India vs Ireland T20 Series: ಹಾರ್ದಿಕ್ ಪಾಂಡ್ಯ ಸೇರಿ ಈ ಆರು ಮಂದಿ ಆಟಗಾರರು ಐರ್ಲೆಂಡ್ ಸರಣಿಯಿಂದ ಔಟ್
Aug 14, 2023 09:08 AM IST
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡಲಾಗಿದೆ. (AP)
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಪಾಂಡ್ಯ ಹೊರಗುಳಿದಿದ್ದಾರೆ. ಪಾಂಡ್ಯ ಜೊತೆಗೆ ಇತರೆ ಪ್ರಮುಖ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಟಿ20 ಸರಣಿ ಸೋಲಿನ ಹಿನ್ನೆಲೆಯಲ್ಲಿ ಬಿಸಿಸಿಐ (BCCI) ಟಿ20 ನಾಯಕ ಹಾರ್ದಿಕ್ ಪಾಂಡ್ಯಗೆ (Hardik Pandya) ಶಾಕ್ ನೀಡಿದ್ದು, ಐರ್ಲೆಂಡ್ (India vs Ireland) ವಿರುದ್ಧದ ಸರಣಿಯಿಂದ ಪಾಂಡ್ಯರನ್ನು ಕೈಬಿಡಲಾಗಿದೆ.
ಇವರೊಂದಿಗೆ ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಅಕ್ಷರ್ ಪಟೇಲ್ ಹಾಗೂ ಇಶಾನ್ ಕಿಶನ್, ಕುಲದೀಪ್ ಯಾದವ್ ಮತ್ತು ಚಹಾಲ್ ಅವರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ಇವರೊಂದಿಗೆ ಇನ್ನೂ ಕೆಲವು ಯುವ ಆಟಗಾರರು ವೆಸ್ಟ್ ಇಂಡೀಸ್‌ನಿಂದ ಭಾರತಕ್ಕೆ ವಾಪಸ್ ಆಗಲಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಯಲ್ಲಿ ಮಿಂಚಿದ ತಿಲಕ್ ವರ್ಮಾ ಜೊತೆಗೆ ಸಂಜು ಸ್ಯಾಮ್ಸನ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ಮಾತ್ರ ವೆಸ್ಟ್ ಇಂಡೀಸ್ ನಿಂದ ಐರ್ಲೆಂಡ್‌ಗೆ ತೆರಳಲಿದ್ದಾರೆ. ಬುಮ್ರಾ ಐರ್ಲೆಂಡ್ ಸರಣಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 18 ರಂದು ಡಬ್ಲಿನ್‌ನಲ್ಲಿ ನಡೆಯಲಿದೆ. ಉಳಿದ ಟಿ20 ಪಂದ್ಯಗಳು ಆಗಸ್ಟ್ 20 ಮತ್ತು 23 ರಂದು ನಡೆಯಲಿದೆ. ಬುಮ್ರಾ ತನ್ನ ಕೊನೆಯ ಪಂದ್ಯವನ್ನು 2022ರ ಸೆಪ್ಟೆಂಬರ್ 25 ರಂದು ಆಡಿದ್ದರು. ಬೆನ್ನುನೋವಿನಿಂದಾಗಿ ದೀರ್ಘಕಾಲ ರಾಷ್ಟ್ರೀಯ ತಂಡದಿಂದ ದೂರವಿದ್ದ ಬುಮ್ರಾ ಐರ್ಲೆಂಡ್ ಸರಣಿಯೊಂದಿಗೆ ರೀ ಎಂಟ್ರಿ ಕೊಡಲಿದ್ದಾರೆ. ಆ ನಂತರ ಏಷ್ಯಾ ಕಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್‌ಗೆ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ ಟಿ20 ಸರಣಿಯನ್ನು ಕಳೆದುಕೊಂಡಿದೆ. ಸರಣಿ ನಿರ್ಧರಿಸುವ ಐದನೇ ಹಾಗೂ ಅಂತಿಮ ಟಿ20 ಕದನದಲ್ಲಿ ಹಾರ್ದಿಕ್ ಪಡೆ ಹೀನಾಯ ಸೋಲು ಕಂಡಿದೆ. ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್ ಆರ್ಭಟದ ಎದುರು ನಿರುತ್ತರವಾಗಿದೆ. ಟೀಂ ಇಂಡಿಯಾ 8 ವಿಕೆಟ್ಗಳಿಂದ ಸೋಲು ಕಂಡಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 3-2ರಲ್ಲಿ ಶರಣಾಗಿದೆ.
ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ನಡೆದ ಸರಣಿಯ ಕ್ಲೈಮ್ಯಾಕ್ಸ್ ಪಂದ್ಯದಲ್ಲಿ ಹಾರ್ದಿಕ್ ಪಡೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಂಡಿತು. ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಅರ್ಧಶತಕದ ಫಲವಾಗಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಗುರಿ ಬೆನ್ನತ್ತಿದ ವಿಂಡೀಸ್ ಇನ್ನೂ 2 ಓವರ್ಗಳು ಬಾಕಿ ಇರುವಂತೆಯೇ ಗೆಲುವಿಗೆ ನಗೆ ಬೀರಿತು.