ದ್ರಾವಿಡ್ ಸಲಹೆಯಂತೆ ರಣಜಿ ಆಡಲು ಒಲ್ಲದ ಇಶಾನ್ ಕಿಶನ್; ಹಾರ್ದಿಕ್, ಕೃನಾಲ್ ಜೊತೆ ಅಭ್ಯಾಸ
Feb 08, 2024 03:30 PM IST
ದ್ರಾವಿಡ್ ಸಲಹೆಯಂತೆ ರಣಜಿ ಆಡಲು ಒಲ್ಲದ ಇಶಾನ್ ಕಿಶನ್
- Ishan Kishan: ಆಸ್ಟ್ರೇಲಿಯಾ ವಿರುದ್ಧ 2023ರ ನವೆಂಬರ್ ತಿಂಗಳಲ್ಲಿ ಟಿ20 ಸರಣಿ ಆಡಿದ ನಂತರ ಇಶಾನ್ ಕಿಶನ್ ಭಾರತದ ಪರ ಆಡಿಲ್ಲ. ಸದ್ಯ ಅವರು ಬರೋಡಾದಲ್ಲಿದ್ದು, ಕೋಚ್ ರಾಹುಲ್ ದ್ರಾವಿಡ್ ಸಲಹೆಯಂತೆ ರಣಜಿ ಟ್ರೋಫಿಯಲ್ಲೂ ಆಡುವ ಸಾಧ್ಯತೆ ಇಲ್ಲ.
ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan), ಮಾನಸಿಕ ಆಯಾಸದಿಂದಾಗಿ ವಿಶ್ರಾಂತಿ ಪಡೆಯಲು ವಿರಾಮ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರಸ್ತುತ ಅವರು ಕ್ರಿಕೆಟ್ ಚಟುವಟಿಕೆಯಿಂದ ದೂರವಿದ್ದಾರೆ. 2023ರ ನವೆಂಬರ್ ತಿಂಗಳಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಬಳಿಕ ಇಶಾನ್ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧದಲ್ಲೇ ತೊರೆದ ಆಟಗಾರ, ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಆಡುವುದಿಲ್ಲ ಎಂದು ಹೇಳಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಬಳಿಕ, ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಂದಲೂ ಕಿಶನ್ ಹೊರಗುಳಿದಿದ್ದಾರೆ.
ಸದ್ಯ, ಇಶಾನ್ ಕಿಶನ್ ಅವರು ಬರೋಡಾದಲ್ಲಿ 'ವರ್ಕೌಟ್ ಮತ್ತು ಅಭ್ಯಾಸ' ಮಾಡುತ್ತಿರುವುದು ಕಂಡುಬಂದಿದೆ ಎಂದು ಕ್ರಿಕ್‌ಬಝ್ ಈಗ ವರದಿ ಮಾಡಿದೆ. ವರದಿಯ ಪ್ರಕಾರ, 25 ವರ್ಷದ ಆಟಗಾರನು ಕಳೆದ ಕೆಲವು ವಾರಗಳಿಂದ ಬರೋಡಾ ನಗರದಲ್ಲಿ ನೆಲೆಸಿದ್ದು, ಅಂತಾರಾಷ್ಟ್ರೀಯ ತಂಡಕ್ಕೆ ಮರಳುವ ಗುರಿಯೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಲ್ಲಿನ ರಿಲಯನ್ಸ್ ಕ್ರೀಡಾಂಗಣದಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಪಂದ್ಯಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ; 5ನೇ ಪಂದ್ಯಕ್ಕೂ ಮರಳೋದು ಅನುಮಾನ
ಬರೋಡಾದ ತರಬೇತಿ ಕೇಂದ್ರದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಅವರ ಸಹೋದರ ಕೃನಾಲ್ ಪಾಂಡ್ಯ ಅವರೊಂದಿಗೆ ಇಶಾನ್ ಇದ್ದರು ಎಂದು ವರದಿ ತಿಳಿಸಿದೆ. ಸದ್ಯ ವಿಶ್ವಕಪ್ ವೇಳೆ ಅನುಭವಿಸಿದ ಗಾಯದಿಂದಾಗಿ ಹಾರ್ದಿಕ್ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ.
ರಣಜಿ ಪಂದ್ಯಕ್ಕೂ ಅಲಭ್ಯ
ಅತ್ತ, ಫೆಬ್ರವರಿ 9 ರಿಂದ ಜೆಮ್‌ಷೆಡ್‌ಪುರದಲ್ಲಿ ಪ್ರಾರಂಭವಾಗುವ ಹರಿಯಾಣ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್ ಆಟಗಾರ ಇಶಾನ್ ಕಿಶನ್ ಭಾಗವಹಿಸುತ್ತಿಲ್ಲ ಎಂದು ವರದಿ ಹೇಳಿದೆ. ಭಾರತ ತಂಡದ ಕೋಚ್ ದ್ರಾವಿಡ್ ಸಲಹೆಯಂತೆ ರಣಜಿ ಪಂದ್ಯ ಆಡಲು ಕಿಶನ್ ಮನಸು ಮಾಡುತ್ತಿಲ್ಲ ಎಂದು ತೋರುತ್ತಿದೆ.
ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಸ್ ಭರತ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಆದರೆ, ಸತತ ಎರಡು ಪಂದ್ಯಗಳಲ್ಲಿ ಭರತ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇಶಾನ್ ಅವರನ್ನು ಮತ್ತೆ ತಂಡಕ್ಕೆ ಕರೆತರಲು ಟೀಮ್ ಮ್ಯಾನೇಜ್ಮೆಂಟ್‌ಗೆ ಅವಕಾಶವಿತ್ತು. ಆದರೆ 25 ವರ್ಷದ ಆಟಗಾರ ಟೆಸ್ಟ್ ತಂಡಕ್ಕೆ ಮರಳುವ ಅವಕಾಶ ಕಳೆದುಕೊಂಡಿರುವಂತೆ ತೋರುತ್ತಿದೆ.
ಇದನ್ನೂ ಓದಿ | ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲ; ಯು ಟರ್ನ್ ಹೊಡೆದ ರಾಹುಲ್ ದ್ರಾವಿಡ್
ಕಳೆದ ತಿಂಗಳು, ಇಶಾನ್ ಅಲಭ್ಯತೆ ಕುರಿತು ಮಾತನಾಡಿದ್ದ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ದೇಶೀಯ ಕ್ರಿಕೆಟ್‌ನಲ್ಲಿ ಆಡಿದ ನಂತರವೇ ಇಶಾನ್ ತಂಡಕ್ಕೆ ಮರಳಬಹುದು ಎಂದು ಹೇಳಿದ್ದರು. ಆದರೆ ಆ ಬಳಿಕ ವಿಶಾಖಪಟ್ಟಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಂತರ ತಮ್ಮ ಹೇಳಿಕೆ ಬಗ್ಗೆ ಯುಟರ್ನ್ ತೆಗೆದುಕೊಂಡರು.
“ನಾನು ಇಶಾನ್ ಕಿಶನ್ ಕುರಿತಾಗಿ ಸಾಧ್ಯವಾದಷ್ಟು ಉತ್ತಮವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ. ಅವರು ವಿರಾಮವನ್ನು ಕೋರಿದ್ದರು. ನಾವು ಅವರಿಗೆ ವಿರಾಮ ಕೊಟ್ಟಿದ್ದೇವೆ ಅಷ್ಟೆ. ಅವರು ಕ್ರಿಕೆಟ್ ಆಡಲು ಸಿದ್ಧರಾದಾಗ, ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲ. ಅವರು ಸಿದ್ಧರಾದಾಗ ಸ್ವಲ್ಪ ಕ್ರಿಕೆಟ್ ಆಡಬೇಕು ಮತ್ತು ತಂಡಕ್ಕೆ ಮರಳಬೇಕು ಎಂದಿದ್ದೆ. ಆ ಆಯ್ಕೆ ಅವರಿಗೆ ಬಿಟ್ಟದ್ದು. ನಾವು ಅವರ ಮೇಲೆ ಯಾವುದಕ್ಕೂ ಒತ್ತಾಯ ಮಾಡುತ್ತಿಲ್ಲ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ,” ಎಂದು ಕನ್ನಡಿಗ ಹೇಳಿದ್ದಾರೆ.
IND vs ENG Test: ತಂಡಕ್ಕೆ ಮರಳುವ ಕುರಿತು ವಿರಾಟ್ ಕೊಹ್ಲಿ ಈವರೆಗೆ ಏನೂ ತಿಳಿಸಿಲ್ಲ; ಬಿಸಿಸಿಐ ಅಧಿಕಾರಿ ಹೊಸ ಟ್ವಿಸ್ಟ್
(This copy first appeared in Hindustan Times Kannada website. To read more like this please logon to kannada.hindustantimes.com)