ಇಂಡೋ-ಕಿವೀಸ್ ಕೊನೆಯ 5 ವಿಶ್ವಕಪ್ ಮುಖಾಮುಖಿ ಹೇಗಿತ್ತು; ಭಾರತಕ್ಕೆ ಸಿಹಿಗಿಂತ ಕಹಿಯೇ ಹೆಚ್ಚು
Nov 14, 2023 01:20 PM IST
ಭಾರತ-ನ್ಯೂಜಿಲ್ಯಾಂಡ್ ತಂಡಗಳ ಕೊನೆಯ ಐದು ವಿಶ್ವಕಪ್ ಪಂದ್ಯಗಳ ಫಲಿತಾಂಶ
- India vs New Zealand Last 5 World Cup clashes: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಪ್ರತಿಬಾರಿಯೂ ರೋಚಕವಾಗಿರುತ್ತದೆ. ಕಳೆದ ವಿಶ್ವಕಪ್‌ನಲ್ಲಿ ಕೂದಲೆಳೆ ಅಂತರದಲ್ಲಿ ಸೋತಿದ್ದ ಭಾರತ, ಈ ಬಾರಿ ಪ್ರಬಲ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ (India vs New Zealand) ತಂಡಗಳ ನಡುವಿನ ಏಕದಿನ ವಿಶ್ವಕಪ್ 2023ರ (ICC ODI World Cup 2023) ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ ಆಡಿದ ಎಲ್ಲಾ ಒಂಬತ್ತು ಪಂದ್ಯಗಳಲ್ಲಿ ಎದುರಾಳಿ ತಂಡಗಳ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ರೋಹಿತ್ ಪಡೆ, ನವೆಂಬರ್ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಕಿವೀಸ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ಫಾರ್ಮ್, ಮತ್ತು ಈ ಹಿಂದಿನ ಕಠಿಣ ಮುಖಾಮುಖಿಯನ್ನು ನೋಡಿದಾಗ, ಮುಂಬೈನಲ್ಲಿ ರೋಚಕ ಪಂದ್ಯ ನಡೆಯುವುದು ಖಚಿತವಾಗಿದೆ.
ಐಸಿಸಿ ವಿಶ್ವಕಪ್ 2023ರಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ ಹೋಲಿಸಿದರೆ ಭಾರತವೇ ಬಲಿಷ್ಠ. ಆದರೆ, ಉಭಯ ತಂಡಗಳ ವಿಶ್ವಕಪ್ ಮುಖಾಮುಖಿಯಲ್ಲಿ ಕಿವೀಸ್ ಬಲಿಷ್ಠವಾಗಿದೆ. 2003ರ ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಭಾರತವು ಕೊನೆಯ ಬಾರಿಗೆ ಜಯ ಸಾಧಿಸಿತ್ತು. ಆ ಬಳಿಕ 2007, 2011 ಮತ್ತು 2015ರ ವಿಶ್ವಕಪ್ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಆಡಿಯೇ ಇಲ್ಲ. ಕಳೆದ ಆವೃತ್ತಿಯ ಸೆಮಿಕದನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆದರೆ, ಭಾರತವು ಅಂತಿಮ ಹಂತದಲ್ಲಿ ಎಡವಿ ಸೋತಿತ್ತು.
ಭಾರತ vs ನ್ಯೂಜಿಲೆಂಡ್: ಕೊನೆಯ 5 ವಿಶ್ವಕಪ್ ಮುಖಾಮುಖಿಯ ಫಲಿತಾಂಶಗಳು
1. ಐಸಿಸಿ ವಿಶ್ವಕಪ್ 2023: ಹಿಮಾಚಲ ಪ್ರದೇಶದ ಸುಂದರ ಧರ್ಮಶಾಲಾ ಮೈದಾನದಲ್ಲಿ ಭಾರತವು ಕಿವೀಸ್ ವಿರುದ್ಧ ಪ್ರಾಬಲ್ಯ ಸಾಧಿಸಿತು. ನ್ಯೂಜಿಲ್ಯಾಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ 95 ರನ್ ಗಳಿಸಿ ಕೇವಲ 5 ರನ್‌ಗಳಿಂದ ಶತಕ ವಂಚಿತರಾದರು. ಅತ್ತ ಮೊಹಮ್ಮದ್ ಶಮಿ 54 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಿತ್ತರು.
2. ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್: ಎಂಎಸ್ ಧೋನಿ ರನ್ ಔಟ್ ಆದಾಗ ಪ್ರತಿಯೊಬ್ಬ ಭಾರತೀಯ ಅಭಿಮಾನಿಗಳ ಹೃದಯ ಒಡೆದು ಹೋಗಿತ್ತು. ಆ ನೋವು ಈಗಲೂ ಅಭಿಮಾನಿಗಳ ಮನಸ್ಸಲ್ಲಿದೆ. ಲೋ ಸ್ಕೋರ್ ಪಂದ್ಯವನ್ನು ಕಿವೀಸ್ 18 ರನ್‌ಗಳಿಂದ ಗೆದ್ದು ಬೀಗಿತು. ಆದರೆ, ರೋಚಕ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಶರಣಾಯಿತು.
3. ಐಸಿಸಿ ವಿಶ್ವಕಪ್ 2003: ಭಾರತದ ಅಪಾಯಕಾರಿ ವೇಗಿ ಜಹೀರ್ ಖಾನ್ ಅವರು 4 ವಿಕೆಟ್ ಕಬಳಿಸಿದ್ದರು. ಹೀಗಾಗಿ ವಿಶ್ವಕಪ್ 2003ರ ಪಂದ್ಯದಲ್ಲಿ ಭಾರತವು ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿತು. ನ್ಯೂಜಿಲೆಂಡ್ ಕೇವಲ 146 ರನ್‌ಗೆ ಆಲೌಟ್ ಆಯ್ತು. ಭಾರತವು ಸುಲಭವಾಗಿ ರನ್ ಚೇಸ್ ಮಾಡಿ ಗೆದ್ದಿತು.
4. ಐಸಿಸಿ ವಿಶ್ವಕಪ್ 1999: ಮ್ಯಾಟ್ ಹಾರ್ನ್ ಮತ್ತು ರೋಜರ್ ಟ್ವೆಸೆ ಅವರ ಪ್ರದರ್ಶನದ ನೆರವಿಂದ ವಿಶ್ವಕಪ್ 1999ರ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 5 ವಿಕೆಟ್‌ಗಳಿಂದ ಜಯ ಸಾಧಿಸಿತು. 76 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದ ಅಜಯ್ ಜಡೇಜಾ ಹೊರತುಪಡಿಸಿ ಭಾರತ ತಂಡದ ಯಾವುದೇ ಬ್ಯಾಟರ್‌ಗಳ ಆ ಪಂದ್ಯದಲ್ಲಿ ಮಿಂಚಲಿಲ್ಲ.
5. ಐಸಿಸಿ ವಿಶ್ವಕಪ್ 1992: ಸಚಿನ್ ತೆಂಡೂಲ್ಕರ್ ಅವರ ಸೊಗಸಾದ 84 ರನ್‌ಗಳ ಹೊರತಾಗಿಯೂ, ಭಾರತವನ್ನು ಕಿವೀಸ್ 4 ವಿಕೆಟ್‌ಗಳಿಂದ ಸೋಲಿಸಿತು. ಮಾರ್ಕ್ ಜಾನ್ ಗ್ರೇಟ್‌ಬ್ಯಾಚ್ ಭಾರತೀಯ ಬೌಲರ್‌ಗಳನ್ನು ದಂಡಿಸಿದರು.