logo
ಕನ್ನಡ ಸುದ್ದಿ  /  ಕ್ರಿಕೆಟ್  /  ಧೋನಿಯಂತೆ ಆಯ್ಕೆದಾರರ ಸಲಹೆ ಧಿಕ್ಕರಿಸಿದ ಇಶಾನ್; ರಣಜಿ ಆಡದ ಕಿಶನ್​ ಪುನರಾಗಮನ ಮತ್ತಷ್ಟು ಕಷ್ಟ

ಧೋನಿಯಂತೆ ಆಯ್ಕೆದಾರರ ಸಲಹೆ ಧಿಕ್ಕರಿಸಿದ ಇಶಾನ್; ರಣಜಿ ಆಡದ ಕಿಶನ್​ ಪುನರಾಗಮನ ಮತ್ತಷ್ಟು ಕಷ್ಟ

Prasanna Kumar P N HT Kannada

Jan 27, 2024 11:41 AM IST

google News

ಎಂಎಸ್ ಧೋನಿ ಮತ್ತು ಇಶಾನ್ ಕಿಶನ್.

    • Ishan Kishan: ಯುವ ​ಆಟಗಾರ ಇಶಾನ್, ನೆಚ್ಚಿನ ಕ್ರಿಕೆಟಿಗ ಎಂಎಸ್ ಧೋನಿ ಹಾದಿಯಲ್ಲೇ ಸಾಗುತ್ತಿದ್ದಾರಾ ಎಂಬ ಹೊಸ ಪ್ರಶ್ನೆ ಉದ್ಭವಿಸಿದೆ. ಭಾರತಕ್ಕೆ ಅವರ ಪುನರಾಗಮನದ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.
ಎಂಎಸ್ ಧೋನಿ ಮತ್ತು ಇಶಾನ್ ಕಿಶನ್.
ಎಂಎಸ್ ಧೋನಿ ಮತ್ತು ಇಶಾನ್ ಕಿಶನ್.

ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಎಲ್ಲಿದ್ದಾರೆ? ರಣಜಿ ಟ್ರೋಫಿ ಆಡುತ್ತಿಲ್ಲ ಏಕೆ? ಭಾರತ ತಂಡದಲ್ಲೂ ಅವಕಾಶ ಸಿಗುತ್ತಿಲ್ಲ ಏಕೆ? ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರಾ ಇಶಾನ್? ಹೀಗೆ ಇಶಾನ್​ ಕಿಶನ್ ಕುರಿತು ಹತ್ತು ಹಲವು ಪ್ರಶ್ನೆಗಳು ಎದ್ದಿವೆ. ಆದರೆ ಯುವ ​ಆಟಗಾರ ಇಶಾನ್, ನೆಚ್ಚಿನ ಕ್ರಿಕೆಟಿಗ ಎಂಎಸ್ ಧೋನಿ ಹಾದಿಯಲ್ಲೇ ಸಾಗುತ್ತಿದ್ದಾರಾ ಎಂಬ ಹೊಸ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಇಬ್ಬರಲ್ಲೂ ಹೋಲಿಕೆ ಒಂದೇ ರೀತಿ ಇವೆ.

2023ರ ವರ್ಷದ ಕೊನೆಯಲ್ಲಿ ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಬ್ಯಾಟರ್​, ಮಾನಸಿಕ ಆಯಾಸ ಕಾರಣ ಕುಟುಂಬದ ಜೊತೆ ಕಾಲ ಕಳೆಯುವುದಾಗಿ ಹೇಳಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದ. ಆದರೆ ಸುಳ್ಳು ಹೇಳಿ ದುಬೈನಲ್ಲಿ ಪಾರ್ಟಿಗೆ ಹೋದ ಕಿಶನ್ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್​ಬನೇಗಾ ಕರೋಡ್​ಪತಿ ಟಿವಿ ಶೋನಲ್ಲೂ ಭಾಗವಹಿಸಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.

ದ್ರಾವಿಡ್​ ಮಾತಿಗಿಲ್ಲ ಕಿಮ್ಮತ್ತು

ಅಫ್ಘಾನಿಸ್ತಾನ ವಿರುದ್ಧದ ಚುಟುಕು ಸರಣಿಗೂ ಆಯ್ಕೆಯಾಗದ ಇಶಾನ್ ಅವರಿಗೆ ಇದೇ ಸರಣಿಗೂ ಮುನ್ನ ಹೆಡ್​ಕೋಚ್​ ರಾಹುಲ್ ದ್ರಾವಿಡ್ ರಣಜಿ ಆಡುವಂತೆ ಸೂಚಿಸಿದ್ದರು. ಆದರೆ, ಗುರು ದ್ರಾವಿಡ್​ ಮಾತಿಗೂ ಕಿಮ್ಮತ್ತು ಕೊಡದ ಇಶಾನ್, ಜಾರ್ಖಂಡ್​ ಪರ ರಣಜಿಯಲ್ಲಿ ಆಡಲಿಲ್ಲ ಮತ್ತು ಆಡುತ್ತಿಲ್ಲ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗೆ ಆಯ್ಕೆ ಮಾಡುವ ಉದ್ದೇಶದಿಂದ ದ್ರಾವಿಡ್ ಸಲಹೆ ನೀಡಿದ್ದರು.

ಧೋನಿ-ಇಶಾನ್ ಇಬ್ಬರದ್ದೂ ಒಂದೇ ಹಾದಿ

ಯುವ ಆಟಗಾರನ ಅಶಿಸ್ತಿನ ಕಾರಣ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್​​ ಪಂದ್ಯಗಳಿಗೆ ಆಯ್ಕೆ ಮಾಡಲಾಗಲಿಲ್ಲ. ಆದರೆ ಇಶಾನ್ ಅಶಿಸ್ತಿಗೆ ಧೋನಿಯೇ ಪ್ರೇರಣೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಧೋನಿ ಹಾದಿಯಲ್ಲೇ ಇಶಾನ್ ಸಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಸಹ ಜಾರ್ಖಂಡ್ ಆಟಗಾರರಾಗಿದ್ದು ಇಬ್ಬರೂ ಸಹ ವಿಕೆಟ್ ಕೀಪರ್ ಬ್ಯಾಟರ್‌ಗಳು. ಇಬ್ಬರೂ ಜಾರ್ಖಂಡ್ ತಂಡವನ್ನು ಮುನ್ನಡೆಸಿದ್ದಾರೆ. ಅದೇ ರೀತಿ ಇಬ್ಬರೂ ಸಹ ದೇಶೀ ಕ್ರಿಕೆಟ್ ಆಡುವ ಕುರಿತು ಆಯ್ಕೆಗಾರರ ​​ಸಲಹೆಯನ್ನು ನಿರ್ಲಕ್ಷಿಸಿದವರು ಎಂದ ಸುದ್ದಿ ಕೇಳಿ ಬರುತ್ತಿದೆ.

4ನೇ ರಣಜಿಯನ್ನೂ ಆಡಿಲ್ಲ ಇಶಾನ್

ಆಯ್ಕೆದಾರರು ಹಾಗೂ ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಆಡುವಂತೆ ಸಲಹೆ ನೀಡಿದ್ದರು. ಆದಾಗ್ಯೂ, ರಣಜಿ ಟ್ರೋಫಿ 2024ರಲ್ಲಿ ಜಾರ್ಖಂಡ್ ಪರ ಆಡಲಿಲ್ಲ. ನಾಲ್ಕನೇ ರಣಜಿ ಪಂದ್ಯಕ್ಕೂ ಕಣಕ್ಕಿಳಿದಿಲ್ಲ. ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯನ್ನೂ ಸಂಪರ್ಕಿಸಿಲ್ಲ. ಹಿರಿಯರ ಸಲಹೆಗಳನ್ನು ಧಿಕ್ಕರಿಸುತ್ತಿದ್ದಾರೆ ಎಂಬುದನ್ನು ಅವರ ಈ ನಡೆ ಸೂಚಿಸುತ್ತದೆ. ಇಷ್ಟೊಂದು ಬೇಜವಾಬ್ದಾರಿನಾ ಎಂಬ ಚರ್ಚೆಗಳು ನಡೆಯುತ್ತಿವೆ. ಯುವ ಕ್ರಿಕೆಟಿಗಾಗಿ ಇಷ್ಟು ಅಶಿಸ್ತು ಸರಿಯಿಲ್ಲ ಎಂದಿದ್ದಾರೆ.

ಅಂದು ಧೋನಿ ಮಾಡಿದ್ದೇನು?

2018ರಲ್ಲಿ ಎಂಎಸ್​ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ಟಿ20, ಒಡಿಐಗೆ ಆಯ್ಕೆಯಾಗಲು ಧೋನಿಯನ್ನು ವಿಜಯ್ ಹಜಾರೆ ಆಡುವಂತೆ ಕೇಳಿದ್ದರು. ಆದರೆ, ಧೋನಿ ಸೆಲೆಕ್ಟರ್​​ಗಳ ಮಾತನ್ನು ತಿರಸ್ಕರಿಸಿ ದೇಶೀಯ ಕ್ರಿಕೆಟ್‌ನಲ್ಲಿ ಆಡದಿರಲು ನಿರ್ಧರಿಸಿದರು. 2018ರಲ್ಲಿ ವೆಸ್ಟ್ ಇಂಡೀಸ್‌ಗೆ ತಂಡವನ್ನು ಘೋಷಿಸುವ ಸಂದರ್ಭದಲ್ಲಿ ವಿಜಯ್ ಹಜಾರೆ ನಾಕೌಟ್‌ಗಾಗಿ ಧೋನಿ ಜಾರ್ಖಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಎಂಎಸ್‌ಕೆ ಪ್ರಸಾದ್ ಹೇಳಿದ್ದರು.

ಆದರೆ ಸ್ಥಳೀಯ ಆಟಗಾರರು ನೆಟ್ ಬೌಲಿಂಗ್ ನಡೆಸಲು ಬೆಂಗಳೂರಿನ ಚಿನ್ನಸ್ವಾಮಿಗೆ ಆಗಮಿಸಿದರೂ ಧೋನಿ ಮಾತ್ರ ಆಗಮಿಸಿರಲಿಲ್ಲ. ಇದು ದೊಡ್ಡ ಚರ್ಚೆಯಾಗಿತ್ತು. ನಂತರ, ಆಗಿನ ಜಾರ್ಖಂಡ್ ಕೋಚ್ ಧೋನಿ ತಂಡ ಸೇರಲು ಬಯಸುವುದಿಲ್ಲ ಎಂದು ಖಚಿತಪಡಿಸಿದ್ದರು. ದೇಶೀಯ ಕ್ರಿಕೆಟ್ ಆಡದ್ದಕ್ಕೆ ಪರ ವಿರೋಧ ಚರ್ಚೆಗಳು ನಡೆದಿದ್ದವು. ಈಗ ಅದೇ ಊರಿನ ಇಶಾನ್ ಕೂಡ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ.

ಧೋನಿಗೂ ಇಶಾನ್​ಗೂ ಒಂದೆನಾ?

ಭಾರತೀಯ ಕ್ರಿಕೆಟ್​ನಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದ ಧೋನಿಗೆ ದೇಶೀಯ ಕ್ರಿಕೆಟ್​ ಆಡಲು ತಿಳಿಸಿದ್ದು ಆಕ್ರೋಶಕ್ಕೂ ಕಾರಣವಾಗಿತ್ತು. ಅದಾಗಲೇ ಮೂರು ಫಾರ್ಮೆಟ್​ನಲ್ಲೂ ನಾಯಕನಾಗಿ ಆಟಗಾರನಾಗಿ ಮಿಂಚಿದ್ದರು. ನೂರಾರು ಪಂದ್ಯಗಳನ್ನಾಡಿದ್ದರು. ಹಾಗಾಗಿ ಹಿಂದೇಟು ಹಾಕಿದ್ದು, ಒಂದು ಲೆಕ್ಕದಲ್ಲಿ ಸರಿ ಇದೆ ಎನ್ನಬಹುದು. ಆದರೆ ಈಗಿನ್ನೂ ಕ್ರಿಕೆಟ್​​ನಲ್ಲಿ ಬೆಳೆಯುತ್ತಿರುವ ಮತ್ತು ಇನ್ನಷ್ಟು ಬೆಳೆಯಬೇಕಿರುವ ಇಶಾನ್, ರಣಜಿ ಆಡದಿರುವುದು ಅಶಿಸ್ತು ಎಂದರೂ ತಪ್ಪಿಲ್ಲ.

ಬಿಸಿಸಿಐ, ಸೆಲೆಕ್ಟರ್ಸ್, ಕೋಚ್ ಸೇರಿದಂತೆ ಮಾಜಿ ಕ್ರಿಕೆಟರ್ಸ್ ಮಾತನ್ನೇ ಧಿಕ್ಕರಿಸಿರುವ ಇಶಾನ್​ಗೆ ಡ್ರಾಪೌಟ್​ ಶಿಕ್ಷೆಗೆ ಒಳಗಾಗಿದ್ದಾರೆ. ಅಫ್ಘನ್ ವಿರುದ್ಧದ ಟಿ20 ಸರಣಿ, ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಆಯ್ಕೆಯಾಗಿಲ್ಲ. ಇದೇ ಸರಣಿಯ ಉಳಿದ ಮೂರು ಪಂದ್ಯಗಳಿಗೂ ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ. ಬದಲಿಗೆ ಧ್ರುವ್ ಜುರೆಲ್​ಗೆ ಚಾನ್ಸ್ ಸಿಕ್ಕಿದೆ. ಇಶಾನ್ ತಮ್ಮ ಕ್ರಿಕೆಟ್ ಬದುಕನ್ನು ತಾವೇ ಹಾಳು ಮಾಡಿಕೊಳ್ತಿದ್ದಾರಾ? ಈ ನಡೆ ಪುನರಾಗಮನಕ್ಕೆ ಮತ್ತೆ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡುತ್ತಾ ಕಾದು ನೋಡಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ