ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನ; 95 ವರ್ಷದ ಆಟಗಾರನ ಅಗಲಿಕೆಗೆ ಬಿಸಿಸಿಐ ಸಂತಾಪ
Feb 13, 2024 01:28 PM IST
ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನ
- Dattajirao Gaekwad: ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ರಾಷ್ಟ್ರೀಯ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ತಂದೆ ದತ್ತಾಜಿರಾವ್ ಗಾಯಕ್ವಾಡ್ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಗಾಯಕ್ವಾಡ್ ಅವರ ನಿಧನಕ್ಕೆ ಬಿಸಿಸಿಐ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ (Dattajirao Gaekwad) ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಫೆಬ್ರವರಿ 13ರ ಮಂಗಳವಾರ ನಿಧನರಾಗಿದ್ದಾರೆ. ಹಿರಿಯ ಕ್ರಿಕೆಟಿಗನ ಅಗಲಿಕೆಗೆ ಬಿಸಿಸಿಐ ಶ್ರದ್ಧಾಂಜಲಿ ಸಲ್ಲಿಸಿದೆ.
ಭಾರತದ ಮಾಜಿ ಆರಂಭಿಕ ಆಟಗಾರನಿಗೆ 95 ವರ್ಷ ವಯಸ್ಸಾಗಿತ್ತು. ದತ್ತಾಜಿರಾವ್ ಅವರು ಭಾರತದ ರಾಷ್ಟ್ರೀಯ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ತಂದೆ. ಕಳೆದ 12 ದಿನಗಳಿಂದ ಬರೋಡಾ ಆಸ್ಪತ್ರೆಯ ಐಸಿಯುನಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅವರು, ಮಂಗಳವಾರ ಮುಂಜಾನೆ ಕೊನೆಯುಸಿರೆಳೆಸಿದ್ದಾರೆ. ಈ ಕುರಿತು ಕುಟುಂಬದ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ಇದನ್ನೂ ಓದಿ | Sarfaraz Khan: ಕೆಎಲ್ ರಾಹುಲ್ ಅಲಭ್ಯ; ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ಗೆ ಸರ್ಫರಾಜ್ ಖಾನ್ ಪದಾರ್ಪಣೆ
“ಭಾರತದ ಮಾಜಿ ನಾಯಕ ಮತ್ತು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ಅವರ ನಿಧನಕ್ಕೆ ಬಿಸಿಸಿಐ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಅವರು 11 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 1959ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ, ಬರೋಡಾ ತಂಡವು 1957-58ರ ಋತುವಿನಲ್ಲಿ ರಣಜಿ ಟ್ರೋಫಿ ಗೆದ್ದಿತ್ತು” ಎಂದು ಬಿಸಿಸಿಐ ತಿಳಿಸಿದೆ.
1952ರಿಂದ 1961ರವರೆಗೆ ಭಾರತ ತಂಡದ ಪರ 11 ಟೆಸ್ಟ್ ಪಂದ್ಯಗಳಲ್ಲಿ ಗಾಯಕ್ವಾಡಿ ಆಡಿದ್ದರು. 1959ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ರಾಷ್ಟ್ರೀಯ ತಂಡದ ನಾಯಕರಾಗಿದ್ದರು.
ಬಲಗೈ ಬ್ಯಾಟರ್ 1952ರಲ್ಲಿ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದರು. 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದರು.
ಇದನ್ನೂ ಓದಿ | ಬಶೀರ್ ಬಳಿಕ ರೆಹಾನ್ ಅಹ್ಮದ್‌ಗೂ ವೀಸಾ ಸಮಸ್ಯೆ; ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟಿಗನ ತಡೆದ ಅಧಿಕಾರಿಗಳು
ರಣಜಿ ಟ್ರೋಫಿಯಲ್ಲಿ, ಗಾಯಕ್ವಾಡ್ 1947ರಿಂದ 1961ರವರೆಗೆ ಬರೋಡಾ ತಂಡವನ್ನು ಪ್ರತಿನಿಧಿಸಿದ್ದರು. ಅವರು 14 ಶತಕಗಳು ಸೇರಿದಂತೆ 47.56 ಸರಾಸರಿಯಲ್ಲಿ 3139 ರನ್ ಗಳಿಸಿದ್ದಾರೆ. 1959-60ರ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಅಜೇಯ 249 ರನ್ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)