ಪಾಕಿಸ್ತಾನ ಆಟಗಾರರ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ತಪ್ಪು; ಸಚಿವ ಉದಯನಿಧಿ ಸ್ಟಾಲಿನ್ ಕಿಡಿ
Oct 15, 2023 03:22 PM IST
ಸಚಿವ ಉದಯನಿಧಿ ಸ್ಟಾಲಿನ್.
- Udhayanidhi Stalin: ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್, ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ ಪ್ರೇಕ್ಷಕರು ಜೈ ಶ್ರೀ ರಾಮ್ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಉದಯನಿಧಿ ಸ್ಟಾಲಿನ್ ಹಂಚಿಕೊಂಡಿದ್ದಾರೆ.
ಸನಾತನ ಧರ್ಮದ (Sanatana Dharma) ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin), ಭಾರತ-ಪಾಕಿಸ್ತಾನ ಪಂದ್ಯದ ನಡುವೆ ಅಭಿಮಾನಿಗಳು ಜೈ ಶ್ರೀರಾಮ್ ಎಂದು ಕೂಗಿದ್ದು ತಪ್ಪು ಎಂದು ಹೇಳಿಕೆ ನೀಡಿದ್ದಾರೆ. ಆದರೀಗ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರನ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ (India vs Pakistan Match) ವೇಳೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್, ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ ಪ್ರೇಕ್ಷಕರು ಜೈ ಶ್ರೀ ರಾಮ್ ಘೋಷಣೆ ಕೂಗಿರುವ ವಿಡಿಯೋ ಹಂಚಿಕೊಂಡಿರುವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಅಭಿಮಾನಿಗಳ ವರ್ತನೆ ಒಪ್ಪುವಂತಹದ್ದಲ್ಲ ಎಂದು ಕಿಡಿಕಾರಿದ್ದಾರೆ.
ಪಾಕ್ ಆಟಗಾರ ಮುಂದೆ ತೋರಿದ ವರ್ತನೆ ತಪ್ಪು
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಉದಯನಿಧಿ ಸ್ಟಾಲಿನ್, ಭಾರತವು ತನ್ನ ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದಾಗ್ಯೂ, ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಆಟಗಾರರ ಮುಂದೆ ತೋರಿದ ವರ್ತನೆ ಸ್ವೀಕಾರಾರ್ಹವಲ್ಲ. ಇದು ತುಂಬಾ ನಿರಾಸೆ ಉಂಟು ಮಾಡಿತು. ಕ್ರೀಡೆಗಳು ಒಟ್ಟುಗೂಡಿಸುವ ಏಕೀಕರಣವಾಗಬೇಕು. ದೇಶಗಳ ನಡುವೆ ಸಹೋದರತ್ವ ಬೆಳೆಸಬೇಕು. ಆದರೆ ದ್ವೇಷ ಹರಡುವ ಸಾಧನವಾಗಿ ಬಳಸುತ್ತಿರುವುದು ಖಂಡನೀಯ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಚೆನ್ನೈನಲ್ಲಿ ಆತ್ಮೀಯವಾಗಿ ಸ್ವಾಗತಿಸಿ
ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್, 69 ಎಸೆತಗಳಲ್ಲಿ 49 ರನ್ ಗಳಿಸಿ ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗುತ್ತಿದ್ದಾಗ ಪ್ರೇಕ್ಷಕರು, ’ಜೈ ಶ್ರೀ ರಾಮ್‘ ಎಂದು ಘೋಷಣೆ ಕೂಗುವುದನ್ನು ವೀಡಿಯೊದಲ್ಲಿ ಕಾಣಬಹುದು. ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ರಿಜ್ವಾನ್ ಕ್ಲೀನ್ ಬೋಲ್ಡ್ ಆಗಿದ್ದರು. ಅಲ್ಲದೆ, ಮುಂದಿನ 10 ದಿನಗಳಲ್ಲಿ ಪಾಕಿಸ್ತಾನ ತಂಡ ಚೆನ್ನೈನಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ತಮಿಳುನಾಡಿನ ಜನತೆ ತುಂಬಾ ಆತ್ಮೀಯವಾಗಿ ಸ್ವಾಗತಿಸಿ. ಪ್ರೀತಿಸಿ, ಗೌರವಿಸಿ. ಆದರೆ ಇಂತಹ ವರ್ತನೆ ತೋರಬೇಡಿ ಎಂದು ಮನವಿ ಮಾಡಿದ್ದಾರೆ.
ಉದಯನಿಧಿ ಸ್ಟಾಲಿನ್ ವಿರುದ್ಧ ಕಿಡಿ
ಉದಯನಿಧಿ ಸ್ಟಾಲಿನ್ ಹೀಗೆ ಹೇಳಿಕೆ ನೀಡುತ್ತಿದ್ದಂತೆ ಭಾರಿ ಟೀಕೆ ವ್ಯಕ್ತವಾಗಿದೆ. ಅನೇಕರು ಕಿಡಿಕಾರಿದ್ದು, ದೇಶದ್ರೋಹಿ ಅಂತೆಲ್ಲಾ ಕರೆದಿದ್ದಾರೆ. ನೀನು ಸನಾತನ ಧರ್ಮ ವಿರೋಧಿ. ಉಗ್ರವಾದಿ. ಭಾರತದ ನೆಲದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಬೆಂಬಲ ನೀಡುವ ನಿನ್ನನ್ನು ದೇಶದ್ರೋಹಿ ಎನ್ನದೆ ಇನ್ನೇನು ಹೇಳಬೇಕು. ನಿಮ್ಮಂತಹವರು ಭಾರತಕ್ಕೆ ಭಾರ. ದೇಶ ಬಿಟ್ಟು ಮೊದಲು ತೊಲಗಿ. ನೀವು ದೇಶದ ಏಕತೆಗೆ ನೀವೇ ಅಡ್ಡಿಯಾಗುತ್ತಿದ್ದೀರಿ ಎಂದು ನೆಟ್ಟಿಜನ್ಸ್ ಕಿಡಿಕಾರಿದ್ದಾರೆ.
ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ
ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯು, ಕೊರೊನಾಗೆ ಹೋಲಿಸಿ ಉದಯನಿಧಿ ಸ್ಟಾಲಿನ್ ವಿವಾದಕ್ಕೆ ಗುರಿಯಾಗಿದ್ದರು. ತಮಿಳುನಾಡಿನ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸನಾತನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಸನಾತನ ಧರ್ಮವು ಡೆಂಗ್ಯು, ಮಲೇರಿಯಾ, ಕೊರೊನಾ ಇದ್ದಂತೆ. ಸನಾತನ ವಿರೋಧಿ ಸಮ್ಮೇಳನ ಎಂಬುದರ ಬದಲಿಗೆ ಸನಾತನ ನಿರ್ಮೂಲನಾ ಸಮ್ಮೇಳನ ಎಂದು ಸಮಾವೇಶ ನಡೆಸಿದ್ದು ತುಂಬಾ ಖುಷಿ ನೀಡಿತು ಎಂದಿದ್ದರು. ಇದು ಭಾರಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
ಟೀಮ್ ಇಂಡಿಯಾಗೆ ಜಯ
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ಭಾರತ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. 42.3 ಓವರ್ಗಳಲ್ಲಿ 191 ರನ್ಗಳಿಗೆ ಸರ್ವಪತನ ಕಂಡಿತು. ಬಾಬರ್ ಅಜಮ್ (50), ಮೊಹಮ್ಮದ್ ರಿಜ್ವಾನ್ (49) ಉತ್ತಮ ಪ್ರದರ್ಶನ ನೀಡಿದರು. ಈ ಗುರಿ ಬೆನ್ನಟ್ಟಿದ ಭಾರತ 30.3 ಓವರ್ಗಳಲ್ಲೇ ಗೆದ್ದು ಬೀಗಿತು. ರೋಹಿತ್ ಶರ್ಮಾ 86, ಶ್ರೇಯಸ್ ಅಯ್ಯರ್ ಅಜೇಯ 53 ರನ್ ಸಿಡಿಸಿ ಮಿಂಚಿದರು.