logo
ಕನ್ನಡ ಸುದ್ದಿ  /  ಕ್ರಿಕೆಟ್  /  5 ವಿಕೆಟ್ ಕಬಳಿಸಿ ಮಿಂಚಿದ ದೀಪ್ತಿ ಶರ್ಮಾ; ಸಚಿನ್ ಸೇರಿದಂತೆ ದಿಗ್ಗಜರ ಎಲೈಟ್ ಪಟ್ಟಿಗೆ ಆಲ್​ರೌಂಡರ್

5 ವಿಕೆಟ್ ಕಬಳಿಸಿ ಮಿಂಚಿದ ದೀಪ್ತಿ ಶರ್ಮಾ; ಸಚಿನ್ ಸೇರಿದಂತೆ ದಿಗ್ಗಜರ ಎಲೈಟ್ ಪಟ್ಟಿಗೆ ಆಲ್​ರೌಂಡರ್

Prasanna Kumar P N HT Kannada

Dec 31, 2023 10:50 AM IST

google News

ವಿಕೆಟ್​ ಪಡೆದ ಬಳಿಕ ಸಹ ಆಟಗಾರ್ತಿಯೊಂದಿಗೆ ಸಂಭ್ರಮಿಸಿದ ದೀಪ್ತಿ ಶರ್ಮಾ.

    • Deepti Sharma: ವಾಂಖೆಡೆ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ದೀಪ್ತಿ ಶರ್ಮಾ 5 ವಿಕೆಟ್​ ಪಡೆದು ವಿಶೇಷ ದಾಖಲೆ ಬರೆದಿದ್ದಾರೆ. 
ವಿಕೆಟ್​ ಪಡೆದ ಬಳಿಕ ಸಹ ಆಟಗಾರ್ತಿಯೊಂದಿಗೆ ಸಂಭ್ರಮಿಸಿದ ದೀಪ್ತಿ ಶರ್ಮಾ.
ವಿಕೆಟ್​ ಪಡೆದ ಬಳಿಕ ಸಹ ಆಟಗಾರ್ತಿಯೊಂದಿಗೆ ಸಂಭ್ರಮಿಸಿದ ದೀಪ್ತಿ ಶರ್ಮಾ.

ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ (India vs Australia Womens 2nd ODI) ಐದು ವಿಕೆಟ್​​ಗಳ ಗೊಂಚಲು ಪಡೆದ​ ಭಾರತ ವನಿತೆಯರ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಆಲ್​ರೌಂಡರ್​ ದೀಪ್ತಿ ಶರ್ಮಾ (Deepti Sharma) ಪಾತ್ರರಾಗಿದ್ದಾರೆ. ಡಿಸೆಂಬರ್ 30ರಂದು ಶನಿವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ಜರುಗಿದ ಎರಡನೇ ಏಕದಿನ ಪಂದ್ಯದಲ್ಲಿ ದೀಪ್ತಿ, ಈ ವಿಶೇಷ ಸಾಧನೆ ಮಾಡುವ ಮೂಲಕ ದಿಗ್ಗಜರ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಮುಂಬೈನ ಐಕಾನಿಕ್ ವಾಂಖೆಡೆಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನದಲ್ಲಿ ಆಲ್​ರೌಂಡರ್​ ದೀಪ್ತಿ ಶರ್ಮಾ, ತನ್ನ 10 ಓವರ್​​ಗಳ ಬೌಲಿಂಗ್ ಕೋಟಾದಲ್ಲಿ 38 ರನ್ ಬಿಟ್ಟು ಕೊಟ್ಟು ಭರ್ಜರಿ 5 ವಿಕೆಟ್​ ಉರುಳಿಸಿದರು. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದ್ದಲ್ಲದೆ, ರನ್ ವೇಗವನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡರು. ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಹಿಲಾ ಮೆಗ್ರಾತ್, ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್​ರನ್ನು ಔಟ್ ಮಾಡಿದರು.

ದೀಪ್ತಿ ಶರ್ಮಾ ದಾಖಲೆ

ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಏಕದಿನ ಪಂದ್ಯಗಳಲ್ಲಿ ಭಾರತದ ಮಾಜಿ ಆಟಗಾರ್ತಿ ನೂಶಿನ್ ಅಲ್ ಖದೀರ್ ಅವರ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ದೀಪ್ತಿ ಮುರಿದಿದ್ದಾರೆ. 2006ರಲ್ಲಿ ನೂಶಿಲ್​ ಅವರು ಅಡಿಲೇಡ್‌ನಲ್ಲಿ ಆಸೀಸ್​ ವಿರುದ್ಧ 4 ವಿಕೆಟ್​ ಪಡೆದಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಅಂದು 10 ಓವರ್​​​ಗಳಲ್ಲಿ 41 ರನ್ ನೀಡಿ 4 ವಿಕೆಟ್​ ಪಡೆದಿದ್ದರು. ಇದೀಗ ಈ ದಾಖಲೆ ಐದು ವಿಕೆಟ್ ಉರುಳಿಸಿದ ದೀಪ್ತಿ ಶರ್ಮಾ ಪಾಲಾಗಿದೆ.

ಅಲ್ಲದೆ, ಈ ದಾಖಲೆಯೊಂದಿಗೆ ಭಾರತೀಯ ಕ್ರಿಕೆಟ್​ ದಿಗ್ಗಜರ ಕ್ರಿಕೆಟಿಗರೊಂದಿಗೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ಕ್ರಿಕೆಟ್​ನಲ್ಲಿ ದೀಪ್ತಿ ಮಾತ್ರ ಆಸೀಸ್ ಎದುರು 5 ವಿಕೆಟ್​​ಗಳ ಸಾಧನೆ ಮಾಡಿದ್ದರೆ, ಪುರುಷರ ಕ್ರಿಕೆಟ್​ನಲ್ಲಿ ಮುರಳಿ ಕಾರ್ತಿಕ್, ಯುಜ್ವೇಂದ್ರ ಚಹಲ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಶಮಿ ಕೂಡ ಸೇರಿದಂತೆ 8 ಮಂದಿ ಈ ಸಾಧನೆಗೈದಿದ್ದಾರೆ. ಇದೀಗ ದೀಪ್ತಿ ಆಸೀಸ್ ವಿರುದ್ಧ 5 ವಿಕೆಟ್ ಕಬಳಿಸಿದ 8ನೇ ಭಾರತೀಯರಾಗಿದ್ದಾರೆ.

ದೀಪ್ತಿ ಬೆಂಕಿ ಬೌಲಿಂಗ್​ ನಡುವೆಯೂ ಸೋತ ಭಾರತ

ಎರಡನೇ ಏಕದಿನದಲ್ಲಿ ದೀಪ್ತಿ ಅವರ ಬೆಂಕಿ ಬೌಲಿಂಗ್ ನಡುವೆಯೂ ಭಾರತ ವನಿತಾ ತಂಡವು ರೋಚಕ ಸೋಲನುಭವಿಸಿತು. ಕೇವಲ 3 ರನ್​ಗಳ ಅಂತರದಿಂದ ಶರಣಾಯಿತು. ಇದರೊಂದಿಗೆ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 0-2 ಅಂತರದಲ್ಲಿ ಸರಣಿ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, 8 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು. ಆದರೆ ಭಾರತ ಅಷ್ಟೇ ವಿಕೆಟ್​ಗಳೊಂದಿಗೆ 255 ರನ್​ಗಳಿಸಿ ಇನ್ನಿಂಗ್ಸ್​ ಕೊನೆಗೊಳಿಸಿ 3 ರನ್​​ಗಳಿಂದ ಸೋಲುವಂತಾಯಿತು.

ಟೆಸ್ಟ್​​ನಲ್ಲೂ ಮಿಂಚಿದ್ದ ದೀಪ್ತಿ

ದೀಪ್ತಿ ಈ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 78 ನಿರ್ಣಾಯಕ ರನ್ ಗಳಿಸಿದ್ದಲ್ಲದೆ, 2 ವಿಕೆಟ್ ಸಹ ಕಿತ್ತಿದ್ದರು. ಅಲ್ಲದೆ, ಅದಕ್ಕೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಐದು ವಿಕೆಟ್‌ ಉರುಳಿಸಿದ್ದರು. ಹಾಗೆಯೇ 83 ಸಹ ಸಿಡಿಸಿದ್ದರು. ಆ ಮೂಲಕ ಈ ಎರಡೂ ಟೆಸ್ಟ್​​​​ ಪಂದ್ಯಗಳಲ್ಲಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ