VHT 2025: ಐದು ವರ್ಷಗಳ ನಂತರ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ; ವಿದರ್ಭ ಚೊಚ್ಚಲ ಪ್ರಶಸ್ತಿ ಕನಸು ಭಗ್ನ
Jan 18, 2025 09:29 PM IST
VHT 2025: ಐದು ವರ್ಷಗಳ ನಂತರ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ; ವಿದರ್ಭ ಚೊಚ್ಚಲ ಪ್ರಶಸ್ತಿ ಕನಸು ಭಗ್ನ
- Vijay Hazare Trophy 2024-25: ಪ್ರಸಕ್ತ ಸಾಲಿನ ವಿಜಯ್ ಹಜಾರೆ ಫೈನಲ್ನಲ್ಲಿ ವಿದರ್ಭ ತಂಡವನ್ನು ಮಣಿಸಿದ ಕರ್ನಾಟಕ ತಂಡ ಐದು ವರ್ಷಗಳ ನಂತರ ಐದನೇ ಟ್ರೋಫಿಗೆ ಮುತ್ತಿಕ್ಕಿದೆ.

2024-25ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ (Vijay Hazare Trophy 2024-25) ವಿದರ್ಭ ತಂಡವನ್ನು 36 ರನ್ಗಳಿಂದ ಮಣಿಸಿದ ಕರ್ನಾಟಕ ಐದನೇ ಬಾರಿಗೆ (Karnataka beat Vidarbha) ಚಾಂಪಿಯನ್ ಪಟ್ಟ ಅಲಂಕರಿಸಿದೆ. 2019-20ರಲ್ಲಿ ಕೊನೆಯದಾಗಿ ಟ್ರೋಫಿಗೆ ಮುತ್ತಿಕ್ಕಿದ್ದ ಕರ್ನಾಟಕ ಇದೀಗ ಐದು ವರ್ಷಗಳ ನಂತರ 5ನೇ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆದರೆ ಕರುಣ್ ನಾಯರ್ ಅವರ (779 ರನ್) ವಿಧ್ವಂಸಕ ಆಟದ ನೆರವಿನಿಂದ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ವಿದರ್ಭ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತು. ಕೊನೆಯಲ್ಲಿ ಹರ್ಷ ದುಬೆ (63) ಅಬ್ಬರದ ಮಧ್ಯೆಯೂ 349 ರನ್ ಗುರಿ ಬೆನ್ನಟ್ಟಲಾಗದೆ 312 ರನ್ ಗಳಿಸಿ ಮಯಾಂಕ್ ಪಡೆಗೆ ಶರಣಾಯಿತು.
ಈ ಗೆಲುವಿನೊಂದಿಗೆ ಕರ್ನಾಟಕ ಅತಿ ಹೆಚ್ಚು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ತಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಈವರೆಗೂ ಕರ್ನಾಟಕ ಐದು ಬಾರಿ ಪ್ರಶಸ್ತಿ ಗೆದ್ದಿದೆ. ತಮಿಳುನಾಡು ತಂಡವೂ ಐದು ಸಲ ಚಾಂಪಿಯನ್ ಆಗಿದೆ. ಆದರೆ, 2004-05ರಲ್ಲಿ ಉತ್ತರ ಪ್ರದೇಶ ತಂಡದೊಂದಿಗೆ ಜಂಟಿ ಚಾಂಪಿಯನ್ ಆಗಿತ್ತು. ಮುಂಬೈ ತಂಡ ನಾಲ್ಕು ಬಾರಿ ಟ್ರೋಫಿ ಗೆದ್ದು ನಂತರದ ಸ್ಥಾನದಲ್ಲಿದೆ. ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯದಿದ್ದರೂ ಸ್ಮರಣ್ ರವಿಚಂದ್ರನ್ (101) ಅವರ ಸ್ಮರಣೀಯ ಶತಕ ಮತ್ತು ಅಭಿನವ್ ಮನೋಹರ್ (79) ಅವರ ಸ್ಫೋಟಕ ಇನ್ನಿಂಗ್ಸ್ ಸಹಾಯದಿಂದ ಬೃಹತ್ ರನ್ ಪೇರಿಸಿತ್ತು. ವಿದರ್ಭ ಸಹ ಅದ್ಭುತ ಪ್ರದರ್ಶನ ನೀಡಿದರೂ ಕೊನೆಯಲ್ಲಿ ಪಂದ್ಯವನ್ನು ಕೈಚೆಲ್ಲಿತು.
ಸ್ಮರಣ್ ಸ್ಮರಣೀಯ ಶತಕ, ಅಭಿನವ್ ಅಬ್ಬರ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ, 67 ರನ್ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡಿತು. ದೇವದತ್ ಪಡಿಕ್ಕಲ್ 8, ಮಯಾಂಕ್ ಅಗರ್ವಾಲ್ 32, ಕೆವಿ ಅನೀಶ್ 21 ರನ್ ಗಳಿಸಿ ನಿರಾಸೆ ಮೂಡಿಸಿದರು. ಆ ಬಳಿಕ ನಾಲ್ಕನೇ ವಿಕೆಟ್ಗೆ ಸ್ಮರಣ್ ಮತ್ತು ಕೃಷ್ಣನ್ ಶ್ರೀಜಿತ್ 160 ರನ್ಗಳ ಜೊತೆಯಾಟವಾಡಿದರು. ವಿದರ್ಭ ಬೌಲರ್ಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಮಧ್ಯಮ ಓವರ್ಗಳಲ್ಲಿ ದಂಡನೆಗೆ ಒಳಗಾದರು. ಸ್ಮರಣ್ ಸ್ಮರಣೀಯ ಶತಕ (101 ರನ್, 92 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ, ಶ್ರೀಜಿತ್ ಆಕರ್ಷಕ ಅರ್ಧಶತಕ (78 ರನ್, 74 ಎಸೆತ, 9 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಕೊನೆಯಲ್ಲಿ ಅಭಿನವ್ (79 ರನ್, 42 ಎಸೆತ, 10 ಬೌಂಡರಿ, 4 ಸಿಕ್ಸರ್) ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 300ರ ಗಡಿ ದಾಟಿಸಲು ನೆರವಾದರು. ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತು.
ಧ್ರುವ್ ಶೋರೆ ಶತಕ ವ್ಯರ್ಥ
ಈ ಗುರಿ ಬೆನ್ನಟ್ಟಿದ ಅಜೇಯವಾಗಿ ಫೈನಲ್ಗೇರಿದ್ದ ವಿದರ್ಭ ಅಂತಿಮ ಪಂದ್ಯದಲ್ಲಿ ಸೋಲು ಒಪ್ಪಿಕೊಂಡಿತು. ಆರಂಭದಲ್ಲೇ ಯಶ್ ರಾಥೋಡ್ (22) ವಿಕೆಟ್ ಕಳೆದುಕೊಂಡ ವಿದರ್ಭ ಆಘಾತಕ್ಕೆ ಕಳೆದುಕೊಂಡಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ ಕರುಣ್ ನಾಯರ್ (27) ಫೈನಲ್ನಲ್ಲಿ ರನ್ ಗಳಿಸಲು ವಿಫಲರಾದರು. ಕರ್ನಾಟಕ ವೇಗಿಗಳ ಆರ್ಭಟಕ್ಕೆ ಸುಸ್ತಾದ ವಿದರ್ಭ ಸತತ ವಿಕೆಟ್ ಕಳೆದುಕೊಂಡಿತು. ಇದರ ನಡುವೆಯೂ ಧ್ರುವ್ ಶೋರೆ ಶತಕ (110 ರನ್, 111 ಎಸೆತ, 08 ಬೌಂಡರಿ, 02 ಸಿಕ್ಸರ್) ಸಿಡಿಸಿದರು. ಹರ್ಷ ದುಬೆ ಅಂತಿಮ ಹಂತದಲ್ಲಿ 63 ರನ್ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು. ಇಬ್ಬರ ಹೋರಾಟ ವ್ಯರ್ಥವಾಯಿತು. ಯಶ್ ಕದಂ 15, ಜಿತೇಶ್ ಶರ್ಮಾ 34, ಶುಭಂ ದುಬೆ 8, ಅಪೂರ್ವ ವಾಂಖೆಡೆ 12 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಂತಿಮವಾಗಿ ವಿದರ್ಭ 48.2 ಓವರ್ಗಳಲ್ಲಿ 312 ಕ್ಕೆ ಆಲೌಟ್ ಆಯಿತು. ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ, ಅಭಿಲಾಶ್ ಶೆಟ್ಟಿ, ವಾಸುಕಿ ಕೌಶಿಕ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ವಿಜಯ್ ಹಜಾರೆ ಟ್ರೋಫಿ ವಿಜೇತರ ಪಟ್ಟಿ (2002 ರಿಂದ)
2002-03 - ತಮಿಳುನಾಡು
2003-04 - ಮುಂಬೈ
2004-05 - ತಮಿಳುನಾಡು ಮತ್ತು ಉತ್ತರ ಪ್ರದೇಶ ಜಂಟಿ ಚಾಂಪಿಯನ್
2005-06 - ರೈಲ್ವೆ
2006-07 - ಮುಂಬೈ
2007-08 - ಸೌರಾಷ್ಟ್ರ
2008-09 - ತಮಿಳುನಾಡು
2009-10 - ತಮಿಳುನಾಡು
2010-11 - ಜಾರ್ಖಂಡ್
2011-12 - ಬಂಗಾಳ
2012-13 - ದೆಹಲಿ
2013-14 - ಕರ್ನಾಟಕ
2014-15 - ಕರ್ನಾಟಕ
2015-16 - ಗುಜರಾತ್
2016-17 - ತಮಿಳುನಾಡು
2017-18 - ಕರ್ನಾಟಕ
2018-19 - ಮುಂಬೈ
2019-20 - ಕರ್ನಾಟಕ
2020-21 - ಮುಂಬೈ
2021-22 - ಹಿಮಾಚಲ ಪ್ರದೇಶ
2022-23 - ಸೌರಾಷ್ಟ್ರ
2023-24 - ಹರಿಯಾಣ
2024-25- ಕರ್ನಾಟಕ