ಐಪಿಎಲ್ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಮೇಲೆ ಕಣ್ಣಿಟ್ಟಿರುವ ತಂಡಗಳನ್ನು ಹೆಸರಿಸಿದ ಸಂಜಯ್ ಮಂಜ್ರೇಕರ್
Dec 14, 2023 08:05 AM IST
ಜೋಶ್ ಹೇಜಲ್ವುಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್.
- ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಖರೀದಿಗೆ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವುದು ಖಚಿತ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಭವಿಷ್ಯ ನುಡಿದಿದ್ದಾರೆ.
2024ರ ಐಪಿಎಲ್ ಮಿನಿ ಹರಾಜಿಗೆ (IPL 2024 Auction) ದಿನಗಣನೆ ಆರಂಭಗೊಂಡಿದೆ. ಫ್ರಾಂಚೈಸಿಗಳು ಘಟಾನುಘಟಿ ಆಟಗಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಭರ್ಜರಿ ಪ್ಲಾನ್ಗಳನ್ನು ರೂಪಿಸುತ್ತಿವೆ. ತಮಗೆ ಬೇಕಿರುವ ಸ್ಲಾಟ್ಗಳನ್ನು ಭರ್ತಿ ಮಾಡಿಕೊಳ್ಳಲು ತಮ್ಮಲ್ಲಿರುವ ಪರ್ಸ್ ಮೊತ್ತದೊಂದಿಗೆ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಕಸರತ್ತು ನಡೆಸುತ್ತಿವೆ. ಕೆಲವರು ಬೃಹತ್ ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆಯೂ ಇದೆ. ಒಟ್ಟು 333 ಆಟಗಾರರು ಹರಾಜಿನ ಕಣದಲ್ಲಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ ಆಟಗಾರರಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂದು ಹೇಳಲಾಗುತ್ತಿದೆ. ಆ ಅಟಗಾರರ ಖರೀದಿಗೆ ಒಲವು ತೋರುತ್ತಿವೆ. ಇದರ ನಡುವೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ (Sanjay Manjrekar) ಯಾವ ಆಟಗಾರನ ಮೇಲೆ ಹೆಚ್ಚಿನ ಹಣ ಸುರಿಯಲಿವೆ ಎಂಬುದನ್ನು ತಿಳಿಸಿದ್ದಾರೆ. ಅದರಲ್ಲೂ ಆ ಆಟಗಾರನ ಖರೀದಿಗೆ ಫ್ರಾಂಚೈಸಿಗಳು ಮುಗಿಬೀಳಲಿವೆ ಎಂದು ಹೇಳಿದ್ದಾರೆ. ಜೊತೆಗೆ ಆತನ ಮೇಲೆ ಕಣ್ಣಿಟ್ಟಿರುವ ತಂಡಗಳನ್ನೂ ಹೆಸರಿಸಿದ್ದಾರೆ.
ಕಮಿನ್ಸ್ ಖರೀದಿಗೆ ಪೈಪೋಟಿ ಖಚಿತ
ಸಂಜಯ್ ಮಂಜ್ರೇಕರ್ ಹೇಳಿದ್ದು ಬೇರೆ ಯಾರೂ ಅಲ್ಲ, ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದ ನಾಯಕ, ವೇಗಿ ಪ್ಯಾಟ್ ಕಮಿನ್ಸ್ (Pat Cummins). ಹೌದು, ಈ ಬಾರಿಯ ಮಿನಿ ಹರಾಜಿನಲ್ಲಿ ಕಮಿನ್ಸ್ ಖರೀದಿಗೆ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವುದು ಖಚಿತ ಎಂದು ಹೇಳಿದ್ದಾರೆ. ಕಮಿನ್ಸ್ ಖರೀದಿಗೆ ಬೇಡಿಕೆ ಹೆಚ್ಚಿರುವುದು ಕಾರಣ ಏನು ಎಂಬುದನ್ನೂ ವಿವರಿಸಿದ್ದಾರೆ. ಬ್ಯಾಟ್ ಮತ್ತು ಬಾಲ್ ಜೊತೆಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಅವರಿಗಿರುವ ಕಾರಣ ಅವರ ಮೇಲೆ ಕೋಟಿ ಕೋಟಿ ಸುರಿಯಲು ಫ್ರಾಂಚೈಸಿಗಳು ಯೋಜನೆ ರೂಪಿಸಿವೆ ಎಂದು ತಿಳಿಸಿದ್ದಾರೆ.
ಕಮಿನ್ಸ್ ಈ ಹಿಂದೆ ಐಪಿಎಲ್ನ ಆರು ಸೀಸನ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. 42 ಪಂದ್ಯಗಳಲ್ಲಿ 45 ವಿಕೆಟ್ ಉರುಳಿಸಿರುವ ವೇಗಿ, 379 ರನ್ ಕೂಡ ಬಾರಿಸಿದ್ದಾರೆ. ಆ್ಯಶಸ್ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್ ಹಿಪ್, ವಿಶ್ವಕಪ್ ಸೇರಿದಂತೆ ಹಲವು ಯಶಸ್ವಿ ಸರಣಿಗಳಲ್ಲಿ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ 2023ರ ಐಪಿಎಲ್ ನಿಂದ ಹಿಂದೆ ಸರಿದಿದ್ದ ಕಮಿನ್ಸ್, ಈ ಬಾರಿ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೂಲ ಬೆಲೆ 2 ಕೋಟಿ. ಮಂಜ್ರೇಕರ್ ಆಸೀಸ್ ವೇಗಿ ಖರೀದಿಗೆ ಹಲವು ಫ್ರಾಂಚೈಸಿಗಳಿಗೆ ಸಲಹೆ ಕೂಡ ನೀಡಿದ್ದಾರೆ.
ಎಕ್ಸ್ ಫ್ಯಾಕ್ಟರ್ ಆಟಗಾರ
ಪಿಚ್ ಯಾವುದೇ ಇರಲಿ, ಎಲ್ಲೇ ಇರಲಿ ಅದಕ್ಕೆ ಬೇಗನೇ ಕಮಿನ್ಸ್ ಹೊಂದಿಕೊಳ್ಳಲಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನ ಬೌಲರ್‌ಗಳ ಸಾಕಷ್ಟು ಕಷ್ಟಪಡುತ್ತಾರೆ. ಅವರು ಎಕ್ಸ್ ಫ್ಯಾಕ್ಟರ್ ಆಟಗಾರ. ನಾವು ಯೋಚಿಸುವ ಮಟ್ಟಕ್ಕಿಂತ ಒಂದು ಹೆಜ್ಜೆ ಮುಂದಿದ್ದಾರೆ. ಹಾಗಾಗಿ ಆತನ ಖರೀದಿಗೆ ಫ್ರಾಂಚೈಸಿಗಳು ಒಲವು ತೋರಲಿವೆ ಎಂದು ಹೇಳಿದ್ದಾರೆ. ಕಮಿನ್ಸ್ ಕೊನೆಯ ಬಾರಿಗೆ ಐಪಿಎಲ್ ಆಡಿದ್ದು, 2022ರಲ್ಲಿ. ಆ ಸೀಸನ್‌ನಲ್ಲಿ 5 ಪಂದ್ಯಗಳಲ್ಲಿ 63 ರನ್ ಮತ್ತು 7 ವಿಕೆಟ್ ಪಡೆದರು. ವಿಶ್ವಕಪ್ ಗೆದ್ದ ಕಾರಣ ಅವರನ್ನು ಕ್ಯಾಪ್ಟನ್ಸಿ ಮೆಟಿರಿಯಲ್ ಆಗಿ ಹೆಚ್ಚಿನ ಬೇಡಿಕೆ ಇದೆ.
ಕಮಿನ್ಸ್ ಕ್ಯಾಪ್ಟನ್ಸಿ ಮೆಟಿರಿಯಲ್
ಕೆಲವು ತಂಡಗಳು ನಾಯಕತ್ವ ಮತ್ತು ವಿಭಿನ್ನ ನಾಯಕತ್ವ ಹುಡುಕಾಟದಲ್ಲಿವೆ. ಈಗಾಗಲೇ ಕೆಲ ತಂಡಗಳ ನಾಯಕರು ಮುಂದಿನ ಸೀಸನ್‌ನಲ್ಲಿ ನಾಯಕತ್ವ ಕಳೆದುಕೊಂಡರೂ ಅಚ್ಚರಿ ಇಲ್ಲ. ಹಾಗಾಗಿ ಅಂತಹ ಫ್ರಾಂಚೈಸಿಗಳು ಕಮಿನ್ಸ್ ಮೇಲೆ ಕಣ್ಣಿಟ್ಟಿವೆ. ಏಕೆಂದರೆ ಅವರ ಇತ್ತೀಚಿನ ಪ್ರದರ್ಶನ ಮಾಲೀಕರ ಗಮನ ಸೆಳೆದಿದೆ. ಖರೀದಿಸುವ ಸಾಧ್ಯತೆಯೂ ಇಲ್ಲ. ಹಾಗಂತ ತಳ್ಳಿ ಹಾಕುವಂತಿಲ್ಲ ಎಂದು ಮಂಜ್ರೇಕರ್ ಹೇಳಿದ್ದಾರೆ. ಹಾಗೆಯೇ ಯಾವ ತಂಡಗಳು ಬೌಲರ್‌ಗಳ ಹುಟುಕಾಟದಲ್ಲಿವೆ ಎಂಬುದನ್ನು ತಿಳಿಸಿದ್ದಾರೆ.
ವಿದೇಶಿ ವೇಗಿಗಳ ಮೇಲೆ ಇವರಿಗೆ ಕಣ್ಣು
ಸನ್ ರೈಸರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಸೇರಿದಂತೆ ಹಲವು ತಂಡಗಳು ವಿದೇಶಿ ವೇಗದ ಬೌಲರ್ ಹುಡುಕಾಟದಲ್ಲಿವೆ. ಹಾಗಾಗಿ ನಾಯಕತ್ವದ ಅಗತ್ಯ ಇಲ್ಲದೆ ಖರೀದಿಸಿದರೂ ಕಮಿನ್ಸ್ ಗೆ ಬೇಡಿಕೆ ಹೆಚ್ಚಿರಲಿದೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಕಳೆದ ತಿಂಗಳು ಆಸ್ಟ್ರೇಲಿಯಾ 6 ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಕೆಲವ ವರದಿಗಳ ಪ್ರಕಾರ ಕಮಿನ್ಸ್, ಸುಮಾರು ಹತ್ತು ಕೋಟಿಗಳಿಗೂ ಹೆಚ್ಚು ಖರೀದಿಯಾಗಲಿದ್ದಾರೆ ಎಂದು ಹೇಳಿದ್ದಾರೆ.