ಏಷ್ಯನ್ ಕ್ರೀಡಾಕೂಟಕ್ಕೆ ಕಾಲಿಟ್ಟ ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಭಾರತ ಮಹಿಳಾ ಕ್ರಿಕೆಟ್ ತಂಡ
Sep 21, 2023 04:39 PM IST
ಏಷ್ಯನ್ ಕ್ರೀಡಾಕೂಟಕ್ಕೆ ಕಾಲಿಟ್ಟ ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಭಾರತ ಮಹಿಳಾ ಕ್ರಿಕೆಟ್ ತಂಡ.
India Women vs Malaysia Women: ಮಲೇಷ್ಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವು ಮಳೆಯಿಂದ ರದ್ದುಗೊಂಡ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಮಳೆಯಿಂದ ರದ್ದುಗೊಂಡರೂ ಭಾರತ ತಂಡವು ದಾಖಲೆ ಬರೆದಿದೆ.
ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ಇಂದು (ಸೆಪ್ಟೆಂಬರ್ 21, ಗುರುವಾರ) ನಡೆದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ 2023ರಲ್ಲಿ (Asian Games 2023) ಮಹಿಳಾ ಕ್ರಿಕೆಟ್‌ನ (Women's Cricket) ಕ್ವಾರ್ಟರ್ ಫೈನಲ್ ಪಂದ್ಯವು ಮಳೆಯಿಂದ ರದ್ದುಗೊಂಡರೂ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಅಲ್ಲದೆ, ಪಂದ್ಯದಿಂದ ಯಾವುದೇ ಫಲಿತಾಂಶ ಬಾರದಿದ್ದರೂ, ಭಾರತ ಮಹಿಳಾ ತಂಡವು ವಿಶ್ವದಾಖಲೆ ಬರೆದಿದೆ. ಮಳೆಯಿಂದ 15 ಓವರ್ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮಹಿಳಾ ತಂಡವು ಭರ್ಜರಿ ಆಟದ ಮೂಲಕ ಎದುರಾಳಿ ಮಲೇಷ್ಯಾಗೆ 174 ರನ್‌ಗಳ ಗುರಿ ನೀಡಿತು. ಆದರೆ ಈ ಗುರಿ ಬೆನ್ನತ್ತಲು ಮಲೇಷ್ಯಾ ಇನ್ನಿಂಗ್ಸ್ ಆರಂಭಿಸಿದ ಮೊದಲ ಓವರ್‌ನ 2ನೇ ಎಸೆತದ ವೇಳೆ ಮಳೆ ಆರಂಭಗೊಂಡಿತು. 1 ರನ್ ಗಳಿಸಿದ್ದ ಮಲೇಷ್ಯಾ ತಂಡಕ್ಕೆ ಮತ್ತೆ ಬ್ಯಾಟಿಂಗ್ ನಡೆಸಲು ವರುಣ ಅವಕಾಶ ನೀಡಲೇ ಇಲ್ಲ. ಹಾಗಾಗಿ ಪಂದ್ಯವನ್ನು ರದ್ದು ಮಾಡುವ ನಿರ್ಧಾರಕ್ಕೆ ಬರಲಾಯಿತು. ಭಾರತದ ಮಹಿಳಾ ತಂಡ ಉತ್ತಮ ಶ್ರೇಯಾಂಕ ಹೊಂದಿದ್ದ ಕಾರಣ ಪಂದ್ಯ ರದ್ದಾದರೂ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು.
ದಾಖಲೆ ಬರೆದ ಮಹಿಳಾ ತಂಡ
ಭಾರತ ಮಹಿಳಾ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದಿದೆ. ಏಷ್ಯನ್ ಗೇಮ್ಸ್ ಅಲ್ಲದೆ, ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್ನಲ್ಲಿ 15 ಓವರ್ಗಳಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆಯನ್ನು ಭಾರತ ತಂಡವು ತನ್ನ ಹೆಸರಿಗೆ ಬರೆದುಕೊಂಡಿದೆ. ಅಲ್ಲದೆ, ಏಷ್ಯನ್ ಕ್ರೀಡಾ ಕೂಟದಲ್ಲೂ ಯಾವುದೇ ಕ್ರಿಕೆಟ್ ತಂಡವು 15 ಓವರ್ಗಳಲ್ಲಿ 173 ರನ್ ಗಳಿಸಿದ ಸಾಧನೆ ಮಾಡಿಲ್ಲ. ಇದೀಗ ಸೆಮಿಫೈನಲ್ ಪ್ರವೇಶಿಸಿರುವ ಭಾರತ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತದ ಬ್ಯಾಟಿಂಗ್ ಹೇಗಿತ್ತು?
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸ್ಪೋಟಕ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಸ್ಪೃತಿ ಮಂಧಾನ ಮತ್ತು ಶಫಾಲಿ ವರ್ಮಾ ಬಿರುಸಿನ ಬ್ಯಾಟಿಂಗ್ ನಡೆಸುವ ಮೂಲಕ ಮಲೇಷ್ಯಾ ಬೌಲಿಂಗ್ ದಾಳಿಯನ್ನು ಧೂಳೀಪಟಗೊಳಿಸಿದರು. ಮಲೇಷ್ಯಾ ತಂಡದ ಕಳಪೆ ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಇದರ ಲಾಭ ಪಡೆದ ಭಾರತ ತಂಡವು ಭರ್ಜರಿ ಆರಂಭ ಪಡೆಯಿತು. ಆದರೆ, ಸ್ಮೃತಿ ಮಂಧಾನ (27) ಮಳೆ ಆರಂಭವಾಗುವುದಕ್ಕೂ ಮುನ್ನವೇ ವಿಕೆಟ್ ಒಪ್ಪಿಸಿದರು.
ಆದರೆ, ಶೆಫಾಲಿ ವರ್ಮಾ 39 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳು ಸೇರಿದಂತೆ ಅಗ್ರೆಸ್ಸಿವ್ 67 ರನ್ ಗಳಿಸುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಜೆಮಿಮಾ ರೋಡ್ರಿಗಸ್ 47 ರನ್ ಮತ್ತು ರಿಚಾ ಘೋಷ್ 21 ರನ್ ಗಳಿಸಿ ಅಜೇಯರಾಗಿ ಉಳಿದರು. ಮಲೇಷ್ಯಾ ಪರ ಮಹಿರಾ ಇಜ್ಜತಿ ಇಸ್ಮಾಯಿಲ್ ಮತ್ತು ಮಾಸ್ ಎಲಿಸಾ ತಲಾ ಒಂದು ವಿಕೆಟ್ ಪಡೆದರು. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಆಕ್ರೋಶ ವರ್ತನೆ ತೋರಿದ್ದ ಭಾರತ ವನಿತೆಯರ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ರನ್ನು 2 ಐಸಿಸಿ ಪಂದ್ಯಗಳನ್ನು ನಿಷೇಧಿಸಿದೆ. ಹೀಗಾಗಿ ಅವರ ಅನುಸ್ಥಿತಿಯಲ್ಲಿ ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸುತ್ತಿದ್ದಾರೆ.