ಜೋಸ್ ಬಟ್ಲರ್ ಗೆಲುವಿನ ಸೆಂಚುರಿ ಮುಂದೆ ಕೊಹ್ಲಿ ಶತಕ ವ್ಯರ್ಥ; ರಾಜಸ್ಥಾನ್ಗೆ ಸತತ 4ನೇ ಜಯ, ಆರ್ಸಿಬಿ ಹ್ಯಾಟ್ರಿಕ್ ಸೋಲು
Apr 06, 2024 11:26 PM IST
ರಾಜಸ್ಥಾನ್ಗೆ ಸತತ 4ನೇ ಜಯ, ಆರ್ಸಿಬಿ ಹ್ಯಾಟ್ರಿಕ್ ಸೋಲು
- RR Beat RCB: 17ನೇ ಆವೃತ್ತಿಯ ಐಪಿಎಲ್ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಗೆಲುವು ಸಾಧಿಸಿತು. ಜೋಸ್ ಬಟ್ಲರ್ ಶತಕ ಸಿಡಿಸಿ ಆರ್ಸಿಬಿ ಗೆಲುವನ್ನು ಕಿತ್ತುಕೊಂಡರು. ಇದರೊಂದಿಗೆ ವಿರಾಟ್ ಕೊಹ್ಲಿ ಸೆಂಚುರಿ ವ್ಯರ್ಥವಾಯಿತು.
ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ಶತಕಕ್ಕೂ (113*) ಜಗ್ಗದ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಜೋಸ್ ಬಟ್ಲರ್ (100) ಅವರ ಶತಕ ಮತ್ತು ಸಂಜು ಸ್ಯಾಮ್ಸನ್ (69) ಅರ್ಧಶತಕ ಸಿಡಿಸಿದ್ದರ ಜತೆಗೆ 148 ರನ್ಗಳ ಜೊತೆಯಾಟವಾಡುವ ಮೂಲಕ ಆರ್ಸಿಬಿಯನ್ನು ಆರ್ಆರ್, 6 ವಿಕೆಟ್ಗಳಿಂದ ಮಣಿಸಿತು. ಟೂರ್ನಿಯಲ್ಲಿ ಬೆಂಗಳೂರು 4ನೇ ಸೋಲು ಕಂಡರೆ, ರಾಜಸ್ಥಾನ ಸತತ 4ನೇ ಜಯದ ನಗೆ ಬೀರಿದೆ. ಇದು ಬಟ್ಲರ್ಗೆ 100ನೇ ಐಪಿಎಲ್ ಪಂದ್ಯವಾಗಿದ್ದು, ಶತಕ ಸಿಡಿಸಿ ಸ್ಮರಣೀಯವಾಗಿಸಿಕೊಂಡಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ನ 19ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ಉತ್ತಮ ಮೊತ್ತವನ್ನು ಕಲೆ ಹಾಕಿತು. ಕೊಹ್ಲಿ ಅವರ ಸೆಂಚುರಿ ಸಹಾಯದಿಂದ ಬೆಂಗಳೂರು 20 ಓವರ್ಗಳಲ್ಲಿ 3 ವಿಕೆಟ್ಗೆ 183 ರನ್ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ ಆರ್ಆರ್, ಎದುರಾಳಿ ಬೌಲರ್ಗಳ ಬೆನ್ನು ಮುರಿದರು. ಸ್ಯಾಮ್ಸನ್ ಮತ್ತು ಬಟ್ಲರ್ ಅವರ ಆರ್ಭಟದಿಂದ 19.1 ಓವರ್ಗಳಲ್ಲೇ ಗೆಲುವಿನ ಗೆರೆ ದಾಟಿತು.
ವಿಕೆಟ್ ಪಡೆಯಲು ಆರ್ಸಿಬಿ ಬೌಲರ್ಸ್ ಪರದಾಟ
184 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಇನ್ನಿಂಗ್ಸ್ನ ಆರಂಭಿಕ ಓವರ್ನಲ್ಲೇ ಯಶಸ್ವಿ ಜೈಸ್ವಾಲ್ (0) ಅವರನ್ನು ಕಳೆದುಕೊಂಡಿತು. ರೀಸ್ ಟೋಪ್ಲಿ ಈ ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ತಂದುಕೊಟ್ಟರು. ಆದರೆ, ಆ ಬಳಿಕ ಒಂದಾದ ಸ್ಯಾಮ್ಸನ್ ಮತ್ತು ಬಟ್ಲರ್ ಜೋಡಿ ಆರ್ಸಿಬಿ ಬೌಲರ್ಗಳಿಗೆ ಕರುಣೆಯಿಲ್ಲದೆ ಮನಬಂದಂತೆ ದಂಡಿಸಿತು. ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದಿತು. ಒತ್ತಡಕ್ಕೆ ಒಳಗಾಗದೆ ನಿರ್ಭೀತಿಯಿಂದ ಆಟವಾಡಿದ ಇಬ್ಬರು, 2ನೇ ವಿಕೆಟ್ಗೆ 148 ರನ್ಗಳ ಭರ್ಜರಿ ಜೊತೆಯಾಟವಾಡಿದರು.
ಸ್ಯಾಮ್ಸನ್ ಅರ್ಧಶತಕ, ಬಟ್ಲರ್ ಶತಕ
ಸೆಂಚುರಿ ಪಾಲುದಾರಿಕೆ ನೀಡಿದ ಸ್ಯಾಮ್ಸನ್ ಅರ್ಧಶತಕ ಸಿಡಿಸಿದರೆ, ಬಟ್ಲರ್ ಐಪಿಎಲ್ನಲ್ಲಿ 6ನೇ ಶತಕ ಸಿಡಿಸಿ ಮಿಂಚಿದರು. ಒಂದೆಡೆ ಆರ್ಸಿಬಿ ಬೌಲರ್ಗಳು ವಿಕೆಟ್ ಪಡೆಯಲು ಪರದಾಟ ನಡೆಸಿದರೆ, ಮತ್ತೊಬ್ಬರು ಈ ಇಬ್ಬರು ರನ್ ಮಳೆ ಹರಿಸಿದರು. ಸ್ಯಾಮ್ಸನ್ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ನೊಂದಿಗೆ 69 ರನ್ಗಳಿಸಿ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ಸಿರಾಜ್ ಈ ವಿಕೆಟ್ ಪಡೆದರು. ರಿಯಾನ್ ಪರಾಗ್ 4, ಧ್ರುವ್ ಜುರೆಲ್ 2 ರನ್ ಗಳಿಸಿ ಔಟಾದರು.
ಆದರೆ, ಧ್ರುವ್ ಜುರೆಲ್ ಕೊನೆಯವರೆಗೂ ಕ್ರೀಸ್ನಲ್ಲಿದ್ದು, ತಂಡವನ್ನು ಗೆಲ್ಲಿಸಿದರು. ಕಳೆದ ಮೂರು ಪಂದ್ಯಗಳಿಂದ ನಿರಾಸೆ ಮೂಡಿಸಿದ್ದ ಬಟ್ಲರ್, ಈ ಪಂದ್ಯದಲ್ಲಿ ಲಯಕ್ಕೆ ಮರಳಿದ್ದಲ್ಲದೆ, ಗೆಲುವಿನ ಇನ್ನಿಂಗ್ಸ್ ಆಡಿದರು. ಅಲ್ಲದೆ, ಶತಕ ಸಿಡಿಸಿ ದಾಖಳೆ ಬರೆದರು. ಈ ಐಪಿಎಲ್ನಲ್ಲಿ ದಾಖಲಾದ ಎರಡನೇ ಶತಕ ಇದಾಗಿದೆ. 58 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ನೊಂದಿಗೆ ಅಜೇಯ 100 ರನ್ ಗಳಿಸಿದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ 11 ರನ್ ಗಳಿಸಿ ಬಟ್ಲರ್ಗೆ ಸಾಥ್ ನೀಡಿದರು.
ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ಈ ಐಪಿಎಲ್ನಲ್ಲಿ ಭರ್ಜರಿ ಆರಂಭ ಪಡೆಯಿತು. ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 125 ರನ್ಗಳ ಅಮೋಘ ಭದ್ರಬುನಾದಿ ಹಾಕಿಕೊಟ್ಟರು. ಫಾಫ್ ಡು ಪ್ಲೆಸಿಸ್ 44 ರನ್ ಗಳಿಸಿ ಲಯಕ್ಕೆ ಮರಳಿದರು. ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಮತ್ತೊಂದೆಡೆ ಗ್ಲೆನ್ ಮ್ಯಾಕ್ಸ್ವೆಲ್ (1) ಸತತ ಐದನೇ ಪಂದ್ಯದಲ್ಲೂ ರನ್ ಗಳಿಸಲು ಪರದಾಡಿದರು. ಡೆಬ್ಯೂಸ್ಟಾರ್ ಸೌರಭ್ ಚೌಹಾಣ್ 9, ಕ್ಯಾಮರೂನ್ ಗ್ರೀನ್ ಅಜೇಯ 6 ರನ್ ಗಳಿಸಿದರು.
ಆರಂಭದಿಂದಲೂ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ, ಇನ್ನಿಂಗ್ಸ್ ಕೊನೆಯವರೆಗೂ ಬ್ಯಾಟ್ ಬೀಸಿದರು. ತಾನು ಎದುರಿಸಿದ 67ನೇ ಎಸೆತದಲ್ಲಿ ತನ್ನ 8ನೇ ಐಪಿಎಲ್ ಶತಕವನ್ನು ಪೂರೈಸಿದರು. ರಾಜಸ್ಥಾನ್ ವಿರುದ್ಧ ಇದು ಅವರ ಮೊದಲ ಸೆಂಚುರಿಯಾಗಿದೆ. ಇದರ ನಡುವೆಯೂ ಶತಕ ಚಚ್ಚಿದ ಕೊಹ್ಲಿ, ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. 72 ಎಸೆತಗಳಲ್ಲಿ 12 ಬೌಂಡರಿ, 4 ಬೌಂಡರಿ ಸಹಿತ 113 ರನ್ ಕಲೆ ಹಾಕಿದರು.
ಕೊನೆಯ ಹಂತದಲ್ಲಿ ಖಡಕ್ ಬೌಲಿಂಗ್ ದಾಳಿ ನಡೆಸಿದ ಆರ್ಆರ್ ಬೌಲರ್ಸ್, ಆರ್ಸಿಬಿ ಬ್ಯಾಟಿಂಗ್ಗೆ ಕಡಿವಾಣ ಹಾಕಿದರು. ಆದರೆ ಕೊಹ್ಲಿಯಂತೆ ಉಳಿದ ಬ್ಯಾಟರ್ಗಳು ಸಹ ಸಿಡಿದಿದ್ದರೆ, ತಂಡದ ಮೊತ್ತವು 200ರ ಗಡಿ ದಾಟುತ್ತಿತ್ತು. ಆಗ ಆರ್ಆರ್ಗೆ ಸವಾಲು ಹಾಕಲು ಸಾಧ್ಯವಾಗುತ್ತಿತ್ತು. ಅಂತಿಮವಾಗಿ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು.