ಭಾರತ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ; ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ
Nov 28, 2023 06:41 PM IST
ಭಾರತ ಆಸ್ಟ್ರೇಲಿಯಾ ಮೂರನೇ ಟಿ20
- India vs Australia 3rd T20I: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯವು ಗುವಾಹಟಿಯಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಭಾರತ ಮೊದಲಿಗೆ ಬ್ಯಾಟಿಂಗ್ ಮಾಡುತ್ತಿದೆ.
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಟಿ20 ಸರಣಿಯ ಮೂರನೇ ಪಂದ್ಯವು ನವೆಂಬರ್ 28ರ ಮಂಗಳವಾರವಾದ ಇಂದು ಗುವಾಹಟಿಯ ಬರ್ಸಪರಾ ಕ್ರೀಡಾಂಗಣದಲ್ಲಿ (Barsapara Cricket Stadium) ನಡೆಯುತ್ತಿದೆ. ಈಗಾಗಲೇ ಮೊದಲ ಎರಡು ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಭರ್ಜರಿಯಾಗಿ ಗೆದ್ದಿರುವ ಭಾರತ ತಂಡವು, ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಸರಣಿ ಜಯ ಸಾಧಿಸಲಿದೆ. ಇಂದಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮುಖೇಶ್ ಕುಮಾರ್ ಬದಲಿಗೆ ಆವೇಶ್ ಖಾನ್ ಆಡುವ ಬಳಗ ಸೇರಿಕೊಂಡಿದ್ದಾರೆ.
ಮದುವೆ ಹಿನ್ನೆಲೆ ಮುಖೇಶ್ ತಂಡ ತೊರೆದಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಟಾಸ್ ವೇಳೆ ಹೇಳಿದ್ದಾರೆ.
ಇದನ್ನೂ ಓದಿ | ವಿಶ್ವಕಪ್ ಗೆದ್ದ 6 ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟ ಆಸೀಸ್; ಉಳಿದ 3 ಪಂದ್ಯಗಳಿಗೆ ನೂತನ ತಂಡ ಪ್ರಕಟ
ಅತ್ತ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿದ್ದ ಆಸ್ಟ್ರೇಲಿಯಾ ತಂಡದ ಹಲವು ಆಟಗಾರರು ಟಿ20 ಸರಣಿಯಲ್ಲಿಯೂ ಆಡುತ್ತಿದ್ದರು. ಬಹುತೇಕ ಎರಡು ತಿಂಗಳಿಂದ ಭಾರತದಲ್ಲಿ ನೆಲೆಯೂರಿ ನಿರಂತರ ಪಂದ್ಯಗಳನ್ನು ಆಡುತ್ತಿರುವ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಹಲವು ಪ್ರಮುಖ ಕ್ರಿಕೆಟಿಗರು ಆಡುತ್ತಿಲ್ಲ.
ಸ್ಟೀವ್ ಸ್ಮಿತ್ ಮತ್ತು ಆಡಮ್ ಜಂಪಾ ಈಗಾಗಲೇ ಆಸ್ಟ್ರೇಲಿಯಾಗೆ ಮರಳಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಜೋಶ್ ಇಂಗ್ಲಿಸ್ ಮತ್ತು ಸೀನ್ ಅಬಾಟ್ ಅವರು ಇಂದು (ಮಂಗಳವಾರ) ಗುವಾಹಟಿಯಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಆಡುತ್ತಿದ್ದಾರೆ. ಪಂದ್ಯದ ನಂತರ ಬುಧವಾರ ಇವರು ಕೂಡಾ ತವರಿಗೆ ಮರಳಲಿದ್ದಾರೆ.
ಇದನ್ನೂ ಓದಿ | ಭಾರತ ಆಸ್ಟ್ರೇಲಿಯಾ 3ನೇ ಟಿ20; ಮಳೆಯಿಂದ ಪಂದ್ಯ ರದ್ದಾಗುವ ಆತಂಕ ಇದೆಯಾ? ಗುವಾಹಟಿ ಹವಾಮಾನ ಹೀಗಿದೆ
ಭಾರತ ಆಡುವ ಬಳಗ: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ ಆಡುವ ಬಳಗ: ಟ್ರಾವಿಸ್ ಹೆಡ್, ಆರನ್ ಹಾರ್ಡಿ, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ ಮತ್ತು ವಿಕೆಟ್ ಕೀಪರ್), ನಾಥನ್ ಎಲ್ಲಿಸ್, ಜೇಸನ್ ಬೆಹ್ರೆಂಡಾರ್ಫ್, ತನ್ವೀರ್ ಸಂಘ, ಕೇನ್ ರಿಚರ್ಡ್ಸನ್.
ಇಂಡೋ ಆಸೀಸ್ ಸರಣಿಯ ನಾಲ್ಕನೇ ಪಂದ್ಯವು ರಾಯ್‌ಪುರದಲ್ಲಿ ಡಿಸೆಂಬರ್ 1ರಂದು ನಡೆಯಲಿದೆ. ಅಂತಿಮ ಪಂದ್ಯವು ಡಿಸೆಂಬರ್ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.