IPL 2024: ಸಿಎಸ್‌ಕೆ vs ಕೆಕೆಆರ್ ಪಂದ್ಯದಲ್ಲಿ ಚೆಪಾಕ್ ಪಿಚ್ ಯಾರಿಗೆ ನೆರವಾಗಲಿದೆ? ಕಡಲ ನಗರಿ ಚೆನ್ನೈ ಹವಾಮಾನ ಹೀಗಿದೆ
Apr 08, 2024 07:15 AM IST
ಸಿಎಸ್‌ಕೆ vs ಕೆಕೆಆರ್ ಪಂದ್ಯದಲ್ಲಿ ಚೆಪಾಕ್ ಪಿಚ್ ಯಾರಿಗೆ ನೆರವಾಗಲಿದೆ
- CSK vs KKR: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಬೇಕಾಗಿದೆ. ಚೆಪಾಕ್ ಮೈದಾನದಲ್ಲಿ ಏಪ್ರಿಲ್ 8ರಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ. ಪಂದ್ಯದ ಪಿಚ್, ಹವಾಮಾನ ವರದಿ ಹೀಗಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೆ ತವರಿನ ಪಂದ್ಯಕ್ಕೆ ಸಜ್ಜಾಗಿದೆ. ತವರಿನ ಹೊರಗೆ ಸತತ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದ ಸಿಎಸ್‌ಕೆ, ಏಪ್ರಿಲ್ 8ರ ಸೋಮವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (CSK vs KKR) ತಂಡವನ್ನು ಎದುರಿಸುತ್ತಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಬೀಗುತ್ತಿರುವ ಕೆಕೆಆರ್, ಗೆಲುವಿನ ಓಟವನ್ನು ಮುಂದುವರೆಸಲು ಯೋಜಿಸುತ್ತಿದೆ. ಅತ್ತ ಋತುರಾಜ್ ನೇತೃತ್ವದ ಚೆನ್ನೈ ಹ್ಯಾಟ್ರಿಕ್ ಸೋಲನ್ನು ತಪ್ಪಿಸಲು ತಂತ್ರ ರೂಪಿಸುತ್ತಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ, ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದೆ. ಇದುವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು, +2.518 ನೆಟ್ ರನ್ ರೇಟ್‌ನೊದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅತ್ತ ಸಿಎಸ್‌ಕೆ ತಂಡವು ಈವರೆಗೆ ಆಡಿದ 4 ಪಂದ್ಯಗಳಲ್ಲಿ ಮೊದಲ 2ರಲ್ಲಿ ಗೆದ್ದಿದೆ. ಆ ನಂತರ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸತತವಾಗಿ ಮುಗ್ಗರಿಸಿದೆ. ಹೀಗಾಗಿ +0.517 ನೆಟ್ ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಮುಖಾಮುಖಿ ದಾಖಲೆ
ಚೆನ್ನೈ ಮತ್ತು ಕೋಲ್ಕತಾ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್‌ಕೆ 18 ಪಂದ್ಯಗಳನ್ನು ಗೆದ್ದರೆ, ಎರಡು ಬಾರಿಯ ಚಾಂಪಿಯನ್ ಕೆಕೆಆರ್ 10 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ ಚೆನ್ನೈ 3ರಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.
ಇದನ್ನೂ ಓದಿ | ಟಿ20 ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಾಂಡ್ಯ ಬಳಗದ ರೆಕಾರ್ಡ್ ಪಟ್ಟಿ
ಎಂಎ ಚಿದಂಬರಂ ಸ್ಟೇಡಿಯಂ ಪಿಚ್ ವರದಿ
ಚೆಪಾಕ್ ಪಿಚ್ ಸಮತೋಲಿತ ಆಟಕ್ಕೆ ಹೆಸರುವಾಸಿ. ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಚೆನ್ನೈ ಪಿಚ್ ಸಮಾನ ಅವಕಾಶಗಳನ್ನು ನೀಡುತ್ತದೆ. ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ನೆರವಾಗಬಲ್ಲ ಪಿಚ್‌ನಲ್ಲಿ ವೇಗಿಗಳು ಕೂಡಾ ಹಲವು ಬಾರಿ ಮೇಲುಗೈ ಸಾಧಿಸಿದ ನಿದರ್ಶನಗಳಿವೆ. ಮೈದಾನದಲ್ಲಿ ಚೇಸಿಂಗ್ ಮಾಡುವುದು ಸವಾಲಿನ ಕೆಲಸ. ಕಳೆದ 20 ಪಂದ್ಯಗಳಲ್ಲಿ ಇಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 152 ರನ್. ಇದೇ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು 45 ಪ್ರತಿಶತದಷ್ಟು ಗೆದ್ದಿದೆ. ಸಂಪ್ರದಾಯವನ್ನು ಮೀರಿ, ಮೈದಾನದಲ್ಲಿ ವೇಗಿಗಳು 60.56 ಪ್ರತಿಶತ ವಿಕೆಟ್ ಪಡೆದಿದ್ದಾರೆ.
ಚೆನ್ನೈ ಹವಾಮಾನ ವರದಿ
ಪಂದ್ಯ ಆರಂಭದ ವೇಳೆ ಚೆನ್ನೈನಲ್ಲಿ ತಾಪಮಾನವು ಸುಮಾರು 27ರಿಂದ 31 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ. ಸಮುದ್ರ ತೀರ ಚೆನ್ನೈ ನಗರದಲ್ಲಿ ಪಂದ್ಯದುದ್ದಕ್ಕೂ ಬಿಸಿಯ ವಾತಾವರಣ ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಶಿವಂ ದುಬೆ, ಡೇರಿಲ್ ಮಿಚೆಲ್, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಕೆಕೆಆರ್ ಸಂಭಾವ್ಯ ತಂಡ
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಅಂಗ್ಕ್ರಿಶ್ ರಘುವಂಶಿ /ನಿತೀಶ್ ರಾಣಾ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ/ವೈಭವ್ ಅರೋರಾ, ವರುಣ್ ಚಕ್ರವರ್ತಿ.