logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡ ಕೊನೆಗೂ ಪ್ರಕಟ; ಇಂಗ್ಲೆಂಡ್ ವಿರುದ್ಧದ ಉಳಿದ 3 ಪಂದ್ಯಗಳಿಗೂ ವಿರಾಟ್ ಕೊಹ್ಲಿ ಅಲಭ್ಯ, ಶ್ರೇಯಸ್ ಅಯ್ಯರ್ ಡ್ರಾಪ್

ಭಾರತ ತಂಡ ಕೊನೆಗೂ ಪ್ರಕಟ; ಇಂಗ್ಲೆಂಡ್ ವಿರುದ್ಧದ ಉಳಿದ 3 ಪಂದ್ಯಗಳಿಗೂ ವಿರಾಟ್ ಕೊಹ್ಲಿ ಅಲಭ್ಯ, ಶ್ರೇಯಸ್ ಅಯ್ಯರ್ ಡ್ರಾಪ್

Prasanna Kumar P N HT Kannada

Feb 10, 2024 11:31 AM IST

google News

ಭಾರತ ತಂಡ ಪ್ರಕಟ; ಇಂಗ್ಲೆಂಡ್ ವಿರುದ್ಧದ ಉಳಿದ 3 ಪಂದ್ಯಗಳಿಗೂ ವಿರಾಟ್ ಕೊಹ್ಲಿ ಅಲಭ್ಯ

    • Team India Squad Announced : ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್​ ಪಂದ್ಯಗಳಿಗೂ ಭಾರತ ತಂಡ ಪ್ರಕಟವಾಗಿದೆ. ವಿರಾಟ್ ಕೊಹ್ಲಿ ಈ ಪಂದ್ಯಗಳಿಂದಲೂ ಹೊರಗುಳಿದಿದ್ದಾರೆ.
ಭಾರತ ತಂಡ ಪ್ರಕಟ; ಇಂಗ್ಲೆಂಡ್ ವಿರುದ್ಧದ ಉಳಿದ 3 ಪಂದ್ಯಗಳಿಗೂ ವಿರಾಟ್ ಕೊಹ್ಲಿ ಅಲಭ್ಯ
ಭಾರತ ತಂಡ ಪ್ರಕಟ; ಇಂಗ್ಲೆಂಡ್ ವಿರುದ್ಧದ ಉಳಿದ 3 ಪಂದ್ಯಗಳಿಗೂ ವಿರಾಟ್ ಕೊಹ್ಲಿ ಅಲಭ್ಯ (ANI)

ಇಂಗ್ಲೆಂಡ್​ ವಿರುದ್ಧದ ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಕೊನೆಗೂ ಪ್ರಕಟಿಸಿದೆ. ನಿರೀಕ್ಷೆಯಂತೆ ವಿರಾಟ್​ ಕೊಹ್ಲಿ (Virat Kohli) ಸಂಪೂರ್ಣವಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. ಆದರೆ ಫಿಟ್ನೆಸ್ ವರದಿ ಬಂದ ಬಳಿಕವೇ ರವೀಂದ್ರ ಜಡೇಜಾ-ಕೆಎಲ್ ರಾಹುಲ್ ಅವರು ಸರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಸರಣಿಯ ಉಳಿದ ಪಂದ್ಯಗಳಿಗೆ ಆಯ್ಕೆಗೆ ಅಲಭ್ಯರಾಗಲಿದ್ದಾರೆ. ಮಂಡಳಿಯು ಕೊಹ್ಲಿ ಅವರ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತದೆ. ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದೆ. ಗಾಯಗೊಂಡಿದ್ದ ರಾಹುಲ್,​ ಜಡೇಜಾ ತಂಡದಲ್ಲಿ ಸ್ಥಾನ ಪಡೆದರೂ ಫಿಟ್ನೆಸ್​ ವರದಿ ಆಧಾರ ಮೇಲೆ ಆಡುವ 11ಕ್ಕೆ ಆಯ್ಕೆ ಮಾಡಲಾಗುತ್ತದೆ.

ಅಲ್ಲದೆ, ಬೆನ್ನು ಮತ್ತು ತೊಡೆ ಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಅವರು ಉಳಿದ ಸರಣಿಯಿ ಹೊರಬಿದ್ದಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಅಲ್ಲದೆ, ಎರಡನೇ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಮೊಹ್ಮಮದ್ ಸಿರಾಜ್ ತಂಡಕ್ಕೆ ಮರಳಿದ್ದಾರೆ. ಆಕಾಶ್ ದೀಪ್ ತಂಡದ ಭಾಗವಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್​​ಗಳಿಗೆ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.

ಮೊದಲ ಎರಡು ಪಂದ್ಯಗಳ ಫಲಿತಾಂಶ

ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತ್ತು. ಹೈದರಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್​ 28 ರನ್​ಗಳ ಅಂತರದ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಪಡೆದಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ 246 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 420 ರನ್ ಕಲೆ ಹಾಕಿತ್ತು. ಬಳಿಕ 190 ರನ್​ಗಳ ಹಿನ್ನಡೆಯೊಂದಿಗೆ ಇಂಗ್ಲೆಂಡ್ 2ನೇ ಇನ್ನಿಂಗ್ಸ್​ನಲ್ಲಿ 420 ರನ್ ಗಳಿಸಿ 231 ರನ್ ಗುರಿ ನೀಡಿತ್ತು. ಭಾರತ 202 ರನ್​ಗಳಿಗೆ ಆಲೌಟ್ ಆಯಿತು.

ಇನ್ನು ವಿಶಾಖಪಟ್ಟಣಂನಲ್ಲಿ ಎರಡನೇ ಟೆಸ್ಟ್​ನಲ್ಲಿ ಭಾರತ ತಿರುಗೇಟು ನೀಡಿತು. ಮೊದಲ ಇನ್ನಿಂಗ್ಸ್​​ನಲ್ಲಿ 396 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 253 ರನ್​ಗಳಿಗೆ ಸರ್ವಪತನ ಕಂಡಿತು. 143 ರನ್​ಗಳ ಮುನ್ನಡೆ ಭಾರತ 2ನೇ ಇನ್ನಿಂಗ್ಸ್​​ನಲ್ಲಿ 255 ರನ್ ಗಳಿಸಿತು. ಇದರೊಂದಿಗೆ 399 ರನ್​ಗಳ ಗುರಿ ನೀಡಿತು. ಆದರೆ, ಇಂಗ್ಲೆಂಡ್ 292ಕ್ಕೆ ಆಲೌಟಾಗಿ 106 ರನ್​ಗಳ ಸೋಲನುಭವಿಸಿತು. ಇದರೊಂದಿಗೆ ಸರಣಿ 1-1ರಲ್ಲಿ ಸಮಬಲ ಸಾಧಿಸಿತು.

ಇದೀಗ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15ರಂದು ರಾಜ್​ಕೋಟ್​ನಲ್ಲಿ ನಡೆಯಲಿದೆ. ಫೆಬ್ರವರಿ 23 ರಿಂದ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಜರುಗಲಿದೆ. ಐದನೇ ಟೆಸ್ಟ್​ ಮಾರ್ಚ್​ 7ರಿಂದ ಪ್ರಾರಂಭವಾಗಲಿದ್ದು, ಧರ್ಮಶಾಲಾದಲ್ಲಿ ನಡೆಯಲಿದೆ.

ಇಂಗ್ಲೆಂಡ್ ತಂಡ

ಬೆನ್ ಸ್ಟೋಕ್ಸ್, ಜೇಮ್ಸ್ ಆಂಡರ್ಸನ್, ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಶೋಯಿಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾವ್ಲಿ, ಬೆನ್ ಡಕೆಟ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ