ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್; ಮೊದಲ ಬಾರಿಗೆ ನಂ 1 ಪಟ್ಟ ಅಲಂಕರಿಸಿ ದಾಖಲೆ ಬರೆದ ಬುಮ್ರಾ, ಅಗ್ರಸ್ಥಾನದಿಂದ ಕುಸಿದ ಅಶ್ವಿನ್
Feb 07, 2024 03:18 PM IST
ಮೊದಲ ಬಾರಿಗೆ ನಂ 1 ಪಟ್ಟ ಅಲಂಕರಿಸಿ ದಾಖಲೆ ಬರೆದ ಬುಮ್ರಾ
- Jasprit Bumrah : ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವೇಗಿಯೊಬ್ಬರು ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರು (Jasprit Bumrah) ವೈಜಾಗ್ ಟೆಸ್ಟ್‌ನಲ್ಲಿ ತಮ್ಮ ಬೌಲಿಂಗ್ ವೀರಾವೇಶದ ನಂತರ ಐಸಿಸಿ ಪುರುಷರ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ (ICC Test Ranking) ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಬೌಲರ್ ಒಬ್ಬರು ಟೆಸ್ಟ್ ಕ್ರಿಕೆಟ್ನ ಬೌಲಿಂಗ್ ವಿಭಾಗದ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿರುವುದು ಇದೇ ಮೊದಲು. ಬುಮ್ರಾ ಆ ಹಿರಿಮೆಗೆ ಪಾತ್ರರಾಗಿದ್ದಾರೆ.
ಭಾರತದ ಮೊದಲ ವೇಗಿ ಬುಮ್ರಾ
ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ (India vs England 2nd Test), 106 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಜಯದಲ್ಲಿ ಪ್ರಮುಖ ಪಾತ್ರವಹಿಸಿದ ಭಾರತ 91 ರನ್ ಬಿಟ್ಟು ಕೊಟ್ಟು 9 ವಿಕೆಟ್ ಪಡೆದಿದ್ದ ಬುಮ್ರಾ, ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶ್ವಿನ್ 3ನೇ ಸ್ಥಾನಕ್ಕೆ ಕುಸಿತ
ಎರಡನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಉರುಳಿಸಿದ ಬುಮ್ರಾ, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಮೊದಲ ಟೆಸ್ಟ್‌ನಲ್ಲಿ ಕೂಡ ಆರು ವಿಕೆಟ್ ಪಡೆದಿದ್ದರು. ಆದರೆ ಅಗ್ರಸ್ಥಾನದಲ್ಲಿದ್ದ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಬುಮ್ರಾ ಅಗ್ರಸ್ಥಾನಕ್ಕೇರುವುದಕ್ಕೂ ಮುನ್ನ 4 ಸ್ಥಾನದಲ್ಲಿದ್ದರು. ಇದೀಗ ಮೂರು ಸ್ಥಾನ ಪಡೆದು 881 ಅಂಕಗಳೊಂದಿಗೆ ನಂಬರ್ 1 ಆಗಿದ್ದಾರೆ.
ಆಡದಿದ್ದರೂ ರಬಾಡಗೆ ಎರಡನೇ ಸ್ಥಾನ
ಕಳೆದ ವರ್ಷ ಮಾರ್ಚ್‌ನಿಂದ ಅಗ್ರಸ್ಥಾನದಲ್ಲಿರುವ ಅಶ್ವಿನ್, ಎರಡನೇ ಟೆಸ್ಟ್‌ನಲ್ಲಿ ಭಾರತದ ಪರ ಕೇವಲ ಮೂರು ವಿಕೆಟ್ ಪಡೆದರು. ಮತ್ತು ನವೀಕರಿಸಿದ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಎರಡು ಸ್ಥಾನಗಳ ಕುಸಿತದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ನ್ಯೂಜಿಲೆಂಡ್ ಸರಣಿಯಿಂದ ಹೊರಗಿದ್ದರೂ ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ.
ಈ ವರ್ಷವೇ ಎರಡು ಬಾರಿ ಐದು ವಿಕೆಟ್
34 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ 10 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. 30 ವರ್ಷದ ಬುಮ್ರಾ ಈ ಹಿಂದೆ 3ನೇ ಸ್ಥಾನ ಪಡೆದಿದ್ದೇ ಅವರ ಗರಿಷ್ಠ ಶ್ರೇಯಾಂಕವಾಗಿತ್ತು. ಬುಮ್ರಾ ಈ ವರ್ಷ ಆಡಿದ ಟೆಸ್ಟ್ ಪಂದ್ಯಗಳಲ್ಲಿ 2 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ವರ್ಷದ ಆರಂಭದಲ್ಲಿ ಕೇಪ್ ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ 61 ರನ್ ನೀಡಿ 6 ವಿಕೆಟ್ ಮತ್ತು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 45 ರನ್ ನೀಡಿ 6 ವಿಕೆಟ್ ಉರುಳಿಸಿದ್ದಾರೆ.
ಉಳಿದವರ ಶ್ರೇಯಾಂಕ ಹೇಗಿದೆ?
ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅವರು 5 ವಿಕೆಟ್ ಕಬಳಿಸುವ ಮೂಲಕ 3 ಸ್ಥಾನ ಮೇಲೇರಿ 6ನೇ ಶ್ರೇಯಾಂಕಕ್ಕೆ ತಲುಪಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 500 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದ ನಾಥನ್ ಲಿಯಾನ್, ಶ್ರೇಯಾಂಕದಲ್ಲಿ 2 ಸ್ಥಾನ ಮೇಲೇರಿ ನಂಬರ್ 8ಕ್ಕೆ ತಲುಪಿದ್ದಾರೆ. ರವೀಂದ್ರ ಜಡೇಜಾ ಮತ್ತು ಒಲ್ಲಿ ರಾಬಿನ್ಸನ್ ಕ್ರಮವಾಗಿ 2 ಸ್ಥಾನ ಕುಸಿದು ನಂಬರ್ 9 ಮತ್ತು 10ರಲ್ಲಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಕುಸಿತ
ಬ್ಯಾಟಿಂಗ್ ವಿಭಾಗದಲ್ಲಿ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿದ್ದ ಜೋ ರೂಟ್, ಭಾರತದ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಟೀವ್ ಸ್ಮಿತ್ ಎರಡನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ಡೇರಿಲ್ ಮಿಚೆಲ್, ಬಾಬರ್ ಅಜಮ್, ಉಸ್ಮಾನ್ ಖವಾಜ ಕ್ರಮವಾಗಿ 4, 5, 6ನೇ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ 1 ಸ್ಥಾನ ಕುಸಿದು 7ನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್ 12, ರೋಹಿತ್ ಶರ್ಮಾ 13ನೇ ಶ್ರೇಯಾಂಕದಲ್ಲಿದ್ದಾರೆ.