ಮಾರ್ಚ್ 22ರಿಂದ ಐಪಿಎಲ್ 2024ರ ಆವೃತ್ತಿ ಆರಂಭ; ಚುನಾವಣೆ ನಡುವೆಯೂ ಭಾರತದಲ್ಲೇ ನಡೆಯಲಿದೆ ಪಂದ್ಯಾವಳಿ
Feb 20, 2024 04:52 PM IST
ಮಾರ್ಚ್ 22ರಿಂದ ಐಪಿಎಲ್ 2024ರ ಆವೃತ್ತಿ ಆರಂಭ
- Indian Premier League: ಐಪಿಎಲ್ 2024ರ ಆವೃತ್ತಿಯು ಮಾರ್ಚ್ 22 ರಿಂದ ಆರಂಭವಾಗುವ ಸಾಧ್ಯತೆಯಿದೆ ಎಂದು ಲೀಗ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆಗಳ ದಿನಾಂಕಗಳ ನಡುವೆಯೂ ಸಂಪೂರ್ಣ ಪಂದ್ಯಾವಳಿಯನ್ನು ಭಾರತದಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಐಪಿಎಲ್ 2024ರ (Indian Premier League) ಆವೃತ್ತಿಯು ಮಾರ್ಚ್ 22 ರಿಂದ ಆರಂಭವಾಗುವ ಸಾಧ್ಯತೆಯಿದೆ ಎಂದು ಲೀಗ್ ಅಧ್ಯಕ್ಷ ಅರುಣ್ ಧುಮಾಲ್ (Arun Dhumal) ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆ ನಡುವೆಯೂ ಸಂಪೂರ್ಣ ಪಂದ್ಯಾವಳಿಯನ್ನು ಭಾರತದಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ನಡುವೆ ಐಪಿಎಲ್ ಪಂದ್ಯಾವಳಿಯನ್ನು ವಿದೇಶಿ ನೆಲದಲ್ಲಿ ನಡೆಸುವ ಸಾಧ್ಯತೆ ಇತ್ತು. ಆದರೆ, ಭಾರತದಲ್ಲೇ ನಡೆಸುವ ಕುರಿತು ಐಪಿಎಲ್ ಚೇರ್‌ಮೆನ್ ಸುಳಿವು ನೀಡಿದ್ದಾರೆ. ಪಂದ್ಯಾವಳಿಯ ಆರಂಭ ದಿನಾಂಕ ಸ್ಪಷ್ಟವಾದರೂ, ಐಪಿಎಲ್ 17ನೇ ಆವೃತ್ತಿಯ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಅನಾವರಣಗೊಂಡಿಲ್ಲ.
ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬಳಿಕ ಸಂಪೂರ್ಣ ವೇಳಾಪಟ್ಟಿ ಪ್ರಕಟ
ಫೆಬ್ರುವರಿ 20ರ ಮಂಗಳವಾರ ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಧುಮಾಲ್, ಪಂದ್ಯಾವಳಿಯ ಮೊದಲ 15 ದಿನಗಳಲ್ಲಿ ನಡೆಯುವ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಆರಂಭದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಟೂರ್ನಿಯ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಸಾರ್ವತ್ರಿಕ ಚುನಾವಣೆ ದಿನಾಂಕಗಳ ಘೋಷಣೆಯ ನಂತರವೇ ನಿರ್ಧರಿಸಲಾಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ | ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಭಾವುಕ
ಮಾರ್ಚ್ ತಿಂಗಳ ಆರಂಭದಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಆ ಬಳಿಕ ಸಂಪೂರ್ಣ ಟೂರ್ನಿಯ ಚಿತ್ರಣ ಸಿಗಲಿದೆ.
“ನಾವು ಮಾರ್ಚ್ 22ರಂದು ಪಂದ್ಯಾವಳಿಯನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇವೆ. ನಾವು ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದೇವೆ. ಮೊದಲು ಆರಂಭಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಸಂಪೂರ್ಣ ಪಂದ್ಯಾವಳಿಯು ಭಾರತದಲ್ಲಿ ನಡೆಯಲಿದೆ” ಎಂದು ಧುಮಾಲ್ ಹೇಳಿದ್ದಾರೆ.
ಇದನ್ನೂ ಓದಿ | ರಣಜಿ ಟ್ರೋಫಿ: ಚಂಡೀಗಢ ವಿರುದ್ಧದ ಪಂದ್ಯ ಡ್ರಾಗೊಂಡರೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ
2009ರಲ್ಲಿ, ಸಂಪೂರ್ಣ ಐಪಿಎಲ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014ರಲ್ಲಿಯೂ ಸಾರ್ವತ್ರಿಕ ಚುನಾವಣೆಗಳ ಕಾರಣದಿಂದಾಗಿ ಆರಂಭಿಕ 20 ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು. ಆದರೆ, 2019ರಲ್ಲಿ ಚುನಾವಣೆಗಳ ಹೊರತಾಗಿಯೂ ಸಂಪೂರ್ಣ ಟೂರ್ನಿ ಭಾರತದಲ್ಲಿಯೇ ನಡೆಯಿತು. ಕೋವಿಡ್ ನಿರ್ಬಂಧಗಳಿಂದಾಗಿ 2020ರ ಆವೃತ್ತಿಯನ್ನು ಸಂಪೂರ್ಣವಾಗಿ ಯುಎಇಯಲ್ಲಿ ನಡೆಸಲಾಯ್ತು. 2021ರ ಕೆಲವು ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು.
ಐಪಿಎಲ್ 2024ರ ಋತು ಮುಗಿದ ಬೆನ್ನಲ್ಲೇ ನಂತರ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಲೀಗ್‌ನ ಫೈನಲ್ ಪಂದ್ಯವು ಮೇ 26 ರಂದು ನಡೆಯಲಿದೆ.
ಇದನ್ನೂ ಓದಿ | ಕೇವಲ 100 ರೂಪಾಯಿಗೆ ಡಬ್ಲ್ಯೂಪಿಎಲ್ ಪಂದ್ಯ ವೀಕ್ಷಿಸಿ; ಆನ್‌ಲೈನ್ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್
(This copy first appeared in Hindustan Times Kannada website. To read more like this please logon to kannada.hindustantimes.com)