ಈತ ಜಗತ್ತಿಗೆ ಸ್ಪೂರ್ತಿದಾಯಕ ಆಟಗಾರ; 30 ವರ್ಷದ ಭಾರತದ ಕ್ರಿಕೆಟಿಗನನ್ನು ಕೊಂಡಾಡಿದ ಇರ್ಫಾನ್ ಪಠಾಣ್
Jan 08, 2024 08:46 AM IST
ಜಸ್ಪ್ರೀತ್ ಬುಮ್ರಾರನ್ನು ಕೊಂಡಾಡಿದ ಇರ್ಫಾನ್ ಪಠಾಣ್.
- Irfan Pathan: ಬೆನ್ನು ನೋವಿನ ಹೊರತಾಗಿಯೂ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಪ್ರಭಾವಿತರಾದ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್‌ನ ಬ್ರಾಂಡ್ ಅಂಬಾಸಿಡರ್ ಎಂದು ಬಣ್ಣಿಸಿದ್ದಾರೆ.
ಬೆನ್ನು ನೋವಿನಿಂದ ಸುಮಾರು ಒಂದು ವರ್ಷದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಮೋಘ ಕಂಬ್ಯಾಕ್ ಮಾಡಿದ ಭಾರತದ 30 ವರ್ಷದ ಸ್ಟಾರ್ ಆಟಗಾರರನ್ನು ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ (Irfan Pathan), ಕೊಂಡಾಡಿದ್ದಾರೆ. ಆತ ಬೇರೆ ಯಾರೂ ಅಲ್ಲ ವೇಗಿ ಜಸ್ಪ್ರೀತ್ ಬುಮ್ರಾ (Jasprit Burmah). ಈಗ ಕಾಮೆಂಟೇಟರ್ ಟೋಪಿ ಧರಿಸಿರುವ 39 ವರ್ಷದ ಇರ್ಫಾನ್, ಬುಮ್ರಾ ಅದ್ಬುತವಾಗಿ ಕಂಬ್ಯಾಕ್ ಮಾಡಿದ ಪರಿಗೆ ಅವರ ಪ್ರೀತಿಯಲ್ಲಿ ಬಿದ್ದಿದ್ದಾರೆ.
2022ರ ಜುಲೈನಿಂದ 2023ರವರೆಗೂ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಬುಮ್ರಾ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್ ಮೈದಾನದಿಂದ ಹೊರಗಿದ್ದರು. ಸುಮಾರು 13 ತಿಂಗಳ ಕಾಲ ಕ್ರಿಕೆಟ್‌ಗೆ ದೂರವಾಗಿದ್ದ ವೇಗಿ ಈ ಅವಧಿಯಲ್ಲಿ ಒಂದೇ ಒಂದು ಟಿ20 ಪಂದ್ಯವನ್ನಾಡಿದ್ದರು. ಆದರೆ ಆಗಿನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿರಲಿಲ್ಲ. ಆದರೆ ಮತ್ತೆ ಸಮಸ್ಯೆ ಎದ್ದು ಕಂಡು ಬಂತು. ಹೀಗಾಗಿ ಆಸೀಸ್ ಎದುರಿನ ಸರಣಿಯಿಂದ ಹಿಂದೆ ಸರಿದರು.
ಬುಮ್ರಾಗೆ ಕಂಬ್ಯಾಕ್ಗೆ ಇರ್ಫಾನ್ ದೊಡ್ಡ ಅಭಿಮಾನಿ
13 ತಿಂಗಳ ನಂತರ ಅವರು ಏಷ್ಯಾಕಪ್ ಟೂರ್ನಿಗೆ ಮರಳಿದರು. ಮರಳಿದ ಸರಣಿಯಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದು ವಿಕೆಟ್ ಬೇಟೆಯಾಡಿದರು. ಇದರ ಬೆನ್ನಲ್ಲೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಮಿಂಚಿದರು. ಹಲವು ಪಂದ್ಯಗಳ ಗೆಲುವಿನ ರೂವಾರಿಯಾದರು. ವಿಶ್ವಕಪ್ನಲ್ಲಿ ಬೆಂಕಿ ಪ್ರದರ್ಶನ ನೀಡಿ ಭಾರತ ತಂಡವನ್ನು ಫೈನಲ್‌ಗೂ ಕೊಂಡೊಯ್ದರು. ಯಾರ್ಕರ್ ಸ್ಪೆಷಲಿಸ್ಟ್ ಕಂಬ್ಯಾಕ್ ಮಾಡಿದ ಪರಿಗೆ ಇರ್ಫಾನ್ ಪಠಾಣ್ ಫಿದಾ ಆಗಿದ್ದಾರೆ.
ವೇಗಿಯನ್ನು ಕೊಂಡಾಡಿದ ಇರ್ಫಾನ್
ಈ ಬಗ್ಗೆ ಮಾತನಾಡಿದ ಇರ್ಫಾನ್, ಜಸ್ಪ್ರೀತ್ ಬುಮ್ರಾ ಅವರ ವರ್ತನೆಯನ್ನು ಪ್ರೀತಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ಬೌಲಿಂಗ್ ಮಾಡಿದ ರೀತಿ ಅದ್ಬುತವಾಗಿತ್ತು. ಅವರು ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ. ವೇಗಿಯ ಕಂಬ್ಯಾಕ್ ಆಟವು ಹಲವರಿಗೆ ಮಾದರಿಯಾಗಿದೆ. ಅಷ್ಟರ ಮಟ್ಟಿಗೆ ತನ್ನ ಸಾಮರ್ಥ್ಯ ಸಾಬೀತುಪಡಿಸಿದರು ಎಂದು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಬುಮ್ರಾ ಅವರನ್ನು ಕೊಂಡಾಡಿದ್ದಾರೆ.
‘ಆತ ಬ್ರಾಂಡ್ ಅಂಬಾಸಿಡರ್’
ಬೆನ್ನು ನೋವಿನ ಹೊರತಾಗಿಯೂ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಪ್ರಭಾವಿತರಾದ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ, ಬುಮ್ರಾ ಟೆಸ್ಟ್ ಕ್ರಿಕೆಟ್‌ನ ಬ್ರಾಂಡ್ ಅಂಬಾಸಿಡರ್ ಎಂದಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ನೋಡಿದರೆ ಅವರಿಗಿಂತ ದೊಡ್ಡ ಅಂಬಾಸಿಡರ್ ಮತ್ತೊಬ್ಬರಿಲ್ಲ. ಪ್ರತಿದೇಶಕ್ಕೂ ಅವರಂತಹ ಬೌಲರ್ ಸಿಕ್ಕರೆ ಟೆಸ್ಟ್ ಕ್ರಿಕೆಟ್ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದ್ದಾರೆ. ಬುಮ್ರಾ ಕಂಬ್ಯಾಕ್ ಮಾಡಿದ ಪರಿಗೆ ಇರ್ಫಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಂಬ್ಯಾಕ್ ಬಳಿಕ ಬುಮ್ರಾ ಪ್ರದರ್ಶನ
ಇತ್ತೀಚೆಗೆ ಮುಕ್ತಾಯಗೊಂಡ ಸೌತ್ ಆಫಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ ಬುಮ್ರಾ, ಎರಡು ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದರು. ಇದರೊಂದಿಗೆ ಹಲವು ದಾಖಲೆ ಕೂಡ ಬರೆದರು. 12 ವಿಕೆಟ್ ಉರುಳಿಸಿದ ವೇಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 11 ಪಂದ್ಯಗಳಿಂದ 20 ವಿಕೆಟ್ ಉರುಳಿಸಿದ್ದಾರೆ. ಇದೀಗ ಮುಂದಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ತಮ್ಮ ಪ್ರದರ್ಶನ ನೀಡಲು ಕಾತರದಿಂದ ಕಾಯುತ್ತಿದ್ದಾರೆ.