India vs Ireland: ಇಂದು ಭಾರತ-ಐರ್ಲೆಂಡ್ ನಡುವೆ ಮೊದಲ ಟಿ20 ಪಂದ್ಯ; ಬೂಮ್ರಾ ಮೇಲೆ ಎಲ್ಲರ ಕಣ್ಣು, ಸಂಭಾವ್ಯ ತಂಡ, ಪಿಚ್ ರಿಪೋರ್ಟ್ ಹೀಗಿದೆ
Aug 18, 2023 10:00 AM IST
ಭಾರತ-ಐರ್ಲೆಂಡ್ ನಡುವೆ ಮೊದಲ ಟಿ20 ಪಂದ್ಯ.
- India vs Ireland: ಇಂಜುರಿಯಿಂದ ಬಹುತೇಕ ಒಂದು ತಿಂಗಳ ಟಿ20 ಕ್ರಿಕೆಟ್ನಿಂದ ದೂರವಿದ್ದ ವೇಗಿ ಜಸ್ಪ್ರಿತ್ ಬೂಮ್ರಾ ಅವರು ತಂಡಕ್ಕೆ ಮರಳಿದ್ದು, ಐರ್ಲೆಂಡ್ ವಿರುದ್ಧ ಸೆಣಸಾಟ ಸಿದ್ಧರಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 3-2ರಲ್ಲಿ ಸರಣಿ ಸೋತಿರುವ ಟೀಮ್ ಇಂಡಿಯಾ ಇಂದಿನಿಂದ ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಗಾಯದಿಂದ ದೂರವಾಗಿದ್ದ ವೇಗಿ ಜಸ್ಪ್ರಿತ್ ಬೂಮ್ರಾ ಅವರ ನೇತೃತ್ವದಲ್ಲಿ ಯುವ ಆಟಗಾರರು ಮಿಂಚಿನ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. 3 ಪಂದ್ಯಗಳ ಟಿ20 ಸರಣಿ ಪೈಕಿ ಇಂದು ಡಬ್ಲಿನ್ನ ದಿ ವಿಲೇಜ್ನಲ್ಲಿ ಮೊದಲ ಟಿ20 ಪಂದ್ಯ ಜರುಗಲಿದೆ.
ಸದ್ಯ ಸರಣಿ ಗೆಲುವು-ಸೋಲಿನ ಲೆಕ್ಕಾಚಾರ ಹಾಕುವುದಕ್ಕೂ ಮುನ್ನ ಹೆಚ್ಚು ನಿರೀಕ್ಷೆ ಇರುವುದು ಜಸ್ಪ್ರಿತ್ ಬೂಮ್ರಾ ಮೇಲೆ. ಕಳೆದ ವರ್ಷ ಸೆಪ್ಟೆಂಬರ್ ಬಳಿಕ ತಂಡಕ್ಕೆ ಮರಳಿದ್ದು, ಅವರ ಪ್ರದರ್ಶನದ ಮೇಲೆ ಭಾರಿ ಕುತೂಹಲ ಏರ್ಪಟ್ಟಿದೆ. ಕಳೆದ ವರ್ಷ ಏಷ್ಯಾಕಪ್, ಟಿ20 ವಿಶ್ವಕಪ್ ಕಳೆದುಕೊಂಡಿದ್ದ ಬೂಮ್ರಾ, ಐರ್ಲೆಂಡ್ ಸರಣಿ ಮೂಲಕ ಮರಳುತ್ತಿದ್ದಾರೆ. ಇಲ್ಲಿ ಬೂಮ್ರಾ ನೀಡುವ ಪ್ರದರ್ಶನ ಅತ್ಯಂತ ನಿರ್ಣಾಯಕವಾಗಿದೆ.
ಯುವ ಆಟಗಾರರ ಮೇಲೆ ನಿರೀಕ್ಷೆ
ಐರ್ಲೆಂಡ್ ಟಿ20 ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಸೆಪ್ಟೆಂಬರ್ 23ರಿಂದ ಶುರುವಾಗುವ ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಭಾರತದ ಪುರುಷರ ತಂಡವನ್ನು ಮುನ್ನಡೆಸಲಿರುವ ಋತುರಾಜ್ ಗಾಯಕ್ವಾಡ್ರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರಿಗೂ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.
ಇನ್ನು ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಹೆಸರಿಸಲಾಗಿದೆ. ಜಿತೇಶ್ ಶರ್ಮಾ ಬ್ಯಾಕಪ್ ವಿಕೆಟ್ ಆಗಿ ಇರಲಿದ್ದಾರೆ. 2022ರ ಫೆಬ್ರವರಿಯಲ್ಲಿ ಭಾರತ ಪರ ಕೊನೆ ಬಾರಿಗೆ ಟಿ20 ಪಂದ್ಯ ಆಡಿದ್ದ ಶಿವಂ ದುಬೆ ಅವರೊಂದಿಗೆ ವಾಷಿಂಗ್ಟನ್ ಸುಂದರ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದು, ಯಾರು ಬೆಂಚ್ ಬಿಸಿ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಹಾಗೆಯೇ ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಐರ್ಲೆಂಡ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಸ್ಟಾರ್ ಓಪನರ್ ಪೌಲ್ ಸ್ಟರ್ಲಿಂಗ್ ತಂಡದ ಜವಾಬ್ದಾರಿ ಹೊತ್ತಿದ್ದಾರೆ. ಗಾಯದಿಂದ ತಂಡದಿಂದ ಹೊರಗುಳಿದಿದ್ದ ಆಲ್ರೌಂಡರ್ ಗರೆಥ್ ಡೆಲಾನಿ ಮರಳಿದ್ದಾರೆ. 10 ಟಿ20 ಪಂದ್ಯಗಳನ್ನು ಆಡಿರುವ ಮಧ್ಯಮ ವೇಗಿ-ಆಲ್-ರೌಂಡರ್ ಫಿಯಾನ್ ಹ್ಯಾಂಡ್ ತಂಡಕ್ಕೆ ಸೇರಿದ್ದಾರೆ. ಅಷ್ಟೇ ಅಲ್ಲದೆ, ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೇರ್, ಲೋರ್ಕನ್ ಟಕರ್, ಬ್ಯಾರಿ ಮೆಕಾರ್ಥಿ ಸೇರಿದಂತೆ ಐರ್ಲೆಂಡ್ ಯುವ ತಂಡವನ್ನು ಕಟ್ಟಿದೆ.
ಎಷ್ಟು ಗಂಟೆಗೆ ನೇರಪ್ರಸಾರ?
ಭಾರತ ಕಾಲಮಾನದ ಪ್ರಕಾರ ಭಾರತ ಹಾಗೂ ಐರ್ಲೆಂಡ್ ಮೊದಲ ಟಿ20 ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. ವಯಾಕಾಮ್ 18 ಇದರ ನೇರ ಪ್ರಸಾದ ಹಕಕ್ಕನ್ನು ಹೊಂದಿದೆ. ಸ್ಪೋರ್ಟ್ 18ನಲ್ಲಿ, ಡಿಡಿ ಸ್ಪೋರ್ಟ್ಸ್, ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಇರಲಿದೆ.
ಪಿಚ್ ಹೇಗಿರಲಿದೆ?
ವಿಲೇಜ್ ಕ್ರಿಕೆಟ್ ಸ್ಟೇಡಿಯಂನ ಇತ್ತೀಚಿನ ಟಿ20 ದಾಖಲೆಗಳು ಬ್ಯಾಟ್ಸ್ಮನ್ಗೆ ಸಹಕಾರಿ. ಈ ಮೈದಾನದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 167 ಆಗಿದೆ ಎಂಬುದು ವಿಶೇಷ. ಪಂದ್ಯದ ಓವರ್ಗಳು ಸಾಗಿದಂತೆ ಸ್ಪಿನ್ನರ್ಗಳು ಮೇಲುಗೈ ಸಾಧಿಸಲಿದ್ದಾರೆ. ಈ ಪಿಚ್ ಚೇಸಿಂಗ್ಹೆಚ್ಚು ಪ್ರಸಿದ್ಧಿಯಾಗಿದ್ದು, ಟಾಸ್ ಗೆದ್ದ ತಂಡವೇ ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಿದೆ.
ಮುಖಾಮಖಿ ದಾಖಲೆ
- ಒಟ್ಟು ಪಂದ್ಯಗಳ ಸಂಖ್ಯೆ 5
- ಭಾರತದ ಗೆಲುವು 5 ಪಂದ್ಯಗಳು
- ಐರ್ಲೆಂಡ್ ಸೋಲು 5 ಪಂದ್ಯಗಳು
ಭಾರತ ಸಂಭಾವ್ಯ ತಂಡ
ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ (ನಾಯಕ), ರವಿ ಬಿಷ್ಣೋಯ್, ಆರ್ಷ್ದೀಪ್ ಅರ್ಷ್ದೀಪ್ ಸಿಂಗ್, ಮುಕೇಶ್ ಕುಮಾರ್.
ಐರ್ಲೆಂಡ್ ಸಂಭಾವ್ಯ ತಂಡ
ಆಂಡ್ರ್ಯೂ ಬಾಲ್ಬಿರ್ನಿ, ಪೌಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್, ಹ್ಯಾರಿ ಟೆಕ್ಟರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್, ಮಾರ್ಕ್ ಅಡೇರ್, ಜೋಶುವಾ ಲಿಟಲ್, ಬ್ಯಾರಿ ಮೆಕಾರ್ಥಿ, ಬೆಂಜಮಿನ್ ವೈಟ್.