logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಬಾಂಗ್ಲಾದೇಶ ಸೂಪರ್ 8 ಪಂದ್ಯ; ಆಂಟಿಗುವಾ ಪಿಚ್, ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ

ಭಾರತ vs ಬಾಂಗ್ಲಾದೇಶ ಸೂಪರ್ 8 ಪಂದ್ಯ; ಆಂಟಿಗುವಾ ಪಿಚ್, ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ

Jayaraj HT Kannada

Jun 22, 2024 06:50 AM IST

google News

ಭಾರತ vs ಬಾಂಗ್ಲಾದೇಶ ಸೂಪರ್ 8 ಪಂದ್ಯ; ಆಂಟಿಗುವಾ ಪಿಚ್, ಹವಾಮಾನ ವರದಿ

    • India vs Bangladesh: ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಸೂಪರ್‌ 8 ಪಂದ್ಯದಲ್ಲಿ ಗೆಲ್ಲುವ ಫೇವರೆಟ್ ತಂಡವಾಗಿದೆ. ಪಂದ್ಯದ ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.
ಭಾರತ vs ಬಾಂಗ್ಲಾದೇಶ ಸೂಪರ್ 8 ಪಂದ್ಯ; ಆಂಟಿಗುವಾ ಪಿಚ್, ಹವಾಮಾನ ವರದಿ
ಭಾರತ vs ಬಾಂಗ್ಲಾದೇಶ ಸೂಪರ್ 8 ಪಂದ್ಯ; ಆಂಟಿಗುವಾ ಪಿಚ್, ಹವಾಮಾನ ವರದಿ (PTI)

ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿ ಜೂನ್‌ 22ರ ಶನಿವಾರ ನಡೆಯುತ್ತಿರುವ ಟಿ20 ವಿಶ್ವಕಪ್‌ ಸೂಪರ್‌ 8 ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ (India vs Bangladesh) ತಂಡಗಳು ಎದುರಾಗುತ್ತಿವೆ. ಚುಟುಕು ಸ್ವರೂಪದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. ಹೀಗಾಗಿ ರೋಹಿತ್‌ ಶರ್ಮಾ ಬಳಗವು ಪಂದ್ಯದಲ್ಲಿ ಗೆಲ್ಲುವ ಫೇವರೆಟ್‌ ತಂಡವಾಗಿದೆ. ಟೂರ್ನಿಯ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಇದೀಗ ಅಸಲಿ ಕದನಕ್ಕೆ ತಂಡಗಳು ಸಜ್ಜಾಗಿದ್ದು, ಸೆಮಿಫೈನಲ್‌ ಗುರಿಯಾಗಿಸಿಕೊಂಡು ಭಾರತ ಕಣಕ್ಕಿಳಿಯಲಿದೆ.

ಟಿ20 ಸ್ವರೂಪದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಈವರೆಗೆ ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಭಾರತ 12 ಪಂದ್ಯಗಳಲ್ಲಿ ಗೆಲುವುಗಳೊಂದಿಗೆ ಮೇಲುಗೈ ಸಾಧಿಸಿದೆ. ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 4-0 ಅಂತರದ ಗೆಲುವಿನ ದಾಖಲೆ ಹೊಂದಿದೆ. 2022ರಲ್ಲಿ ಕೊನೆಯ ಬಾರಿಗೆ ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ 5 ರನ್‌ಗಳಿಂದ ಗೆದ್ದಿತ್ತು. ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಪಿಚ್ ವರದಿ

ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಐದು ಪಂದ್ಯಗಳು ನಡೆದಿವೆ. ಪಂದ್ಯದಲ್ಲಿ ಟಾಸ್ ಗೆದ್ದ ತಂಡಗಳು 4 ಬಾರಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿವೆ. ಆಂಟಿಗುವಾದಲ್ಲಿ ನಡೆದ ಕೊನೆಯ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಯುಎಸ್ಎ ವಿರುದ್ಧ 194 ರನ್‌ ಡಿಫೆಂಡ್‌ ಮಾಡಿಕೊಂಡಿತ್ತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಸರಾಸರಿ ಸ್ಕೋರ್ 117/7 ಆಗಿದ್ದರೆ, ಎರಡನೇ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 107/3 ಆಗಿದೆ. ಈ ಪಿಚ್ ಸೀಮರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ನೆರವಾಗುತ್ತದೆ. ಮೈದಾನದಲ್ಲಿ ಗರಿಷ್ಠ ಸ್ಕೋರ್ 194 ಆಗಿದೆ.

ಆಂಡಿಗುವಾ ಹವಾಮಾನ ವರದಿ

ಪಂದ್ಯದ ದಿನವಾದ ಶನಿವಾರ ಸರಾಸರಿ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ ಶೇ.20ಕ್ಕಿಂತ ಕಡಿಮೆ ಇದೆ. ಪಂದ್ಯಕ್ಕೆ ಮಳೆಯ ಆತಂಕವಿಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯುವ ಸಾಧ್ಯತೆ ಇದೆ.

ಸೋಲು ಗೆಲುವಿನ ಲೆಕ್ಕಾಚಾರ

ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನಪ್‌ ಹೊಂದಿರುವ ಭಾರತ ಆಂಟಿಗುವಾದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಫೇವರಿಟ್ ತಂಡವಾಗಿದೆ. ಮುಸ್ತಾಫಿಜುರ್ ರೆಹಮಾನ್ ಟೀಮ್‌ ಇಂಡಿಯಾದ ಆರಂಭಿಕ ಆಟಗಾರರನ್ನು ಕಾಡುವ ಭೀತಿ ಇದೆ. ಎರಡೂ ತಂಡಗಳ ತುಲನಾತ್ಮಕ ಬಲದ ಆಧಾರದ ಮೇಲೆ, ಭಾರತ ತಂಡವು ಗೆಲುವಿನ ಸಾಧ್ಯತೆ ಶೆಕಡಾ 70ರಷ್ಟಿದೆ.

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಬಾಂಗ್ಲಾದೇಶ ಸಂಭಾವ್ಯ ತಂಡ

ತಂಜಿದ್ ಹಸನ್ ತಮೀಮ್, ನಜ್ಮುಲ್ ಹೊಸೈನ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ಜೇಕರ್ ಅಲಿ, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ಮತ್ತು ತಂಜೀಮ್ ಶಕೀಬ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ