ಯುಎಸ್ಎ ವಿರುದ್ಧ ಸೌತ್ ಆಫ್ರಿಕಾಗೆ 18 ರನ್ ಭರ್ಜರಿ ಗೆಲುವು; ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ
Jun 19, 2024 11:43 PM IST
ಯುಎಸ್ಎ ವಿರುದ್ಧ ಸೌತ್ ಆಫ್ರಿಕಾಗೆ 18 ರನ್ ಭರ್ಜರಿ ಗೆಲುವು; ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ
- United States vs South Africa: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಸೂಪರ್-8ರ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಸೌತ್ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದೆ.
ಕ್ವಿಂಟನ್ ಡಿ ಕಾಕ್ (Quinton de Kock) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಅಮೆರಿಕ ವಿರುದ್ಧದ ಟಿ20 ವಿಶ್ವಕಪ್ 2024 ಸೂಪರ್-8 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 24 ರನ್ಗಳಿಂದ ಗೆದ್ದು ಬೀಗಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಸೂಪರ್-8 ಹಂತದ ಗ್ರೂಪ್-2ರ ಮೊದಲ ಪಂದ್ಯದಲ್ಲಿ ಯುಎಸ್ಎ 18 ರನ್ಗಳಿಂದ ಸೋಲನುಭವಿಸಿತು. ಆದರೆ, ಆಂಡ್ರಿಸ್ ಗೌಸ್ ಅಜೇಯ ಹೋರಾಟ ವ್ಯರ್ಥವಾಯಿತು. ಈ ಹಂತದಲ್ಲಿ ಎರಡು ಗೆಲುವು ಸಾಧಿಸಿದ ತಂಡವು ಸೆಮಿಫೈನಲ್ ಪ್ರವೇಶಿಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ, ಭರ್ಜರಿ ಬ್ಯಾಟಿಂಗ್ ನಡೆಸಿತು. ಕಠಿಣ ಪಿಚ್ಗಳಲ್ಲೂ ಉತ್ತಮ ಮೊತ್ತ ಪೇರಿಸಿತು. ಅದರಲ್ಲೂ ಕ್ವಿಂಟನ್ ಡಿ ಕಾಕ್ ಸ್ಫೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪರಿಣಾಮ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತು. ಸೌರಭ್ ನೇತ್ರಾವಲ್ಕರ್-ಹರ್ಮೀತ್ ಸಿಂಗ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಅಮೆರಿಕ ಪ್ರತಿರೋಧ ತೋರಿತು. ಆಂಡ್ರಿಸ್ ಗೌಸ್ ಅರ್ಧಶತಕ ಸಿಡಿಸಿ ಹೋರಾಡಿದರೂ ಗೆಲುವು ಸಾಧ್ಯವಾಗಿಲ್ಲ.
ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ
195 ರನ್ಗಳ ಸವಾಲಿನ ಮೊತ್ತ ಹಿಂಬಾಲಿಸಿದ ಅಮೆರಿಕ, ಮೊದಲ ವಿಕೆಟ್ಗೆ 33 ರನ್ ಕಲೆ ಹಾಕಿತು. ಸ್ಟೀವನ್ ಟೇಲರ್ 24 ರನ್ ಗಳಿಸಿ ಔಟಾದರು. ತದನಂತರ ಸ್ಕೋರ್ ವೇಗವಾಗಿ ಹರಿದು ಬರಲಿಲ್ಲ. ನಿತೀಶ್ ಕುಮಾರ್ (8) ಕೂಡ ಕೈಹಿಡಿಯಲಿಲ್ಲ. ತಂಡದ ಆಪತ್ಬಾಂದವನಾಗಿದ್ದ ಆರೋನ್ ಜೋನ್ಸ್ ಡಕೌಟಾದರು. ಕೋರಿ ಆ್ಯಂಡರ್ಸನ್ (12) ಮತ್ತು ಶಯನ್ ಜಹಂಗೀರ್ (3) ಕೂಡ ನಿರಾಸೆ ಮೂಡಿಸಿದರು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಸೋಲಿನಂಚಿಗೆ ಬಂದಿದ್ದ ತಂಡಕ್ಕೆ ಆಂಡ್ರೀಸ್ ಗೌಸ್ ಮತ್ತು ಹರ್ಮೀತ್ ಸಿಂಗ್ ಆಸರೆಯಾದರು.
76ಕ್ಕೆ 5 ವಿಕೆಟ್ ಕಳೆದುಕೊಂಡು ಅಮೆರಿಕಗೆ ಈ ಇಬ್ಬರು 6ನೇ ವಿಕೆಟ್ಗೆ 91 ರನ್ಗಳ ಪಾಲುದಾರಿಕೆ ಒದಗಿಸಿದರು. ಇದರೊಂದಿಗೆ ತಂಡದಲ್ಲಿ ಗೆಲುವಿನ ಆಸೆ ಹೆಚ್ಚಿಸಿದರು. ಮತ್ತೊಂದೆಡೆ ಗೌಸ್ ಅದ್ಭುತ ಅರ್ಧಶತಕ ಸಿಡಿಸಿ ಗೆಲುವಿಗೆ ಹೋರಾಡಿದರು. ಗೌಸ್ಗೆ ಹರ್ಮೀತ್ ಸಿಂಗ್ ಸಾಥ್ ನೀಡಿದರು. ಹರ್ಮೀತ್ 38 ರನ್ ಸಿಡಿಸಿ ಔಟಾದರೆ, ಗೌಸ್ 47 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಸಹಿತ ಅಜೇಯ 80 ರನ್ ಸಿಡಿಸಿದರೂ ಗೆಲುವು ತಂದುಕೊಡಲು ವಿಫಲರಾದರು. 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಕಗಿಸೋ ರಬಾಡ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 3 ವಿಕೆಟ್ ಪಡೆದರು.
ಕ್ವಿಂಟನ್ ಡಿ ಕಾಕ್ ಭರ್ಜರಿ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ನಡೆಸಿದ ಆಫ್ರಿಕಾ, ಉತ್ತಮ ಆರಂಭ ಪಡೆಯಲಿಲ್ಲ. ರೀಜಾ ಹೆಂಡ್ರಿಕ್ಸ್ 11 ರನ್ ಗಳಿಸಿ ಹೊರ ನಡೆದರು. ಆ ಬಳಿಕ ಜೊತೆಯಾದ ಕ್ವಿಂಟನ್ ಡಿ ಕಾಕ್ ಮತ್ತು ಏಡನ್ ಮಾರ್ಕ್ರಮ್ ಎರಡನೇ ವಿಕೆಟ್ಗೆ 110 ರನ್ಗಳ ಪಾಲುದಾರಿಕೆ ನೀಡಿದರು. ಅಮೆರಿಕ ಬೌಲರ್ಗಳ ಎದುರು ಆರ್ಭಟಿಸಿದರು. ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿದ ಡಿ ಕಾಕ್, ಸಖತ್ ಅರ್ಧಶತಕ ಸಿಡಿಸಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು.
ಅಂತಿಮವಾಗಿ 40 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಿತ 74 ರನ್ ಗಳಿಸಿ ಔಟಾದರು. ಇನ್ನು ಡೇವಿಡ್ ಮಿಲ್ಲರ್ ಗೋಲ್ಡನ್ ಡಕೌಟ್ ಆಗಿ ಹೊರ ನಡೆದರು. ಮತ್ತೊಂದೆಡೆ, ನಾಯಕ ಮಾರ್ಕ್ರಮ್ ಅರ್ಧಶತಕದ ಅಂಚಿನಲ್ಲಿ ಎಡವಿದರು. 32 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 46 ರನ್ ಪೇರಿಸಿ ಔಟಾದರು. ಬಳಿಕ ಕೊನೆಯ ಹಂತದಲ್ಲಿ ಹೆನ್ರಿಚ್ ಕ್ಲಾಸೆನ್-ಟ್ರಿಸ್ಟಾನ್ ಸ್ಟಬ್ಸ್ 53 ರನ್ಗಳ ಪಾಲುದಾರಿಕೆ ಒದಗಿಸಿದರು. ಕ್ಲಾಸೆನ್ ಅಜೇಯ 36 ಮತ್ತು ಸ್ಟಬ್ಸ್ ಅಜೇಯ 20 ರನ್ ಗಳಿಸಿದರು.