logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ಪಂದ್ಯಗಳ ವೇಳೆ ಕ್ರಿಕೆಟಿಗರು ಕುಡಿಯೋದೇನು; ಬಣ್ಣ ಬಣ್ಣದ ಪಾನೀಯಗಳಲ್ಲಿ ಏನಿರುತ್ತೆ?

ಐಪಿಎಲ್‌ ಪಂದ್ಯಗಳ ವೇಳೆ ಕ್ರಿಕೆಟಿಗರು ಕುಡಿಯೋದೇನು; ಬಣ್ಣ ಬಣ್ಣದ ಪಾನೀಯಗಳಲ್ಲಿ ಏನಿರುತ್ತೆ?

Jayaraj HT Kannada

May 17, 2024 04:45 PM IST

google News

ಐಪಿಎಲ್‌ ಪಂದ್ಯಗಳ ವೇಳೆ ಕ್ರಿಕೆಟಿಗರು ಕುಡಿಯೋದೇನು; ಬಣ್ಣ ಬಣ್ಣದ ಡ್ರಿಂಕ್ಸ್‌ನಲ್ಲಿ ಏನಿರುತ್ತೆ?

    • ಐಪಿಎಲ್ ಸೇರಿದಂತೆ ಕ್ರಿಕೆಟ್‌ ಪಂದ್ಯಗಳು ನಡೆಯುವಾಗ ಮೈದಾನದಲ್ಲೇ ಆಟಗಾರರು ವಿವಿಧ ಬಗೆಯ ಪಾನೀಯಗಳನ್ನು ಕುಡಿಯುತ್ತಾರೆ. ಬಣ್ಣ-ಬಣ್ಣಗಳಲ್ಲಿ ಕಾಣುವ ಈ ಡ್ರಿಂಕ್ಸ್‌ನಲ್ಲಿ ಏನಿರುತ್ತೆ ಎಂಬ ಕುತೂಹಲ ನಿಮಗಿದ್ದರೆ, ಈ ಸುದ್ದಿ ಓದಿ.
ಐಪಿಎಲ್‌ ಪಂದ್ಯಗಳ ವೇಳೆ ಕ್ರಿಕೆಟಿಗರು ಕುಡಿಯೋದೇನು; ಬಣ್ಣ ಬಣ್ಣದ ಡ್ರಿಂಕ್ಸ್‌ನಲ್ಲಿ ಏನಿರುತ್ತೆ?
ಐಪಿಎಲ್‌ ಪಂದ್ಯಗಳ ವೇಳೆ ಕ್ರಿಕೆಟಿಗರು ಕುಡಿಯೋದೇನು; ಬಣ್ಣ ಬಣ್ಣದ ಡ್ರಿಂಕ್ಸ್‌ನಲ್ಲಿ ಏನಿರುತ್ತೆ? (ANI)

ಐಪಿಎಲ್‌ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಸಮಯದಲ್ಲಿ ಆಟಗಾರರು ಪಂದ್ಯಗಳ ನಡುವೆ ಡ್ರಿಂಕ್ಸ್‌ ಬ್ರೇಕ್‌ ತೆಗೆದುಕೊಳ್ಳುತ್ತಾರೆ. ಐಪಿಎಲ್‌ ಪಂದ್ಯಗಳ ವೇಳೆ ಟೈಮ್‌ ಔಟ್‌ ಇರುತ್ತದೆ. ಈ ಸಮಯದಲ್ಲಿ ಆಟಗಾರರು ಬಾಟಲಿ ಹಿಡಿದು ಕೆಲವೊಂದು ಪಾನೀಯಗಳನ್ನು ಕುಡಿಯುತ್ತಾರೆ. ಇನ್ನೂ ಕೆಲವು ಆಟಗಾರರ ಫೀಲ್ಡಿಂಗ್‌ ನಡುವೆ ಅಥವಾ ಬ್ಯಾಟಿಂಗ್‌ ನಡುವೆಯೂ ಸ್ವಲ್ಪ ಸ್ವಲ್ಪವೇ ಪಾನೀಯಗಳನ್ನು ಕುಡಿಯುತ್ತಾರೆ. ಸಾಮಾನ್ಯವಾಗಿ ನಾವೆಲ್ಲಾ ಬಾಯಾರಿಕೆಯಾದಾಗ ನೀರು ಕುಡಿಯುತ್ತೇವೆ. ಆದರೆ, ಆಟಗಾರರು ನೀರು ಕುಡಿಯುವುದು ಕಾಣಸಿಗುವುದು ಕಡಿಮೆ. ವಿವಿಧ ಬಣ್ಣಗಳಲ್ಲಿ ಕಾಣುವ ಪಾನೀಯಗಳು ಅವರ ಹೊಟ್ಟೆ ಸೇರುತ್ತದೆ. ಬಹುತೇಕ ಸಮಯದಲ್ಲಿ ಆ ಬಾಟಲಿಗಳಲ್ಲಿ ಪಾನೀಯದ ಹೆಸರಾಗಲಿ, ಅದನ್ನು ತಯಾರಿಸಿದ ಸಂಸ್ಥೆಯ ಹೆಸರಾಗಲಿ ಇರುವುದಿಲ್ಲ. ಇದು ಯಾಕೆ ಎಂಬ ಪ್ರಶ್ನೆಯೂ ನಿಮ್ಮಲ್ಲಿರಬಹುದು. ಇದಕ್ಕೆ ಉತ್ತರ ನಾವು ಕೊಡ್ತೀನಿ ನೋಡಿ.

ಐಪಿಎಲ್‌ ಸೇರಿದಂತೆ ಕ್ರಿಕೆಟ್ ಪಂದ್ಯದ ವೇಳೆ ಕ್ರಿಕೆಟಿಗರು ಏನು ತಿನ್ನುತ್ತಾರೆ ಮತ್ತು ಅವರು ಏನೇನು ಕುಡಿಯುತ್ತಾರೆ ಎಂಬ ಬಗ್ಗೆ ಹೆಚ್ಚಿನವರಿಗೆ ಕುತೂಹಲ ಇರುತ್ತದೆ. ಪಂದ್ಯದ ಸಮಯದಲ್ಲಿ ಹೆಚ್ಚು ಆಹಾರ ಸೇವಿಸುವಂತಿಲ್ಲ. ಏಕೆಂದರೆ ಹೊಟ್ಟೆ ತುಂಬಾ ತಿಂದರೆ ಆಡುವುದು ಕಷ್ಟ. ಹೀಗಾಗಿ ಘನ ರೂಪದ ಆಹಾರಕ್ಕೆ ಬದಲಿಯಾಗಿ ಪಾನೀಯಗಳ ಮೂಲಕವೇ ಆಟಗಾರರು ದೇಹಕ್ಕೆ ಬೇಕಾದ ಶಕ್ತಿಯನ್ನು ಪೂರೈಸಿಕೊಳ್ಳುತ್ತಾರೆ.

ಆಟಗಾರರಿಗೆ ಫಿಟ್ನೆಸ್‌ ತುಂಬಾ ಮುಖ್ಯ. ಯಾವುದೇ ದೇಶದ ಯಾವುದೇ ಆಟಗಾರರಾದರೂ, ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಚುರುಕಾಗಿ ಆಡಲು ಸಾಕಷ್ಟು ಶಕ್ತಿ ಅಗತ್ಯ. ಫಿಟ್ನೆಸ್ ಬೇಕೆಂದರೆ, ದೇಹದಲ್ಲಿ ಆ ಶಕ್ತಿ-ಸಾಮರ್ಥ್ಯ ಇರಬೇಕು. ವಿರಾಟ್‌ ಕೊಹ್ಲಿ ಸೇರಿದಂತೆ ಟೀಮ್‌ ಇಂಡಿಯಾದ ಹಲವು ಆಟಗಾರರ ಫಿಟ್‌ನೆಸ್‌ ನೋಡಿ ನಿಮಗೆ ಅಚ್ಚರಿಯೂ ಆಗಿರಬಹುದು. ಇದಕ್ಕೆ ಅವರ ಅಹಾರ ಕ್ರಮವೇ ಕಾರಣ.

ಆಟಗಾರರು ಏನು ಕುಡಿಯುತ್ತಾರೆ?

ಪಂದ್ಯದ ವೇಳೆ ಡ್ರಿಂಕ್ ಬ್ರೇಕ್ ಇರುತ್ತದೆ. ಆ ಸಮಯದಲ್ಲಿ ಆಟಗಾರರು ಯಾವ ಪಾನೀಯವನ್ನು ಕುಡಿಯುತ್ತಾರೆ ಮತ್ತು ಅದರಲ್ಲಿ ಏನಿದೆ ಎಂಬ ಆಸಕ್ತಿ ಎಲ್ಲರಿಗೂ ಇದೆ. ಪಂದ್ಯದ ಸಮಯದಲ್ಲಿ ಆಟಗಾರರು ದೇಹವನ್ನು ಹೈಡ್ರೀಕರಿಸುವುದು ತುಂಬಾ ಮುಖ್ಯ. ಆಟದ ವೇಳೆ ದೇಹ ಹೆಚ್ಚು ಬೆವರುತ್ತದೆ. ಆಗ ದೇಹಕ್ಕೆ ಮತ್ತೆ ನೀರಿನಂಶ ಬೇಕಾಗುತ್ತದೆ. ಹೀಗಾಗಿ ದೇಹವನ್ನು ಹೈಡ್ರೀಕರಿಸಲು ಪಾನೀಯಗಳನ್ನು ಆಟಗಾರರು ಕುಡಿಯುತ್ತಾರೆ. ಸಾಮಾನ್ಯವಾಗಿ ಆಡುವಾಗ 3 ಲೀಟರ್‌ನಷ್ಟು ನೀರು ದೇಹಕ್ಕೆ ಬೇಕು. ಇದು ಪಾನೀಯದ ರೂಪದಲ್ಲಿ ದೇಹ ಸೇರುತ್ತದೆ.

ಆಟಗಾರರು ಕುಡಿಯುವ ಪಾನೀಯ ಯಾವುದು?

ಆಟಗಾರರು ಕ್ರೀಡಾ ಸಮಯದಲ್ಲಿ ಕುಡಿಯುವಂಥಾ ಪಾನೀಯಗಳನ್ನು ಕುಡಿಯುತ್ತಾರೆ. ಇದನ್ನು ಸ್ಪೋರ್ಟ್ಸ್‌ ಡ್ರಿಂಕ್ಸ್‌ ಅಥವಾ ಎಲೆಕ್ಟ್ರೋಲೈಟ್ ಪಾನೀಯಗಳು ಎಂದೂ ಕರೆಯುತ್ತಾರೆ. ಈ ಪಾನೀಯಗಳಲ್ಲಿ ಸೋಡಿಯಂ ಹಾಗೂ ಪೊಟ್ಯಾಸಿಯಮ್ ಅಂಶ ಇರುತ್ತವೆ. ಇನ್ನೂ ಕೆಲವು ಡ್ರಿಂಕ್ಸ್‌ನಲ್ಲಿ ಪ್ರೋಟೀನ್ ಕೂಡ ಇರುತ್ತದೆ. ಆಡುವಾಗ ಆಹಾರ ಹೆಚ್ಚು ಸೇವಿಸಲಾಗದ ಕಾರಣದಿಂದಾಗಿ ಪಾನೀಯದಲ್ಲೇ ಆಹಾರದ ಶಕ್ತಿ ಸಿಗುವಂತೆ ಇದನ್ನು ಕುಡಿಯುತ್ತಾರೆ.

ಇದನ್ನೂ ಓದಿ | ಆರ್‌ಸಿಬಿ ಕಳೆದ 5 ಐಪಿಎಲ್ ಆವೃತ್ತಿಗಳಲ್ಲಿ ಎಷ್ಟು ಭಾರಿ ಪ್ಲೇ-ಆಫ್‌ಗೆ ಹೋಗಿದೆ; ಹೇಗಿತ್ತು ರೋಚಕ ಹಣಾಹಣಿ

ಎಲೆಕ್ಟ್ರೋಲೈಟ್ ಡ್ರಿಂಕ್ಸ್‌ಗಳನ್ನು ಕ್ರೀಡಾ ಸಮಯದಲ್ಲಿ ಕುಡಿಯುವ ಸಲುವಾಗಿ ಉತ್ಪಾದಿಸಲಾಗುತ್ತದೆ. ಕ್ರೀಡಾಪಟುಗಳು ಆಡುವ ಸಮಯದಲ್ಲಿ ದೇಹಕ್ಕೆ ಸಾಕಷ್ಟು ನೀರು, ವಿದ್ಯುದ್ವಿಚ್ಛೇದ್ಯಗಳು (ಎಲೆಕ್ಟ್ರೋಲೈಟ್ಸ್) ಮತ್ತು ಶಕ್ತಿಯ ಪೂರೈಕೆಗಾಗಿ ಕುಡಿಯುತ್ತಾರೆ.

ಆಡುವಾಗ ದೇಹದಿಂದ ಸಾಕಷ್ಟು ಬೆವರು ಹೊರಹೋಗುತ್ತದೆ. ಬೆವರಿನ ಮೂಲಕ ದೇಹದಿಂದ ಎಲೆಕ್ಟ್ರೋಲೈಟ್ಸ್‌ ಕೂಡಾ ಹೊರಹೋಗುತ್ತದೆ. ಆಗ ದೇಹದ ಶಕ್ತಿ ಕುಂದುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲೆಕ್ಟ್ರೋಲೈಟ್ಸ್‌ ಇರುವ ಪಾನೀಯಗಳನ್ನು ಆಟಗಾರರು ಕುಡಿಯುತ್ತಾರೆ. ಇದರಲ್ಲಿರುವ ಸೋಡಿಯಂ ಮತ್ತು ಪೊಟ್ಯಾಸಿಯಮ್ ದೇಹವನ್ನು ಮತ್ತೆ ಹೈಡ್ರೀಕರಿಸುವುದರೊಂದಿಗೆ, ಆಟಗಾರರು ಕಳೆದುಕೊಂಡ ಶಕ್ತಿಯನ್ನು ಮತ್ತೆ ದೇಹಕ್ಕೆ ಪೂರೈಸುತ್ತದೆ.

ಇದನ್ನೂ ಓದಿ | ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ