ವಿಶ್ವದಾಖಲೆಯ ವೀಕ್ಷಣೆ ಪಡೆದ ಇಂಡೋ-ಪಾಕ್ ಪಂದ್ಯ; ಐಪಿಎಲ್ ಫೈನಲ್ ದಾಖಲೆ ಛಿದ್ರ!
Oct 15, 2023 04:56 PM IST
ಗೆಲುವಿನ ಬಳಿಕ ಭಾರತ-ಪಾಕಿಸ್ತಾನ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಂಡರು.
- India vs Pakistan: ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ರೋಚಕತೆ ಹುಟ್ಟುಹಾಕಿದ್ದ ಭಾರತ-ಪಾಕಿಸ್ತಾನ ಪಂದ್ಯವು ಹೊಸದೊಂದು ದಾಖಲೆ ಬರೆದಿದೆ. ಈ ಹಿಂದಿದ್ದ ದಾಖಲೆಗಳನ್ನು ಅಳಿಸಿಹಾಕಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ರಣ ರೋಚಕ ಪಂದ್ಯದಲ್ಲಿ ರೋಹಿತ್ ಪಡೆ, ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿತು.
ಟೂರ್ನಿಯಲ್ಲಿ ಸತತ 3ನೇ ಗೆಲುವು ಸಾಧಿಸಿದ ಟೀಮ್ ಇಂಡಿಯಾ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಅಲ್ಲದೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್ನಲ್ಲಿ ಸತತ 8ನೇ ಗೆಲುವಿಗೆ ಮುತ್ತಿಕ್ಕಿತು. ವಿಶ್ವಕಪ್ನಲ್ಲಿ ಅತಿ ಹೆಚ್ಚು ರೋಚಕತೆ ಹುಟ್ಟುಹಾಕಿದ್ದ ಈ ಪಂದ್ಯವು ಹೊಸದೊಂದು ದಾಖಲೆ ಬರೆದಿದೆ. ಈ ಹಿಂದಿದ್ದ ದಾಖಲೆಗಳನ್ನು ಅಳಿಸಿಹಾಕಿದೆ.
ವೀಕ್ಷಣೆಯಲ್ಲಿ ವಿಶ್ವದಾಖಲೆ
ಇಂಡೋ-ಪಾಕ್ ಪಂದ್ಯವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 3.5 ಕೋಟಿ ವೀಕ್ಷಣೆ ಕಂಡಿದೆ. ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಇತಿಹಾಸದಲ್ಲೇ ಇದು ದಾಖಲೆಯ ವೀಕ್ಷಣೆ. ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಜಾಗತಿಕ ದಾಖಲೆ ಬರೆದಿದೆ. ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪಂದ್ಯದ ಅಧಿಕ ವೀಕ್ಷಣೆ ಪಡೆದ ಮೊದಲ ಪಂದ್ಯವಾಗಿದೆ.
ಐಪಿಎಲ್ ಫೈನಲ್ ದಾಖಲೆ ಛಿದ್ರ
ಭಾರತ-ಪಾಕಿಸ್ತಾನ ದಾಖಲೆಯ ವೀಕ್ಷಣೆ ಪಡೆಯುವ ಮೂಲಕ ಐಪಿಎಲ್ ಫೈನಲ್ ಪಂದ್ಯದ ದಾಖಲೆಯನ್ನು ಮುರಿದಿದೆ. ಐಪಿಎಲ್ ಫೈನಲ್ನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಮತ್ತು ಹಾರ್ದಿಕ್ ನೇತೃತ್ವದ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 3.2 ಕೋಟಿ ಜನರು ವೀಕ್ಷಿಸಿ ದಾಖಲೆ ಬರೆದಿತ್ತು.
ಏಷ್ಯಾಕಪ್ನಲ್ಲಿ 2.8 ಕೋಟಿ ವೀಕ್ಷಣೆ
ಕಳೆದ ತಿಂಗಳು ಸೆಪ್ಟೆಂಬರ್ನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯವು 2.8 ಕೋಟಿ ವೀಕ್ಷಣೆ ಪಡೆದಿತ್ತು. 2019ರ ವಿಶ್ವಕಪ್ನ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಸೆಮಿಫೈನಲ್ ಪಂದ್ಯವನ್ನು 2.53 ಕೋಟಿ ಜನರು ವೀಕ್ಷಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಇದು ಹೊಸ ವಿಶ್ವದಾಖಲೆ ಬರೆದಿತ್ತು.
ಬಾರ್ಕ್ನಿಂದ ಸಮೀಕ್ಷೆ
ಭಾರತ-ಪಾಕಿಸ್ತಾನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಟಿವಿ ಪ್ರೇಕ್ಷಕರ ಅಂಕಿ-ಅಂಶಗಳನ್ನು ದಾಖಲಿಸುವ ಸಂಸ್ಥೆಯಾದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಸಮೀಕ್ಷೆ ನಡೆಸಲಿದೆ. ಈ ವಾರದ ಅಂತ್ಯದ ವೇಳೆಗೆ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಿದೆ.
ಡಿಸ್ನಿಯಿಂದ ಉಚಿತ ವೀಕ್ಷಣೆ
ಐಪಿಎಲ್ನಲ್ಲಿ ಜಿಯೋಸಿನಿಮಾ ಅಭಿಮಾನಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ನೀಡಿತ್ತು. ಇದು ಡಿಜಿಟಲ್ ಫ್ಲಾಟ್ ಫಾರಂನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿತ್ತು. ಹಾಗಾಗಿ ಹಾಟ್ಸ್ಟಾರ್ ಚಂದಾದಾರರ ಸಂಖ್ಯೆ ಗಣನೀಯ ಇಳಿಕೆ ಕಂಡಿತ್ತು. ಇದೀಗ ವಿಶ್ವಕಪ್ ನೇರಪ್ರಸಾರದ ಹಕ್ಕನ್ನು ಪಡೆದಿರುವ ಹಾಟ್ಸ್ಟಾರ್ ಉಚಿತ ವೀಕ್ಷಣೆಗೆ ಅವಕಾಶ ನೀಡಿದೆ.