logo
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕೈಕ ಟೆಸ್ಟ್: ಭಾರತ ವನಿತೆಯರ ಸರ್ವಶ್ರೇಷ್ಠ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್; 347 ರನ್​ಗಳ ವಿಶ್ವದಾಖಲೆ ಗೆಲುವು

ಏಕೈಕ ಟೆಸ್ಟ್: ಭಾರತ ವನಿತೆಯರ ಸರ್ವಶ್ರೇಷ್ಠ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್; 347 ರನ್​ಗಳ ವಿಶ್ವದಾಖಲೆ ಗೆಲುವು

Prasanna Kumar P N HT Kannada

Dec 16, 2023 02:01 PM IST

google News

ಭಾರತ ವನಿತೆಯರ ಸರ್ವಶ್ರೇಷ್ಠ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್

    • India Women vs England Women Only Test: ಇಂಗ್ಲೆಂಡ್ ಮಹಿಳೆಯರ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ವನಿತೆಯರು ಅದ್ಭುತ ಪ್ರದರ್ಶನ ತೋರುವ 347 ರನ್​ಗಳ ವಿಶ್ವದಾಖಲೆ ಗೆಲುವು ಸಾಧಿಸಿದರು.
ಭಾರತ ವನಿತೆಯರ ಸರ್ವಶ್ರೇಷ್ಠ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್
ಭಾರತ ವನಿತೆಯರ ಸರ್ವಶ್ರೇಷ್ಠ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್ (PTI)

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ವನಿತೆಯರು (India Women vs England Women Only Test) ಐತಿಹಾಸಿಕ ಗೆಲುವಿಗೆ ಮುತ್ತಿಕ್ಕಿದ್ದಾರೆ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಖದರ್ ತೋರಿದ ಟೀಮ್ ಇಂಡಿಯಾ ಟಿ20 ಸರಣಿ ಸೋಲಿನ ಸೇಡು ತೀರಿಸಿಕೊಂಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಮನ್ ಪಡೆ ಬರೋಬ್ಬರಿ 347 ರನ್​ಗಳ ಅಂತರದಿಂದ ದಾಖಲೆ ಜಯ ಸಾಧಿಸಿದೆ. ವಿಶೇಷ ಅಂದರೆ ಈ ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ.

ಸ್ಕೋರ್ ವಿವರ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಮೊದಲ ಇನ್ನಿಂಗ್ಸ್​​ನಲ್ಲಿ 428 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಭಾರತದ ಸ್ಪಿನ್​ ದಾಳಿಗೆ ತತ್ತರಿಸಿ ಕೇವಲ 136 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 292 ರನ್​ಗಳ ಮುನ್ನಡೆ ಭಾರತ, ದ್ವಿತೀಯ ಇನ್ನಿಂಗ್ಸ್​​ನಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿ ಡಿಕ್ಲೇರ್ ಘೋಷಿಸಿತು. ಒಟ್ಟು 479 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆಂಗ್ಲರು 131ಕ್ಕೆ ಕುಸಿದರು.

ದೀಪ್ತಿ ಶರ್ಮಾ ಸ್ಪಿನ್ ಜಾದೂ

ಟೆಸ್ಟ್​ ಪಂದ್ಯದ ಗೆಲುವಿನಲ್ಲಿ ಆಲ್​ರೌಂಡರ್ ದೀಪ್ತಿ ಶರ್ಮಾ ಪ್ರಮುಖ ಪಾತ್ರವಹಿಸಿದರು. ಬ್ಯಾಟಿಂಗ್​ನಲ್ಲಿ ಅರ್ಧಶತಕ ಬಾರಿಸಿ ಬೌಲಿಂಗ್​ನಲ್ಲಿ ವಿಕೆಟ್​ ಬೇಟೆಯಾಡಿ ಇಂಗ್ಲೆಂಡ್ ಕುಸಿತಕ್ಕೆ ಕಾರಣರಾದರು. ಬ್ಯಾಟಿಂಗ್​ನಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮೊದಲ ಇನ್ನಿಂಗ್ಸ್​ನಲ್ಲಿ 67 ರನ್, 2ನೇ ಇನ್ನಿಂಗ್ಸ್​ನಲ್ಲಿ 20 ರನ್ ಕಲೆ ಹಾಕಿದರು. ಇನ್ನು ಬೌಲಿಂಗ್​ನಲ್ಲಿ ಮೊದಲ ಇನ್ನಿಂಗ್ಸ್ 5 ವಿಕೆಟ್, 2ನೇ ಇನ್ನಿಂಗ್ಸ್ 4 ವಿಕೆಟ್​ ಪಡೆದು ಆಲ್​ರೌಂಡ್ ಶೋ ತೋರಿಸಿ ಗೆಲುವಿನ ರೂವಾರಿಯಾದರು.

ವಿಶ್ವದಾಖಲೆಯ ಜಯ

347 ರನ್​ಗಳಿಂದ ಅಮೋಘ ಜಯ ಸಾಧಿಸಿದ ಭಾರತ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಹಿಂದೆ 1998ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ ಮಹಿಳೆಯರು 309 ರನ್​ಗಳ ಅಂತರದಿಂದ ಗೆದ್ದು ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿದು ಹರ್ಮನ್ ಪಡೆ ಹೊಸ ದಾಖಲೆ ನಿರ್ಮಿಸಿದೆ. ಈ ಗೆಲುವಿನ ವಿಶ್ವಾಸದಲ್ಲಿರುವ ಭಾರತದ ವನಿತೆಯರು ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲೂ ಗೆಲ್ಲುವ ಯೋಜನೆಯಲ್ಲಿದ್ದಾರೆ.

ಇಂಗ್ಲೆಂಡ್ ಕಳಪೆಯಾಟ

ಬಲಿಷ್ಠ ಇಂಗ್ಲೆಂಡ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಇಂಗ್ಲೆಂಡ್ ಆಡಿದ ಎರಡೂ ಇನ್ನಿಂಗ್ಸ್​​ಗಳ ಪೈಕಿ ಒಂದೇ ಒಂದು ಹಾಫ್ ಸೆಂಚುರಿ ಮಾತ್ರ ದಾಖಲಾಗಿದೆ. ನಟಾಲಿ ಸೀವರ್ ಮಾತ್ರ ಎರಡೂ ಇನ್ನಿಂಗ್ಸ್​ಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಉಳಿದಂತೆ ಹೀದರ್ ನೈಟ್, ಡೇನಿಯರ್ ವ್ಯಾಟ್, ಆ್ಯಮಿ ಜೋನ್ಸ್, ಸೋಫಿಯಾ ಡಂಕ್ಲಿ ಸೇರಿದಂತೆ ಪ್ರಮುಖ ಆಟಗಾರ್ತಿಯರೇ ರನ್ ಗಳಿಸಲು ವಿಫಲರಾದರು. ಅಲ್ಲದೆ, ಬೌಲಿಂಗ್​ನಲ್ಲೂ ಪರಿಣಾಮಕಾರಿಯಾಗಲಿಲ್ಲ.

ಭಾರತ ಸರ್ವಶ್ರೇಷ್ಠ ಪ್ರದರ್ಶನ

ಟಿ20ಯಲ್ಲಿ ಪ್ರದರ್ಶನ ತೋರಿದ ಟೀಮ್ ಇಂಡಿಯಾ, ಟೆಸ್ಟ್​ನಲ್ಲಿ ತಿರುಗೇಟು ನೀಡಿತು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅಲ್ಪ ಕಾಣಿಕೆ ನೀಡಿದರೆ, ಕನ್ನಡತಿ ಶುಭಾ ಸತೀಶ್ 69, ಜಮೈಮಾ ರೋಡ್ರಿಗಸ್ 68, ಯಾಸ್ತಿಕಾ ಭಾಟಿಯಾ 66, ದೀಪ್ತಿ ಶರ್ಮಾ 67 ರನ್ ಸಿಡಿಸಿ ಗಮನ ಸೆಳೆದರು. ಬೌಲಿಂಗ್​ನಲ್ಲಿ ದೀಪ್ತಿ ಶರ್ಮಾಗೆ ರೇಣುಕಾ ಠಾಕೂರ್, ಪೂಜಾ ವಸ್ತ್ರಾಕರ್, ಸ್ನೇಹ್ ರಾಣ, ರಾಜೇಶ್ವರಿ ಗಾಯಕ್ವಾಡ್ ಸಾಥ್ ಕೊಟ್ಟರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ