ರಾಜಸ್ಥಾನ vs ಪಂಜಾಬ್, ಡೆಲ್ಲಿ vs ಗುಜರಾತ್; ಭಾನುವಾರದ 2 ಪಂದ್ಯಗಳ ಪಿಚ್-ಹವಾಮಾನ ವರದಿ, ಸಂಭಾವ್ಯ ತಂಡ
Published May 18, 2025 06:40 AM IST
ರಾಜಸ್ಥಾನ vs ಪಂಜಾಬ್, ಡೆಲ್ಲಿ vs ಗುಜರಾತ್; ಭಾನುವಾರದ 2 ಪಂದ್ಯಗಳ ಪಿಚ್-ಹವಾಮಾನ ವರದಿ
- ಐಪಿಎಲ್‌ನಲ್ಲಿ ಭಾನುವಾರವೆಂದರೆ ಡಬಲ್ ಧಮಾಕಾ. ಒಂದು ವಾರ ಮುಂದೂಡಿದ ನಂತರ ಮತ್ತೆ ಆರಂಭವಾದ ಟೂರ್ನಿಯಲ್ಲಿ ಇಂದು ಎರಡು ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಮೂರು ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಪ್ಲೇಆಫ್ ಹಂತ ಸಮೀಪಿಸುತ್ತಿದ್ದು, ಅಂತಿಮ ಹಂತದ ಲೆಕ್ಕಾಚಾರ ಕೂಡಾ ಮುನ್ನೆಲೆಗೆ ಬಂದಿದೆ.

ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಎರಡನೇ ಹಂತದ ಪಂದ್ಯಗಳು ಆರಂಭವಾಗಿದೆ. ಭಾನುವಾರ (ಮೇ 18) ಟೂರ್ನಿಯಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತುಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದೇ ವೇಳೆ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗುಜರಾತ್ ಟೈಟನ್ಸ್ ಸವಾಲು ಹಾಕಲಿದೆ. ರಾಜಸ್ಥಾನವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದರೆ, ಪಂಜಾಬ್ ತಂಡಕ್ಕೆ ಗೆಲುವು ಅನಿವಾರ್ಯ. ಅತ್ತ ತವರಿನಲ್ಲಿ ಟೈಟನ್ಸ್ ಪಡೆಯನ್ನು ಎದುರಿಸುತ್ತಿರುವ ಡೆಲ್ಲಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯ.
ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಇದುವರೆಗೆ ಐದು ಬಾರಿ 200 ರನ್ ಗಡಿ ದಾಟುವ ಮೂಲಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ರಾಜಸ್ಥಾನ್ ರಾಯಲ್ಸ್ ಕೂಡ ನಾಲ್ಕು ಬಾರಿ 200 ಕ್ಕಿಂತ ಹೆಚ್ಚು ಸ್ಕೋರ್ ಗಳಿಸಿದೆ. ಆದರೆ ಪ್ಲೇಆಫ್ ತಲುಪಲು ಸಾಧ್ಯವಾಗಿಲ್ಲ.
ಆರ್‌ಆರ್ vs ಪಿಬಿಕೆಎಸ್ ಪಿಚ್ ಹಾಗೂ ಹವಾಮಾನ ವರದಿ
ಜೈಪುರ ಪಿಚ್ ನಿಧಾನವಾಗಿರುವ ನಿರೀಕ್ಷೆ ಇದೆ. ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗುವುದರಿಂದ, ಇಬ್ಬನಿಯು ಪ್ರಮುಖ ಅಂಶವಾಗುವ ಸಾಧ್ಯತೆಯಿಲ್ಲ. ಜೈಪುರದಲ್ಲಿ ಹಗಲಿನ ತಾಪಮಾನವು ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಬಿಸಿಲಿನಿಂದ ಆಟಗಾರರಿಗೆ ಇಲ್ಲಿ ಆಡಲು ತುಸು ಕಷ್ಟವಾಗಬಹುದು. ಮಳೆಯಾಗುವ ಸಾಧ್ಯತೆ ಇಲ್ಲ.
ಪಂಜಾಬ್ ಸಂಭಾವ್ಯ ಆಡುವ ಬಳಗ: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ಮಿಚ್ ಓವನ್, ನೆಹಾಲ್ ವಧೇರಾ, ಅಜ್ಮತುಲ್ಲಾ ಉಮರ್ಜಾಯ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಕೈಲ್ ಜೇಮೀಸನ್.
ರಾಜಸ್ಥಾನ ಸಂಭಾವ್ಯ ತಂಡ: ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಶುಭಂ ದುಬೆ, ವನಿಂದು ಹಸರಂಗ, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ನಾಂದ್ರೆ ಬರ್ಗರ್, ಆಕಾಶ್ ಮಧ್ವಲ್.
ಪ್ಲೇಆಫ್‌ಗೆ ತಲುಪಲು ಡಿಸಿ ತಂಡ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಲೇಬೇಕಾದ ಅಗತ್ಯವಿದೆ. ಅತ್ತ ಶುಭ್ಮನ್ ಗಿಲ್ ನೇತೃತ್ವದ ಜಿಟಿಗೆ ಒಂದು ಗೆಲುವು ಪ್ಲೇಆಫ್ ಹಂತಕ್ಕೆ ಕೊಂಡೊಯ್ಯಲು ನೆರವಾಗುತ್ತದೆ.
ಡಿಸಿ vs ಜಿಟಿ ಪಿಚ್ ಮತ್ತು ಹವಾಮಾನ ವರದಿ
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ತಂಡಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಈ ಅವಧಿಯಲ್ಲಿ ದೆಹಲಿಯಲ್ಲಿ ಆಡಿದ ಒಟ್ಟು ಒಂಬತ್ತು ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡವು ಏಳು ಬಾರಿ ಗೆದ್ದಿದೆ. ಈ ಐಪಿಎಲ್ ಋತುವಿನಲ್ಲಿ ದೆಹಲಿಯಲ್ಲಿ ನಾಲ್ಕು ಪಂದ್ಯಗಳು ನಡೆದಿದ್ದು, ಮೂರು ಬಾರಿ 185ಕ್ಕೂ ಹೆಚ್ಚು ರನ್ ಹರಿದಿವೆ. ಶನಿವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಇರಲಿದೆ. ಹೀಗಾಗಿ ಮಳೆಯ ಮುನ್ಸೂಚನೆ ಇಲ್ಲ.
ಡೆಲ್ಲಿ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅನುಪಸ್ಥಿತಿ ಕಾಡಲಿದೆ. ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ, ಮೇ 24ರವರೆಗೆ ಮಾತ್ರ ಲಭ್ಯವಿರುತ್ತಾರೆ. ಅಲ್ಲದೆ, ಅವರು ಈ ಪಂದ್ಯಕ್ಕೆ ಲಭ್ಯರಿರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಅತ್ತ ಜಿಟಿ ತಂಡದಲ್ಲಿ ಜೋಸ್ ಬಟ್ಲರ್ ಮತ್ತು ಕಗಿರೊ ರಬಾಡ ಪ್ಲೇಆಫ್‌ವರೆಗೆ ಇರಲಿದ್ದಾರೆ. ಆ ನಂತರ ಬಟ್ಲರ್ ಬದಲಿಗೆ ಕುಸಲ್ ಮೆಂಡಿಸ್ ಬರಲಿದ್ದಾರೆ.
ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ: ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ಶರ್ಫಾನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಜೆರಾಲ್ಡ್ ಕೊಯೆಟ್ಜಿ/ಕಾಗಿಸೊ ರಬಾಡ, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್(ವಿಕೆಟ್ ಕೀಪರ್), ಕೆಎಲ್ ರಾಹುಲ್, ಸಮೀರ್ ರಿಜ್ವಿ, ಅಕ್ಷರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಅಶುತೋಷ್ ಶರ್ಮಾ, ಮುಖೇಶ್ ಕುಮಾರ್, ದುಷ್ಮಂತ ಚಮೀರಾ, ಕುಲ್ದೀಪ್ ಯಾದವ್, ಟಿ ನಟರಾಜನ್.