ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಬುಮ್ರಾ, ಕೆಎಲ್ ರಾಹುಲ್ ಹೊರಕ್ಕೆ
Feb 29, 2024 04:15 PM IST
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ
- ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಪರಿಷ್ಕೃತ ತಂಡವನ್ನು ಪ್ರಕಟಿಸಿದೆ. ಜಸ್ಪ್ರೀತ್ ಬುಮ್ರಾ ತಂಡ ಸೇರಿಕೊಂಡಿದ್ದಾರೆ. ಅತ್ತ ಕೆಎಲ್ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ತಂಡದಿಂದ ಹೊರಗುಳಿದಿದ್ದಾರೆ. ಮಾರ್ಚ್ 07ರಿಂದ ಧರ್ಮಶಾಲಾದಲ್ಲಿ ಅಂತಿಮ ಟೆಸ್ಟ್ ಆರಂಭವಾಗಲಿದೆ.
ಇಂಗ್ಲೆಂಡ್ ವಿರುದ್ಧದ ಐದನೇ (India vs England 5th Test) ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ಪರಿಷ್ಕೃತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಧರ್ಮಶಾಲಾ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಮರಳಿದ್ದಾರೆ. ಕೆಲಸದ ಹೊರೆಯಿಂದಾಗಿ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಅನುಭವಿ ಬೌಲರ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ನಿರ್ಣಾಯಕ ಟೆಸ್ಟ್‌ಗೆ ವೇಗಿ ಮರಳಿದ್ದಾರೆ. ಬುಮ್ರಾ ಬದಲಿಗೆ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಆಕಾಶ್ ದೀಪ್ ಬದಲಿಗೆ ವೇಗದ ಬೌಲರ್ ನೇರವಾಗಿ ಆಡುವ ಬಳಗ ಸೇರಿಕೊಳ್ಳುವ ಸಾಧ್ಯತೆಯಿದೆ. ಅತ್ತ ತಂಡದಿಂದ ಕೆಎಲ್ ರಾಹುಲ್ ಅವರನ್ನು ಹೊರಗಿಡಲಾಗಿದೆ.
ಹಿಂದೂಸ್ತಾನ್ ಟೈಮ್ಸ್ ವರದಿಯಂತೆಯೇ, ಕನ್ನಡಿಗ ಕೆಎಲ್ ರಾಹುಲ್ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಲಂಡನ್‌ಗೆ ಹಾರಿರುವ ಅವರು, ಬೇಗನೆ ಮರಳುವ ಸಾಧ್ಯತೆ ಇಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ.
“ರಾಂಚಿಯಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯದ ವೇಳೆ ತಂಡದಿಂದ ಬಿಡುಗಡೆಯಾದ ಜಸ್ಪ್ರೀತ್ ಬುಮ್ರಾ, 5ನೇ ಟೆಸ್ಟ್‌ಗಾಗಿ ಧರ್ಮಶಾಲಾದಲ್ಲಿ ತಂಡ ಸೇರಿಕೊಳ್ಳಲಿದ್ದಾರೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
“ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಉಪಸ್ಥಿತಿಯು ಫಿಟ್‌ನೆಸ್‌ಗೆ ಒಳಪಟ್ಟಿದ್ದ ಕಾರಣದಿಂದ, ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟೆಸ್ಟ್‌ನಿಂದ ಅವರನ್ನು ಹೊರಗಿಡಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಮೇಲೆ ನಿಗಾ ವಹಿಸಿದೆ. ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಲಂಡನ್‌ನ ತಜ್ಞರೊಂದಿಗೆ ಸಮನ್ವಯ ಸಾಧಿಸುತ್ತಿದೆ” ಎಂದು ಬಿಸಿಸಿಐ ತಿಳಿಸಿದೆ.
ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಲಾಗಿದೆ. ಆಫ್-ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಆಡಲು ತಂಡದಿಂದ ಬಿಡುಗಡೆ ಮಾಡಲಾಗಿದೆ. ತಂಡದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಇದ್ದು, ಹೀಗಾಗಿ ಹೆಚ್ಚುವರಿ ಸ್ಪಿನ್ನರ್ ಅಗತ್ಯ ಸದ್ಯ ತಂಡಕ್ಕಿಲ್ಲ.
“ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಮಾರ್ಚ್ 2ರಿಂದ ಪ್ರಾರಂಭವಾಗುವ ಮುಂಬೈ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಅವರು ತಮ್ಮ ರಣಜಿ ಟ್ರೋಫಿ ತಂಡವಾದ ತಮಿಳುನಾಡು ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಗತ್ಯವಿದ್ದರೆ ಐದನೇ ಟೆಸ್ಟ್‌ನಲ್ಲಿ ಆಡಲು ದೇಶೀಯ ಪಂದ್ಯ ಮುಗಿದ ನಂತರ ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ” ಎಂದು ಬಿಸಿಸಿಐ ತಿಳಿಸಿದೆ.
ಅತ್ತ ಕೆಎಲ್ ರಾಹುಲ್ ಅನುಪಸ್ಥಿತಿಯಿಂದಾಗಿ ಕಳೆದ ಮೂರು ಪಂದ್ಯಗಳಲ್ಲಿ ರಜತ್ ಪಾಟಿದಾರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಮಧ್ಯಪ್ರದೇಶದ ಬಲಗೈ ಬ್ಯಾಟರ್ ಸರಣಿಯುದ್ದಕ್ಕೂ ವಿಫಲರಾಗಿದ್ದಾರೆ. ಎರಡು ಬಾರಿ ಡಕೌಟ್ ಆಗಿರುವ ಪಾಟೀದಾರ್ ಗರಿಷ್ಠ ಸ್ಕೋರ್ 32 ಮಾತ್ರ. ಹೀಗಾಗಿ ತಂಡದಿಂದ ಅವರನ್ನು ಹೊರಗಿಟ್ಟು ದೇವದತ್ ಪಡಿಕ್ಕಲ್ ಆಡುವ ಬಳಗ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಭಾರತ ತಂಡವು ಈಗಾಗಲೇ ಸರಣಿ ವಶಪಡಿಸಿಕೊಂಡಿದೆ. ಐದು ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಕೊನೆಯ ಟೆಸ್ಟ್ ಪಂದ್ಯದಲಿ ತಂಡವು ಮತ್ತೆ ಗೆಲುವು ಸಾಧಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಸುಧಾರಣೆ ಕಾಣುತ್ತದೆ.
ಐದನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.