logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ ಅರ್ಧಶತಕ, ದಿನೇಶ್‌ ಕಾತಿಕ್‌ ಬೊಂಬಾಟ್ ಫಿನಿಶಿಂಗ್;‌ ಪಂಜಾಬ್‌ ಮಣಿಸಿ ತವರಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ

ಕೊಹ್ಲಿ ಅರ್ಧಶತಕ, ದಿನೇಶ್‌ ಕಾತಿಕ್‌ ಬೊಂಬಾಟ್ ಫಿನಿಶಿಂಗ್;‌ ಪಂಜಾಬ್‌ ಮಣಿಸಿ ತವರಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ

Jayaraj HT Kannada

Mar 25, 2024 11:53 PM IST

google News

ಪಂಜಾಬ್‌ ಮಣಿಸಿ ತವರಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ

    • Royal Challengers Bengaluru vs Punjab Kings: ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡ ಗೆಲುವಿನ ಹಳಿಗೆ ಮರಳಿದೆ. ಪಂಜಾಬ್ ಕಿಂಗ್ಸ್​ ವಿರುದ್ಧ ದಿನೇಶ್‌ ಕಾರ್ತಿಕ್‌ ಹಾಗೂ ವಿರಾಟ್‌ ಕೊಹ್ಲಿ ಅಬ್ಬರದ ನೆರವಿನಿಂದ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಪಂಜಾಬ್‌ ಮಣಿಸಿ ತವರಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ
ಪಂಜಾಬ್‌ ಮಣಿಸಿ ತವರಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ (AP)

ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಗೆಲುವಿನ ಆರಂಭಕ್ಕೆ ತವರು ಮೈದಾನವೇ ಬೇಕಾಯ್ತು. ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಹಾಗೂ ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ ಮಾಸ್ಟರ್‌ಕ್ಲಾಸ್‌ ಫಿನಿಶಿಂಗ್‌ ನೆರವಿಂದ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಸಿಎಸ್‌ಕೆ ವಿರುದ್ಧದ‌ ಮೊದಲ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ, ಇದೀಗ ಎರಡನೇ ಪಂದ್ಯದಲ್ಲಿ ಜಯದ ಹಳಿಗೆ ಮರಳಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತು. ಆ ಮೂಲಕ ಟೂರ್ನಿಯಲ್ಲಿ ಮೊದಲ ಜಯ ಒಲಿಸಿಕೊಂಡಿತು.

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಪಂಜಾಬ್‌ ಪರ, ಜಾನಿ ಬೇಟರ್‌ಸ್ಟೋ ಕೇವಲ 8 ರನ್‌ಗಳಿಸಿ ಔಟಾದರು. ಪ್ರಭ್‌ಸಿಮ್ರಾನ್‌ ಸಿಂಗ್‌ 25 ರನ್‌ ಗಳಿಸಿ ಕೆಲಕಾಲ ಭರವಸೆಯ ಆಟವಾಡಿದರು. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅಬ್ಬರಿಸಿದ್ದ ಲಿವಿಂಗ್‌ಸ್ಟನ್‌ 17 ರನ್‌ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ನಾಯಕನಾಟವಾಡಿದ ಶಿಖರ್‌ ಧವನ್‌ 45 ರನ್‌ ಗಳಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಸತತ 2 ವಿಕೆಟ್‌ ಕಳೆದುಕೊಂಡು ತಂಡ ಸಂಕಷ್ಟಕ್ಕೊಳಗಾಯಿತು. ಸ್ಯಾಮ್‌ ಕರನ್‌ 22 ಹಾಗೂ ಜಿತೇಶ್‌ ಶರ್ಮಾ 27 ರನ್‌ ಕಲೆ ಹಾಕಿದರು. ಕೊನೆ ಕ್ಷಣಗಳಲ್ಲಿ ಅಬ್ಬರಿಸಿದ ಶಶಾಂಕ್‌ ಸಿಂಗ್‌ 2 ಸಿಕ್ಸರ್‌ ಸಹಿತ 21 ರನ್‌ ಕಲೆ ಹಾಕಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು.

ವಿರಾಟ್‌ ಕೊಹ್ಲಿಗೆ ಎರಡು ಬಾರಿ ಜೀವದಾನ

ಚಿನ್ನಸ್ವಾಮಿ ಅಂಗಳದಲ್ಲಿ 176 ರನ್‌ ಆರ್‌ಸಿಬಿಗೆ ದೊಡ್ಡ ಸವಾಲು ಆಗಿರಲಿಲ್ಲ. ಅದರಂತೆಯೇ ಚೇಸಿಂಗ್‌ಗಿಳಿದ ಫಾಫ್‌ ಪಡೆ, ಆರಂಭದಿಂದಲೇ ದೊಡ್ಡ ಹೊಡೆತಕ್ಕೆ ಕೈ ಹಾಕಿತು. ಆರಂಭದಲ್ಲೇ ಕ್ಯಾಚ್‌ ಡ್ರಾಪ್‌ ಆಗಿ ವಿರಾಟ್‌ ಕೊಹ್ಲಿ ಜೀವದಾನ ಪಡೆದರು. ಸಿಕ್ಕ ಜೀವದಾನವನ್ನು ಸದ್ಬಳಕೆ ಮಾಡಿದ ಕಿಂಗ್‌, ಆಕರ್ಷಕ ಅರ್ಧಶತಕ ಸಿಡಿಸಿದರು. 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 77 ರನ್ ಸಿಡಿಸಿದರು. ಅತ್ತ ನಾಯಕ ಫಾಫ್‌ ಮತ್ತು ಕ್ಯಾಮರೂನ್‌ ಗ್ರಿನ್‌ ಇಬ್ಬರೂ ತಲಾ 3 ರನ್‌ ಗಳಿಸಿ ರಬಾಡಾಗೆ ವಿಕೆಟ್‌ ಒಪ್ಪಿಸಿದರು.

ಇದನ್ನೂ ಓದಿ | ಐಪಿಎಲ್ 2024ರ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಎಲ್ಲಾ ಪಂದ್ಯಗಳು ಭಾರತದಲ್ಲೇ, ಇಲ್ಲಿದೆ ಸಂಪೂರ್ಣ ಶೆಡ್ಯೂಲ್

ವಿರಾಟ್‌ ಕೊಹ್ಲಿ ಎರಡು ಬಾರಿ ಜೀವದಾನ ಪಡೆದರು. ಎರಡು ಬಾರಿಯೂ ಸ್ಯಾಮ್‌ ಕರನ್‌ ಬೌಲಿಂಗ್‌ನಲ್ಲೇ ಎನ್ನುವುದು ವಿಶೇಷ. ಮೊದಲ ಓವರ್‌ನಲ್ಲಿ ಬೇರ್‌ಸ್ಟೋ ಕ್ಯಾಚ್‌ ಡ್ರಾಪ್‌ ಮಾಡಿದರೆ, ಎರಡನೇ ಬಾರಿ ಚಹಾರ್‌ ಕ್ಯಾಚ್‌ ಕೈಚೆಲ್ಲಿದರು. ಇದು ಪಂಜಾಬ್‌ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ರಜತ್‌ ಪಾಟೀದಾರ್‌ 18 ರನ್ ಗಳಿಸಿದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೇವಲ 3 ರನ್‌ ಗಳಿಸಿದರು. ಇಬ್ಬರೂ ಹರ್‌ಪ್ರೀತ್‌ ಬ್ರಾರ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿ ಪ್ರತಿ ಓವರ್‌ನಲ್ಲಿ ಕನಿಷ್ಠ 12 ರನ್‌ಗಳಂತೆ ಗಳಿಸಬೇಕಿತ್ತು. ದಿನೇಶ್‌ ಕಾರ್ತಿಕ್‌ ಮತ್ತು ಮಹಿಪಾಲ್‌ ಲೋಮ್ರರ್‌ ಫಿನಿಶಿಂಗ್‌ ಜವಾಬ್ದಾರಿ ವಹಿಸಿಕೊಂಡರು. ಇಬ್ಬರೂ ಬೌಂಡರಿ ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದರು. ಲೋಮ್ರರ್‌ 8 ಎಸೆತಕ್ಕೆ 17 ರನ್‌ ಗಳಿಸಿದರೆ, ಡಿಕೆ 2 ಸಿಕ್ಸರ್‌ ಹಾಗೂ 3 ಬೌಂಡರಿ ಸಹಿತ 10 ಎಸೆತಗಳಲ್ಲಿ 28 ರನ್‌ ಸಿಡಿಸಿದರು. ಆ ಮೂಲಕ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ