ಪಾಕಿಸ್ತಾನ ವಿರುದ್ಧ ಯುಎಸ್‌ಎ ಸೂಪರ್ ಓವರ್ ಗೆಲುವು; ಪಾಕ್‌ಗೆ ಕಂಟಕರಾಗಿದ್ದೇ ಭಾರತೀಯ ಮೂಲದ ಆಟಗಾರರು!
Jun 07, 2024 02:38 PM IST
ಪಾಕ್‌ಗೆ ಕಂಟಕರಾಗಿದ್ದೇ ಭಾರತೀಯ ಮೂಲದ ಆಟಗಾರರು!
- United States vs Pakistan: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತದ ಆಟಗಾರರೇ ಕಂಟಕರಾಗಿದ್ದಾರೆ. ಬಾಬರ್ ಅಜಮ್ ಬಳಗದ ವಿರುದ್ಧ ಯುಎಸ್‌ಎ ಐತಿಹಾಸಿಕ ಗೆಲುವು ದಾಖಲಿಸಿತು. ಆದರೆ ಅಮೆರಿಕ ತಂಡದಲ್ಲಿ ಆಡಿದ ಭಾರತೀಯ ಮೂಲದ ಮೂವರು ಆಟಗಾರರು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಯುಎಸ್ಎ ವಿರುದ್ಧದ ಸೋಲು ಪಾಕಿಸ್ತಾನ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅನುಭವಿ ಹಾಗೂ ಬಲಿಷ್ಠ ಪಾಕಿಸ್ತಾನ ವಿರುದ್ಧ, ಆತಿಥೇಯ ಅಮೆರಿಕ ತಂಡ ಸೂಪರ್ ಓವರ್‌ನಲ್ಲಿ ರೋಚಕ ಜಯ ಸಾಧಿಸಿತು. ಐಸಿಸಿ ಪೂರ್ಣ ಸದಸ್ಯತ್ವ ಪಡೆಯದ ದೇಶವೊಂದು ಉನ್ನತ ಶ್ರೇಯಾಂಕಿತ ತಂಡವೊಂದರ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿತು. ಇದರಿಂದ ಪಾಕ್‌ನ ಮಾಜಿ ಆಟಗಾರರು ಕೂಡಾ ಆಘಾತಕ್ಕೊಳಗಾಗಿದ್ದಾರೆ. ಮಾಜಿ ಚಾಂಪಿಯನ್ ತಂಡಕ್ಕೆ ಕ್ರಿಕೆಟ್ ಶಿಶು ಶಾಕ್ ಕೊಟ್ಟಿದ್ದು, ತಂಡದ ಗೆಲುವಿನಲ್ಲಿ ಭಾರತ ಮೂಲದ ಆಟಗಾರರೇ ಪ್ರಮುಖ ಪಾತ್ರ ವಹಿಸಿದರು.
ಐಸಿಸಿ ಟೂರ್ನಿಯಲ್ಲಿ ತನ್ನ ಪಾಲಿನ ಎರಡನೇ ಪಂದ್ಯವಾಡಿದ ಯುಎಸ್‌ಎ, ಯಾರೂ ಊಹಿಸಲಾಗದ ಸಾಧನೆ ಮಾಡಿತು. ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ಬಾಬರ್ ಅಜಮ್ ಬಳಗವನ್ನು ಸೋಲಿಸಿತು. ಅಚ್ಚರಿಯೆಂದರೆ ಪಾಕಿಸ್ತಾನವನ್ನು ಕಾಡಿದ್ದೇ ಪಾಕಿಸ್ತಾನ ಹಾಗೂ ಭಾರತದ ಮೂಲದ ಆಟಗಾರರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ ಯುಎಸ್ಎ ವೇಗಿ ಅಲಿ ಖಾನ್, ಪವರ್‌ಪ್ಲೇನಲ್ಲಿ ಫಖರ್ ಜಮಾನ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ಕೊಟ್ಟರು. ಇದೇ ವೇಳೆ ಈ ಪಂದ್ಯವನ್ನೇ ಗೆಲುವಿನತ್ತ ತಿರುಗಿಸಿದ ಇಬ್ಬರು ಆಟಗಾರರು ಭಾರತೀಯ ಮೂಲದವರು.
ಯುಎಸ್‌ಎ ನಾಯಕ ಮೊನಾಂಕ್ ಪಟೇಲ್ ಭಾರತ ಮೂಲದವರು
ಯುಎಸ್ ತಂಡದ ನಾಯಕ ಮೊನಾಂಕ್ ಪಟೇಲ್, ಗುಜರಾತ್‌ನ ಆನಂದ್‌ನಲ್ಲಿ 1993ರ ಮೇ 1ರಂದು ಜನಿಸಿದರು. ಪಾಕ್ ವಿರುದ್ಧ ಟಾಸ್ ಗೆದ್ದು ಚಾಣಾಕ್ಷ ನಿರ್ಧಾರ ತೆಗೆದುಕೊಂಡ ಮೊನಾಂಕ್, ಡಲ್ಲಾಸ್‌ನಲ್ಲಿ ಬಾಬರ್ ಪಡೆಯನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಪವರ್‌ಪ್ಲೇಯಲ್ಲಿ ತಂಡ ಬೌಲರ್‌ಗಳು ಪ್ರಾಬಲ್ಯ ಸಾಧಿಸುವುದನ್ನು ಖಚಿತಪಡಿಸಿಕೊಂಡರು. ಪರಿಣಾಮ ಬಲಿಷ್ಠ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯ್ತು. ಚೇಸಿಂಗ್ ವೇಳೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅವರು, ಕೇವಲ 38 ಎಸೆತಗಳಲ್ಲಿ 50 ರನ್ ಗಳಿಸಿದರು.
ಸೂಪರ್ ಗೆಲುವು ತಂದುಕೊಟ್ಟ ಸೌರಭ್ ನೇತ್ರವಾಲ್ಕರ್
ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ಬ್ಯಾಟರ್‌ಗಳನ್ನು ಕಟ್ಟಿಹಾಕಿದವರು ನೇತ್ರವಾಲ್ಕರ್. ಇವರು ಮೂಲತಃ ಮುಂಬೈನವರು. 32 ವರ್ಷದ ಅನುಭವಿ ಆಟಗಾರ ಯುಎಸ್ಎ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಒರಾಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೇತ್ರವಾಲ್ಕರ್, ಪಂದ್ಯದ ಆರಂಭದಲ್ಲಿ ಮೊಹಮ್ಮದ್ ರಿಜ್ವಾನ್ ಅವರನ್ನು ಔಟ್ ಮಾಡುವ ಮೂಲಕ ಆರಂಭದಲ್ಲೇ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಆ ಬಳಿಕ ಇಫ್ತಿಖರ್ ಅಹ್ಮದ್ ವಿಕೆಟ್ ಕೂಡಾ ಪಡೆದರು. ಅದಾದ ಬಳಿಕ ಸೂಪರ್ ಓವರ್‌ನ ಮೂರನೇ ಎಸೆತದಲ್ಲಿ ಮತ್ತೊಮ್ಮೆ ಪವರ್ ಹಿಟ್ಟರ್ ವಿಕೆಟ್ ಕಬಳಿಸಿದರು. ಕೇವಲ 13 ರನ್ ಮಾತ್ರ ಬಿಟ್ಟುಕೊಟ್ಟು ಟಿ 20 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
3 ವಿಕೆಟ್ ಪಡೆದ ಕನ್ನಡಿಗ
ಯುಎಸ್‌ಎ ತಂಡದಲ್ಲಿ ಕನ್ನಡಿಗ ಕೂಡಾ ಇದ್ದಾರೆ. ನೋಸ್ತುಶ್ ಕೆಂಜಿಗೆ ಪ್ರಮುಖ 3 ವಿಕೆಟ್ ಕಬಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವಾರದ ನೋಸ್ತುಶ್, ಹಿಂದೆ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ್ದರು. ಇದೀಗ ಯುಎಸ್ಎ ಟಿ20 ವಿಶ್ವಕಪ್ ತಂಡದಲ್ಲಿ ಆಡುತ್ತಿದ್ದಾರೆ. 2019ರಲ್ಲಿ ಯುಎಸ್ಎ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನೋಸ್ತುಶ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಉಸ್ಮಾನ್ ಖಾನ್, ಶದಾಬ್ ಖಾನ್ ಹಾಗೂ ಅಜಾಮ್ ಖಾನ್ ವಿಕೆಟ್ ಪಡೆದು ಮಿಂಚಿದ್ದಾರೆ.
ಟಿ20 ವಿಶ್ವಕಪ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ