ಐಪಿಎಲ್ ವಿಶ್ವದ ಎರಡನೇ ಶ್ರೀಮಂತ ಕ್ರೀಡಾ ಲೀಗ್; ಇದು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳನ್ನು ಸ್ಪರ್ಧಾತ್ಮಕವಾಗಿಸಿದೆ: ಅರುಣ್ ಧುಮಾಲ್
Mar 08, 2024 06:38 PM IST
ಐಪಿಎಲ್ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳನ್ನು ಸ್ಪರ್ಧಾತ್ಮಕವಾಗಿಸಿದೆ ಎಂದ ಅರುಣ್ ಧುಮಾಲ್
- Indian Premier League: ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯಾವಳಿಯು ಮಾರ್ಚ್ 22ರಂದು ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾಗುತ್ತಿದೆ. ಸಾರ್ವತ್ರಿಕ ಚುನಾವಣೆಗಳ ಹೊರತಾಗಿಯೂ ಲೀಗ್ ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಯಲಿದೆ.
ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಲೀಗ್, ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರಸ್ತುತ ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಣ ಸರಣಿಯ ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಆ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಕಡೆಗೆ ಆಟಗಾರರು ಗಮನ ಹರಿಸಲಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯು ಈಗಾಗಲೇ ದೇಶದಲ್ಲಿ ಹಲವಾರು ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗುರುತಿಸಿಕೊಳ್ಳುವಲ್ಲೂ ನೆರವಾಗಿದೆ. ಈ ಕುರಿತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಕೂಡಾ ಮಾತನಾಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವಲ್ಲಿ ಐಪಿಎಲ್ ಪ್ರಮುಖ ಪಾತ್ರವನ್ನು ವಹಿಸಿದೆ. ಇದೇ ವೇಳೆ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪ ಪಂದ್ಯಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಮಾಡಿದೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
ಐಪಿಎಲ್ 2024ರ ಸೀಸನ್ ಮಾರ್ಚ್ 22ರಂದು ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾಗುತ್ತಿದೆ. ಸಾರ್ವತ್ರಿಕ ಚುನಾವಣೆಗಳ ಹೊರತಾಗಿಯೂ ಲೀಗ್ ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಯಲಿದೆ.
ಇದನ್ನೂ ಓದಿ | Video: 8 ತಿಂಗಳ ಬಳಿಕ ಬೌಲಿಂಗ್ ಮಾಡಿ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಿತ್ತ ಬೆನ್ ಸ್ಟೋಕ್ಸ್!
2008ರಲ್ಲಿ ಭಾರತ ಕ್ರಿಕೆಟ್‌ನಲ್ಲಿ ಹೊಸ ಪರ್ವ ಆರಂಭವಾಯ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವಳಿಯು ಜಾಗತಿಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿತು. ಮೊದಲ ಋತುವಿನಿಂದಲೇ ಟಿ20 ಕ್ರಿಕೆಟ್ ಭಾರಿ ಮಟ್ಟದಲ್ಲೇ ಬೆಳೆದಿದೆ. ಐಪಿಎಲ್‌ನಲ್ಲಿ ಗುರುತಿಸಿಕೊಂಡ ಹಲವು ಆಟಗಾರರು ಇಂದು ಟೀಮ್ ಇಂಡಿಯಾದ ಕಾಯಂ ಆಟಗಾರರಾಗಿ ಮಿಂಚುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
“ಯುವ ಆಟಗಾರರನ್ನು ಗುರುತಿಸುವಲ್ಲಿ ಐಪಿಎಲ್ ಅದ್ಭುತ ಕೆಲಸ ಮಾಡಿದೆ. ಪ್ರತಿ ಋತುವಿನಲ್ಲಿಯೂ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಅವರಂಥ ಪ್ರತಿಭಾವಂತ ಯುವಕರು ಹೊರಹೊಮ್ಮುತ್ತಿದ್ದಾರೆ. ಅವರು ನಂತರ ಭಾರತದ ಪರವೂ ಆಡಿದ್ದಾರೆ. ಹೀಗಾಗಿ ಐಪಿಎಲ್ ಪಂದ್ಯಾವಳಿಯು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿ ಹೊರಹೊಮ್ಮಿದೆ. ಈ ಋತುವಿನ ಲೀಗ್ ಕೂಡಾ ಅದಕ್ಕಿಂತ ಭಿನ್ನವಾಗಿ ಇರುವುದಿಲ್ಲ” ಎಂದು ಧುಮಾಲ್ ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ್ದಾರೆ.
ಐಪಿಎಲ್ ನಂಬರ್ 2 ಕ್ರೀಡಾ ಲೀಗ್
ಪ್ರತಿ ಪಂದ್ಯದ ಮೌಲ್ಯದ ಪ್ರಕಾರ, ಐಪಿಎಲ್ ವಿಶ್ವದ ಎರಡನೇ ಶ್ರೀಮಂತ ಕ್ರೀಡಾ ಲೀಗ್ ಆಗಿದೆ. ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ಮೊದಲ ಸ್ಥಾನದಲ್ಲಿದೆ. ಇದೇ ವೇಳೆ, ಟೆಸ್ಟ್ ಮತ್ತು ಏಕದಿನ ಸ್ವರೂಪಗಳ ಮೇಲೂ ಲೀಗ್ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | WPL 2024: ಮುಂಬೈ ಇಂಡಿಯನ್ಸ್ ಆಲ್‌ರೌಂಡ್ ಆಟಕ್ಕೆ ಮಣಿದ ಯುಪಿ ವಾರಿಯರ್ಸ್; ಕೌರ್ ಪಡೆಗೆ ನಾಲ್ಕನೇ ಗೆಲುವು
“ಕಳೆದ 15 ವರ್ಷಗಳಲ್ಲಿ ಖಂಡಿತವಾಗಿಯೂ ಐಪಿಎಲ್ ವಿಶ್ವದ ಎರಡನೇ ಪ್ರಮುಖ ಲೀಗ್ ಆಗಿದೆ. ಇದು ಎರಡನೇ ಅತ್ಯಮೂಲ್ಯ ಲೀಗ್ ಆಗಿದೆ. ಐಪಿಎಲ್ ಆರಂಭವಾದಾಗಿನಿಂದ ಕ್ರಿಕೆಟ್ ಹೇಗೆ ಮಹತ್ತರವಾಗಿ ಬದಲಾಗಿದೆ ಎಂಬುದನ್ನು ನೀವು ಊಹಿಸಬಹುದು. ಟೆಸ್ಟ್ ಪಂದ್ಯಗಳು ಕೂಡಾ ಹೆಚ್ಚು ಫಲಿತಾಂಶ ನೀಡುವುದನ್ನು ನಾವು ನೋಡಿದ್ದೇವೆ” ಎಂದು ಧುಮಾಲ್ ಹೇಳಿದ್ದಾರೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)