ಐಪಿಎಲ್ 2024ರ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಎಲ್ಲಾ ಪಂದ್ಯಗಳು ಭಾರತದಲ್ಲೇ, ಇಲ್ಲಿದೆ ಸಂಪೂರ್ಣ ಶೆಡ್ಯೂಲ್
Mar 25, 2024 06:45 PM IST
ಐಪಿಎಲ್ 2024ರ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ
- IPL 2024 Full Schedule : ಐಪಿಎಲ್ 2024ರ ಆವೃತ್ತಿಯ ಪಂದ್ಯಗಳ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐಪ್ರಕಟಿಸಿದೆ. ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆಯಲಿದ್ದು, ಏಪ್ರಿಲ್ 8ರಿಂದ ಮೇ 26ರವರೆಗೆ ನಡೆಯಲಿದೆ. ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಐಪಿಎಲ್ 2024ರ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಹಂತದ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಮೊದಲು ಪ್ರಕಟಿಸಲಾಗಿತ್ತು. ಇದೀಗ ಪಂದ್ಯಾವಳಿಯ ಫೈನಲ್ ಸೇರಿ ಎಲ್ಲಾ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ. ಮೊದಲ ಹಂತದ ಪಂದ್ಯಗಳು ಏಪ್ರಿಲ್ 7ಕ್ಕೆ ಕೊನಗೊಳ್ಳಲಿದೆ. ಇದೀಗ ಎರಡನೇ ಹಂತದ ಪಂದ್ಯಗಳು ಏಪ್ರಿಲ್ 8ರಿಂದಲೇ ಆರಂಭಗೊಳ್ಳಲಿದೆ. ಸಂಪೂರ್ಣ ಪಂದ್ಯಾವಳಿಯು ಭಾರತದಲ್ಲೇ ನಡೆಯುತ್ತಿದ್ದು, ಮೇ 26ರಂದು ಫೈನಲ್ ಪಂದ್ಯ ನಡೆಯಲಿದೆ.
ಟೂರ್ನಿಯ ಎರಡನೇ ಹಂತದ ಎಲ್ಲಾ 74 ಪಂದ್ಯಗಳು ಭಾರತದ ಮೈದಾನಗಳಲ್ಲಿಯೇ ನಡೆಯುತ್ತಿವೆ. ಅಹಮದಾಬಾದ್ ಮತ್ತು ಚೆನ್ನೈನಲ್ಲಿ ಅಂತಿಮ ಹಂತದ ಪಂದ್ಯಗಳು ನಡೆಯಲಿವೆ. ಮೇ 21 ಮತ್ತು 22ರಂದು ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೇ 24ರಂದು ಕ್ವಾಲಿಫೈಯರ್ 2 ಮತ್ತು ಮೇ 26ರಂದು ಫೈನಲ್ ಪಂದ್ಯ ನಡೆಯಲಿದೆ.
ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಏಪ್ರಿಲ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ಹಾಗೂ ಕೆಕೆಆಎರ್ ತಂಡಗಳ ಪಂದ್ಯದೊಂದಿಗೆ ಎರಡನೇ ಹಂತದ ಪಂದ್ಯಗಳು ಆರಂಭವಾಗುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವುದು ತಡವಾಗಿತ್ತು. ಇತ್ತೀಚೆಗೆ ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟಿಸಲಾಗಿದೆ. ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಜೂನ್ 4ರಂದು ಮತಎಣಿಕೆ ನಡೆಯಲಿದೆ. ಹೀಗಾಗಿ ಯಾವುದೇ ಸಮಸ್ಯೆಗಳಾಗದಂತೆ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.
ಇದನ್ನೂ ಓದಿ | ಏನೇ ಆದ್ರೂ ನಮ್ಮ ನಾಯಕ ರೋಹಿತ್ ಮಾತ್ರ, ಹಾರ್ದಿಕ್ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಹಾರ್ಟ್‌ಬ್ರೇಕ್ ಇಮೋಜಿಗಳದ್ದೇ ಸದ್ದು
ಚುನಾವಣೆ ಇದ್ದರೂ, ಪಂದ್ಯಾವಳಿಯ ನಡುವೆ ಯಾವುದೇ ಅಂತರವಿಲ್ಲ. ಸಂಪೂರ್ಣ ಲೀಗ್ ಹಂತವು ವಿರಾಮವಿಲ್ಲದೆ ನಡೆಯಲಿದೆ. ಲೀಗ್ ಹಂತದ ಬಳಿಕ ಒಂದು ದಿನ ವಿರಾಮದ ಬಳಿಕ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಆ ಬಳಿಕ ಫೈನಲ್ ಪಂದ್ಯಕ್ಕೂ ಮುನ್ನ ಒಂದು ದಿನದ ಅಂತರವಿದೆ.