ಮಳೆಯೂ, ಚಳಿಯೂ; ಭಾರತ-ಇಂಗ್ಲೆಂಡ್ 5ನೇ ಟೆಸ್ಟ್‌ಗೆ ಹಲವು ಅಡೆತಡೆ; ಧರ್ಮಶಾಲಾ ಟೆಸ್ಟ್ ಹವಾಮಾನ ಮುನ್ಸೂಚನೆ ಹೀಗಿದೆ
Mar 04, 2024 04:25 PM IST
ಧರ್ಮಶಾಲಾ ಟೆಸ್ಟ್ ಹವಾಮಾನ ಮುನ್ಸೂಚನೆ ಹೀಗಿದೆ
- IND vs ENG Dharamsala Test: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯವು ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸರಣಿಯ ನಿರ್ಣಾಯಕ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುವ ಸಾಧ್ಯತೆ ಇದೆ. ಪಂದ್ಯಕ್ಕೆ ಮಳೆಯೊಂದಿಗೆ ಚಳಿಯ ಭೀತಿಯೂ ಇದೆ. ಧರ್ಮಶಾಲಾ ಹವಾಮಾನ ವರದಿ ಇಲ್ಲಿದೆ.
ಭಾರತದ ಅತ್ಯಂತ ಸುಂದರ ಕ್ರೀಡಾಂಗಣವಾದ ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ (Himachal Pradesh Cricket Association Stadium) ಭಾರತ ಮತ್ತು ಇಂಗ್ಲೆಂಡ್ (India vs England 5th Test) ತಂಡಗಳ ನಡುವಿನ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಪ್ರಕೃತಿಯ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಾ ಎಚ್‌ಪಿಸಿಎ ಕ್ರೀಡಾಂಗಣದ ಸುಂದರ ಪರಿಸರಲ್ಲಿ ಪಂದ್ಯವಾಡಲು ಉಭಯ ತಂಡಗಳು ಸಜ್ಜಾಗಿವೆ. ಸರಣಿಯ ನಿರ್ಣಾಯಕ ಪಂದ್ಯವಾದ್ದರಿಂದ ಮತ್ತು ಸುಂದರ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಸಾವಿರಾರು ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಬರುವ ಸಾಧ್ಯತೆ ಇದೆ. ಧೌಲಾಧರ್ ಹಿಮ ಪರ್ವತದ ಸಮೀಪದಲ್ಲಿರುವ ಕ್ರೀಡಾಂಗಣದ ರಮಣೀಯ ನೋಟವು ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಲಿದೆ. ಆದರೆ, ಈ ಪಂದ್ಯವು ಭಾರತಕ್ಕಿಂತ ಹೆಚ್ಚು ಇಂಗ್ಲೆಂಡ್‌ಗೆ ಅನುಕೂಲವಾಗುವಂತಿದೆ.
ಧರ್ಮಶಾಲಾ ಟೆಸ್ಟ್ ಪಂದ್ಯದ ಹವಾಮಾನಕ್ಕೂ, ಈ ಹಿಂದಿನ ನಾಲ್ಕು ಪಂದ್ಯಗಳು ನಡೆದ ಹವಾಮಾನಕ್ಕೂ ಅಜಗಜಾಂತರವಿರಲಿದೆ. ಧರ್ಮಶಾಲಾದಲ್ಲಿ ಶೀತ ಹವಾಮಾನ ಇರಲಿದ್ದು, ಹಿಮಪಾತವಾಗುವ ಸಾಧ್ಯತೆ ಇದೆ. ಹೀಗಾಗಿ ನಿರ್ಣಾಯಕ ಪಂದ್ಯಕ್ಕೆ ಅಡ್ಡಿಯಾಗುವ ಮುನ್ಸೂಚನೆ ಇದೆ. ಆದರೆ, ಈ ತಣ್ಣನೆಯ ವಾತಾವರಣವು ಇಂಗ್ಲೆಂಡ್‌ಗೆ ಇಷ್ಟವಾಗುವ ಸಾಧ್ಯತೆ ಇದೆ. ಇಂಗ್ಲೆಂಡ್‌ನಲ್ಲಿ ಪಂದ್ಯಗಳ ವೇಳೆ ಬಹುತೇಕ ಇದೇ ರೀತಿಯ ವಾತಾವರಣ ಇರುತ್ತದೆ. ಇದೀಗ ಧರ್ಮಶಾಲಾ ವಾತಾವರಣ ಆಂಗ್ಲರಿಗೆ ತವರಿನ ಅನುಭವ ನೀಡಲಿದೆ.
ಮಾರ್ಚ್ 7ರಂದು ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆ ದಿನ ಧರ್ಮಶಾಲಾದಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮುನ್ಸೂಚನೆ ಇದೆ. ಪಂದ್ಯದ ಆರಂಭಿಕ ದಿನವಾದ ಗುರುವಾರ, ತಾಪಮಾನವು ರಾತ್ರಿ ವೇಳೆ -4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಲಿದೆ. ಹಗಲಿನ ವೇಳೆ 1 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಬಿಬಿಸಿ ಹವಾಮಾನ ಮುನ್ಸೂಚನೆ ವರದಿ ತಿಳಿಸಿವೆ.
ಮಳೆಯಾಗುವ ಸಂಭವ
ಅಕ್ಯೂವೆದರ್ ಪ್ರಕಾರ, ಮೋಡ ತುಂಬಿದ ವಾತಾವರಣ ಇರಲಿದ್ದು, ಶೀತಮಯ ವಾತಾವರಣ ಇರಲಿದೆ. ಬೆಳಗ್ಗೆ ಸ್ವಲ್ಪ ಮಳೆಯಾಗುವ ಸಂಭವವಿದ್ದು, ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ ಪಂದ್ಯದ ಕೊನೆಯ ಮೂರು ದಿನಗಳಲ್ಲಿ ವಾತಾವರಣ ಸುಧಾರಿಸಲಿವೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿವೆ. ಸೂರ್ಯ ಕಾಣಿಸಿಕೊಳ್ಳಲಿದ್ದು, ಹದವಾದ ಬೆಳಕಿನೊಂದಿಗೆ ಆಹ್ಲಾದಕರ ಮತ್ತು ಬೆಚ್ಚಗಿನ ವಾತಾವರಣ ಇರಲಿದೆ," ಎಂದು ವರದಿ ಹೇಳಿದೆ.
ಇದನ್ನೂ ಓದಿ | AFG vs IRE: ಚೊಚ್ಚಲ ಟೆಸ್ಟ್ ಜಯ ದಾಖಲಿಸಿದ ಐರ್ಲೆಂಡ್; ಭಾರತಕ್ಕಿಂತ ವೇಗವಾಗಿ ಮೊದಲ ಗೆಲುವಿನ ಸಾಧನೆ
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತ ಮತ್ತು ಇಂಗ್ಲೆಂಡ್ ಆಟಗಾರರು ಈಗಾಗಲೇ ಧರ್ಮಶಾಲಾಗೆ ಬಂದಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಪಂದ್ಯ ಗೆಲುವಿನೊಂದಿಗೆ ಸರಣಿಯನ್ನು 4-0 ಅಂತರದಿಂದ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.
ಇಂಡೋ-ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ನಡೆದಿದ್ದು, ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಜಯ ಸಾಧಿಸಿತು. ಹೀಗಾಗಿ ಈಗಾಗಲೇ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.
ಇದನ್ನೂ ಓದಿ | ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡದಿರುವುದು ನಾಚಿಕೆಗೇಡಿನ ಸಂಗತಿ; ಜೇಮ್ಸ್ ಆ್ಯಂಡರ್ಸನ್ ವಿಷಾದ
ಧರ್ಮಶಾಲಾದ ಕ್ರೀಡಾಂಗಣದಲ್ಲಿ ಈಗಾಗಲೇ ಭಾರತ ತಂಡವು 2017ರಲ್ಲಿ ಒಂದು ಪಂದ್ಯ ಆಡಿದೆ. ಕಳೆದ ವರ್ಷ ಆಸೀಸ್ ವಿರುದ್ಧ ಮತ್ತೊಂದು ರೆಡ್-ಬಾಲ್ ಪಂದ್ಯವನ್ನು ಆಡಬೇಕಿತ್ತು. ಆದರೆ, ಔಟ್‌ಫೀಲ್ಡ್ ಸಮಸ್ಯೆಗಳಿಂದಾಗಿ ಅದನ್ನು ಇಂದೋರ್‌ಗೆ ಸ್ಥಳಾಂತರಿಸಲಾಗಿತ್ತು.
(This copy first appeared in Hindustan Times Kannada website. To read more like this please logon to kannada.hindustantimes.com)