ಓವರ್ವೊಂದರಲ್ಲಿ 100ಕ್ಕೂ ಅಧಿಕ ಮೀಟರ್ ದೂರದ 4 ಸಿಕ್ಸರ್ ಚಚ್ಚಿದ ಪೊಲಾರ್ಡ್; ವಿಡಿಯೋ ನೋಡಿ
Aug 28, 2023 03:48 PM IST
ಕಿರನ್ ಪೊಲಾರ್ಡ್ ಬ್ಯಾಟಿಂಗ್.
- Kieron Pollard: ಒಂದೇ ಓವರ್ನಲ್ಲಿ 4 ಸಿಕ್ಸರ್ಗಳನ್ನು 100ಕ್ಕೂ ಅಧಿಕ ಮೀಟರ್ ದೂರ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವೆಸ್ಟ್ ಇಂಡೀಸ್ನ ಕಿರನ್ ಪೊಲಾರ್ಡ್ ಭಾಜನರಾಗಿದ್ದಾರೆ.
ನಿಕೋಲಸ್ ಪೂರನ್ (Nicholas Pooran) ಭರ್ಜರಿ ಅರ್ಧಶತಕ ಮತ್ತು ನಾಯಕ ಕಿರನ್ ಪೊಲಾರ್ಡ್ (Kieron Pollard) ಅವರ ಭರ್ಜರಿ 5 ಸಿಕ್ಸರ್ಗಳ ಸಹಾಯದಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2023) 12ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು (Trinbago Knight Riders) ಭರ್ಜರಿ ಗೆಲುವು ಸಾಧಿಸಿದೆ. ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡದ (St Kitts and Nevis Patriots) ಎದುರು 6 ವಿಕೆಟ್ಗಳ ಗೆಲುವು ದಾಖಲಿಸಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ 17.1 ಓವರ್‌ಗಳಲ್ಲೇ ಗುರಿ ಮುಟ್ಟಿತು.
ಟಾಸ್ ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್, ಬೌಲಿಂಗ್ ಆಯ್ಕೆ ಮಾಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೇಂಟ್ ಕೀಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 179 ರನ್ಗಳ ಗುರಿ ನೀಡಿತು. ನಾಯಕ ಶೆರ್ಫಾನೆ ರುದರ್ಫೋರ್ಡ್ (Sherfane Rutherford) ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. 38 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ನೆರವಿನಿಂದ 62 ರನ್ಗಳಿಸಿ ತಂಡವು ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು.
ಈ ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್, ನಿಕೋಲಸ್ ಪೂರನ್ ಅವರ ಬೆಂಕಿ-ಬಿರುಗಾಳಿ ಅರ್ಧಶತಕ ಮತ್ತು ಪೊಲಾರ್ಡ್ ಅವರ ಭರ್ಜರಿ 5 ಸಿಕ್ಸರ್ಗಳ ಸಹಾಯದಿಂದ ಪಂದ್ಯವನ್ನು ಗೆದ್ದು ಬೀಗಿತು. ಪೂರನ್, 32 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಿಡಿಸಿ 61 ರನ್ ಚಚ್ಚಿದರೆ, ಪೊಲಾರ್ಡ್ 16 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇದರಲ್ಲಿ ಐದು ಸಿಕ್ಸರ್ಗಳಿವೆ ಎಂಬುದು ವಿಶೇಷ.
100 ಮೀಟರ್ನ 4 ಸಿಕ್ಸರ್ಗಳು
ಪೊಲಾರ್ಡ್ 15ನೇ ಓವರ್ನಲ್ಲಿ ಭರ್ಜರಿ 4 ಸಿಕ್ಸರ್ಗಳನ್ನು ಸ್ಟೇಡಿಯಂನಲ್ಲಿ ಲ್ಯಾಂಡ್ ಮಾಡಿದರು. ಇಜಾರುಲ್ಹಕ್ ನವೀದ್ ಬೌಲಿಂಗ್ನಲ್ಲಿ 4 ಎಸೆತಗಳನ್ನು ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ಗಳ ವಿಶೇಷ ಅಂದರೆ ಈ ನಾಲ್ಕು ಸಿಕ್ಸರ್ಗಳೂ 100 ಮೀಟರ್ಗೂ ಅಧಿಕ ದೂರ ಹೋಗಿವೆ ಎಂಬುದು. 100ಕ್ಕೂ ಮೀಟರ್ಗೂ ಅಧಿಕ ದೂರ ಹೋದ ಸಿಕ್ಸರ್ಗಳನ್ನು ನೋಡಿದ್ದೇವೆ. ಆದರೆ ಒಂದೇ ಓವರ್ನಲ್ಲಿ 4 ಸಿಕ್ಸರ್ಗಳನ್ನು 100 ಮೀಟರ್ನಲ್ಲಿ ಸಿಡಿಸಿರುವುದು ಇದೇ ಮೊದಲು.