ್‌ ಅವರನ್ನು ಸ್ಟಂಪಿಂಗ್‌ ಮೂಲಕ ಸ್ಯಾಮ್ಸನ್‌ ಔಟ್‌ ಮಾಡಿದರು. ವಾಷಿಂಗ್ಟನ್‌ ಸುಂದರ್‌ ಎಸೆತದಲ್ಲಿ ಒಮರ್ಜಾಯ್‌ ಗೋಲ್ಡ‌ನ್‌ ಡಕ್‌ಗೆ ಬಲಿಯಾದರು.

ಈ ವೇಳೆ ಒಂದಾದ ನಬಿ ಮತ್ತು ನೈಬ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಬೌಂಡರಿ ಸಿಕ್ಸರ್‌ಗಳಿಂದಲೇ ತಂಡದ ಮೊತ್ತ ಹೆಚ್ಚಿಸಿದರು. ಮೂರು ಸಿಕ್ಸರ್‌ ಸಹಿತ ನಬಿ 34 ರನ್‌ ಗಳಿಸಿ ಔಟಾದರೆ, ಕರಿಮ್‌ ಜನ್ನತ್‌ 2 ರನ್‌ ಗಳಿಸಿದ್ದಾಗ ರನೌಟ್‌ ಆದರು. ಅಬ್ಬರದಾಟ ಮುಂದುವರೆಸಿದ ಗುಲ್ಬುದ್ದಿನ್ ನೈಬ್‌ ಸ್ಫೋಟಕ ಆಟವಾಡಿದರು. ತಂಡವನ್ನು ಗೆಲ್ಲಿಸಲು ಶತಾಯ ಗತಾಯ ಪ್ರಯತ್ನ ನಡೆಸಿದ ಗುಲ್ಬುದ್ದೀನ್‌ ನೈಬ್‌ ಕೇವಲ 23 ಎಸೆತಗಳಲ್ಲಿ 4 ಬೌಂಡಿ ಹಾಗೂ 4 ಸಿಕ್ಸರ್‌ ನೆರವಿಂದ 55 ರನ್‌ ಸಿಡಿಸಿದರು. ಆದರೆ, ಪಂದ್ಯವನ್ನು ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಭಾರಿ ಬ್ಯಾಟಿಂಗ್‌ ಕುಸಿತ ಕಂಡಿತು. ಯಶಸ್ವಿ ಜೈಸ್ವಾಲ್‌ 4 ರನ್‌ ಗಳಿಸಿ ಮೊದಲನೆಯವರಾಗಿ ಔಟಾದರು. ವಿರಾಟ್‌ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿ ನಿರಾಶೆ ಮೂಡಿಸಿದರು. ಶಿವಂ ದುಬೆ ಕೂಡಾ ಕೇವಲ 1 ರನ್‌ ಗಳಿಸಿ ಔಟಾದರು. ಸರಣಿಯಲ್ಲಿ ಮೊದಲ ಅವಕಾಶ ಪಡೆದ ಸಂಜು ಸ್ಯಾಮ್ಸನ್‌ ಕೂಡಾ ಗೋಲ್ಡನ್‌ ಡಕ್‌ಗೆ ಬಲಿಯಾದರು. 4.3 ಓವರ್‌ ಆಗುವಷ್ಟರಲ್ಲಿ ಭಾರತವು ಕೇವಲ 22 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು.

ಇದನ್ನೂ ಓದಿ | ಹಿಟ್‌ಮ್ಯಾನ್ ಶತಕದಾಟಕ್ಕೆ ಹಳೆ ದಾಖಲೆಗಳು ನಿರ್ನಾಮ; ರೋಹಿತ್ ಶರ್ಮಾ ರೆಕಾರ್ಡ್ ಲಿಸ್ಟ್ ಹೀಗಿದೆ

ಈ ವೇಳೆ ಒಂದಾದ ರೋಹಿತ್‌ ಶರ್ಮಾ ಮತ್ತು ರಿಂಕು ಸಿಂಗ್‌ ಶತಕದ ಜೊತೆಯಾಟವಾಡಿದರು. ಕೇವಲ 69 ಎಸೆತಗಳನ್ನು ಎದುರಿಸಿದ ಹಿಟ್‌ಮ್ಯಾನ್‌ 11 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್‌ ನೆರವಿನಿಂದ ಬರೋಬ್ಬರಿ 121 ರನ್‌ ಕಲೆ ಹಾಕಿದರು. ಟಿ20 ಸ್ವರೂಪದಲ್ಲಿ ಇದು ಅವರ ಅತಿ ಹೆಚ್ಚು ಸ್ಕೋರ್.‌ ಅತ್ತ ಭರ್ಜರಿ ಫಿನಿಶಿಂಗ್‌ ಮಾಡಿದ ರಿಂಕು ಸಿಂಗ್‌ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿಂದ 69 ರನ್‌ ಪೇರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ