IND vs ENG: ಮೂರನೇ ಟೆಸ್ಟ್ನಲ್ಲಿ ಕೆಎಸ್ ಭರತ್ ಬದಲಿಗೆ ಧ್ರುವ್ ಜುರೆಲ್ ಅವಕಾಶ ಪಡೆಯಲು 3 ಕಾರಣಗಳು
Feb 14, 2024 05:39 PM IST
ಮೂರನೇ ಟೆಸ್ಟ್ನಲ್ಲಿ ಕೆಎಸ್ ಭರತ್ ಬದಲಿಗೆ ಧ್ರುವ್ ಜುರೆಲ್ ಅವಕಾಶ ಪಡೆಯಲು 3 ಕಾರಣಗಳು
- India vs England 3rd Test : ಸಿಕ್ಕ ಅವಕಾಶ ಕೈಚೆಲ್ಲಿದ ಭರತ್ ಅವರನ್ನು ಕೈ ಬಿಟ್ಟು ಧ್ರುವ್ ಜುರೆಲ್ ಅವರಿಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ. ಆದರೆ 3ನೇ ಪಂದ್ಯದಲ್ಲಿ ಧ್ರುವ್ ಜುರೆಲ್‌ಗೆ ಅವಕಾಶ ಸಿಗಲಿದೆ ಎಂದು ಹೇಳಲು 3 ಕಾರಣಗಳು ಇಲ್ಲಿವೆ.
ಫೆಬ್ರವರಿ 15ರಂದು ಗುರುವಾರ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ (India vs England 3rd Test) ನಡೆಯಲಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಜರುಗಲಿದೆ. ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಆದರೆ ಭಾರತದ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಕಣಕ್ಕಿಳಿಯುತ್ತಾರೆ ಎಂಬ ಗೊಂದಲ ಹುಟ್ಟಿದೆ. ಪ್ರಮುಖ ಆಟಗಾರರೇ 3ನೇ ಟೆಸ್ಟ್ಗೆ ಅಲಭ್ಯರಾಗಲಿದ್ದಾರೆ.
ಹಾಗಾಗಿ ಭಾರತ ತಂಡದಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಬದಲಾವಣೆ ಆಗುವುದು ಖಚಿತವಾಗಿದ್ದು, ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿಕೆಟ್ ಕೀಪರ್ ಕೆಎಸ್ ಭರತ್ ಬದಲಿಗೆ ಯುವ ಆಟಗಾರ ಧ್ರುವ್ ಜುರೆಲ್‌ಗೆ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ. ವಿಕೆಟ್ ಕೀಪಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕೆಎಸ್ ಭರತ್, ಬ್ಯಾಟಿಂಗ್ನಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದರು.
ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆಗೈದ ಕೆಎಸ್ ಭರತ್, ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಇಲ್ಲಿಯವರೆಗೂ 7 ಟೆಸ್ಟ್ ಪಂದ್ಯಗಳ ಪೈಕಿ 12 ಇನ್ನಿಂಗ್ಸ್ಗಳಲ್ಲಿ 20.09ರ ಬ್ಯಾಟಿಂಗ್ ಸರಾಸರಿಯಲ್ಲಿ 221 ರನ್ ಕಲೆ ಹಾಕಿದ್ದಾರೆ. ಸಿಕ್ಕ ಅವಕಾಶ ಕೈಚೆಲ್ಲಿದ ಭರತ್ರನ್ನು ಕೈ ಬಿಟ್ಟು ಜುರೆಲ್‌ಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ. ಆದರೆ ಮೂರನೇ ಪಂದ್ಯದಲ್ಲಿ ಧ್ರುವ್ ಜುರೆಲ್‌ಗೆ ಅವಕಾಶ ಸಿಗಲಿದೆ ಎಂದು ಹೇಳಲು ಮೂರು ಕಾರಣಗಳು ಇಲ್ಲಿವೆ ನೋಡಿ.
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಜುರೆಲ್ ಅಂಕಿ-ಅಂಶಗಳು
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಫಿನಿಷರ್ ಆಗಿರುವ ಧ್ರುವ್ ಜುರೆಲ್, ಉತ್ತಮ ದಾಖಲೆ ಹೊಂದಿದ್ದಾರೆ. ಅಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಅದ್ಭುತ ಅಂಕಿ-ಅಂಶ ಹೊಂದಿದ್ದಾರೆ. ಆಡಿದ 15 ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ ಧ್ರುವ್ ಜುರೆಲ್, 47ರ ಬ್ಯಾಟಿಂಗ್ ಸರಾಸರಿಯಲ್ಲಿ 790 ರನ್ ಸಿಡಿಸಿದ್ದಾರೆ. 1 ಶತಕ, 5 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಜುರೆಲ್, ಇಂಗ್ಲೆಂಡ್ ಲಯನ್ಸ್ ವಿರುದ್ದವು ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್
ಆಂಗ್ಲರ ಎದುರಿನ ಮೊದಲ 2 ಟೆಸ್ಟ್ಗಳಲ್ಲಿ ಮೂವರು ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್ಮನ್ಗಳು ತೀವ್ರ ನಿರಾಸೆ ಮೂಡಿಸಿದರು. ಇದರಲ್ಲಿ ಕೆಎಸ್ ಭರತ್ ಕೂಡ ಒಬ್ಬರು. ಸಿಕ್ಕ ಅವಕಾಶವನ್ನು ಕೈಚೆಲ್ಲಿದ ಕಾರಣ ಭರತ್ ಅವರನ್ನು ಮೂರನೇ ಟೆಸ್ಟ್ನಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ತಂದು ಕೊಂಡಿದ್ದಾರೆ. ಬದಲಿಗೆ ಜುರೆಲ್‌ಗೆ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಆಕ್ರಮಣಕಾರಿ ಆಟದ ಕೌಶಲ ಹೊಂದಿರುವ ಯುವ ಆಟಗಾರ ಸ್ಪಿನ್ನರ್ಗಳ ಎದುರು ಸಹ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಮಧ್ಯಮ ಕ್ರಮಾಂಕ ಮತ್ತು ಕೊನೆಯಲ್ಲಿ ಫಿನಿಷರ್ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
ಯಂಗ್ ಬ್ಯಾಟ್ಸ್ಮನ್
ಸದ್ಯ ಜುರೆಲ್‌ಗೆ ಇನ್ನೂ 22 ವರ್ಷ. ಯುವ ಆಟಗಾರರನ್ನು ಟೆಸ್ಟ್ನಲ್ಲಿ ದೀರ್ಘಾವಧಿ ಬಳಸಿಕೊಳ್ಳಲು ಬಯಸಿರುವ ಟೀಮ್ ಮ್ಯಾನೇಜ್ಮೆಂಟ್ ಅವಕಾಶ ನೀಡಲು ಬಯಸಿದೆ. ಭವಿಷ್ಯದ ಆಟಗಾರರನಾಗಿ ರೂಪಿಸಲು ಸಜ್ಜಾಗಿದೆ. ಆದರೆ ರಿಷಭ್ ಪಂತ್ ತಂಡಕ್ಕೆ ಮರಳಿದರೆ, ವಿಕೆಟ್ ಕೀಪಿಂಗ್ ಜಾಗದಲ್ಲಿ ಬದಲಾವಣೆ ಆಗಲಿದೆ. ಪಂತ್ಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಪಂತ್ ಇರಲಿದ್ದಾರೆ. ಜುರೆಲ್‌ಗೆ ಇದು ಉತ್ತಮ ಅವಕಾಶ ಕೂಡ ಹೌದು. ಸದ್ಯ ಇಶಾನ್ ಕಿಶನ್ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡುತ್ತಿಲ್ಲ. ಹಾಗೂ ಕೆಎಸ್ ಭರತ್ಗೆ 30 ವರ್ಷ ದಾಟಿದೆ. ಹಾಗಾಗಿ ಯುವ ಆಟಗಾರನಿಗೆ ಅವಕಾಶ ನೀಡಿ ಸಾಮರ್ಥ್ಯ ಪರಿಶೀಲಿಸಲು ಟೀಮ್ ಮ್ಯಾನೇಜ್ಮೆಂಟ್ ಕಾಯುತ್ತಿದೆ.