logo
ಕನ್ನಡ ಸುದ್ದಿ  /  ಕ್ರಿಕೆಟ್  /  ನನ್ನನ್ನು ಕ್ಷಮಿಸಿ; ಕೆಕೆಆರ್ ತಂಡದ ಮುಂದೆ ಬ್ರೆಂಡನ್ ಮೆಕಲಮ್‌ ಬಳಿ ಕ್ಷಮೆಯಾಚಿಸಿದ್ದ ಗೌತಮ್ ಗಂಭೀರ್

ನನ್ನನ್ನು ಕ್ಷಮಿಸಿ; ಕೆಕೆಆರ್ ತಂಡದ ಮುಂದೆ ಬ್ರೆಂಡನ್ ಮೆಕಲಮ್‌ ಬಳಿ ಕ್ಷಮೆಯಾಚಿಸಿದ್ದ ಗೌತಮ್ ಗಂಭೀರ್

Jayaraj HT Kannada

Feb 08, 2024 08:25 PM IST

google News

ಕೆಕೆಆರ್ ತಂಡದ ಮುಂದೆ ಬ್ರೆಂಡನ್ ಮೆಕಲಮ್‌ ಬಳಿ ಕ್ಷಮೆಯಾಚಿಸಿದ್ದ ಗೌತಮ್ ಗಂಭೀರ್

    • Gautam Gambhir: 2012ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡದ ವಿರುದ್ಧದ ಐಪಿಎಲ್ ಫೈನಲ್‌ ಪಂದ್ಯಕ್ಕೂ ಮೊದಲು ಇಡೀ ತಂಡದ ಮುಂದೆ ಬ್ರೆಂಡನ್ ಮೆಕಲಮ್‌ ಬಳಿ ಕ್ಷಮೆಯಾಚಿಸಿದ್ದನ್ನು ಕೆಕೆಆರ್ ಮಾಜಿ ನಾಯಕ ಗೌತಮ್ ಗಂಭೀರ್ ನೆನಪಿಸಿಕೊಂಡಿದ್ದಾರೆ.
ಕೆಕೆಆರ್ ತಂಡದ ಮುಂದೆ ಬ್ರೆಂಡನ್ ಮೆಕಲಮ್‌ ಬಳಿ ಕ್ಷಮೆಯಾಚಿಸಿದ್ದ ಗೌತಮ್ ಗಂಭೀರ್
ಕೆಕೆಆರ್ ತಂಡದ ಮುಂದೆ ಬ್ರೆಂಡನ್ ಮೆಕಲಮ್‌ ಬಳಿ ಕ್ಷಮೆಯಾಚಿಸಿದ್ದ ಗೌತಮ್ ಗಂಭೀರ್ (Reuters-PTI)

ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಗೌತಮ್‌ ಗಂಭೀರ್‌ (Gautam Gambhir) ಕೂಡಾ ಒಬ್ಬರು. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಎರಡು ಬಾರಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ ಪಾತ್ರ ಮಹತ್ವದ್ದು. ಸದ್ಯ 2024ರ ಐಪಿಎಲ್ ಆವೃತ್ತಿಗೂ ಮುನ್ನ ಇದೇ ಕೆಕೆಆರ್‌ ತಂಡದ ಮಾರ್ಗದರ್ಶಕರಾಗಿ ಮತ್ತೆ ತಮ್ಮ ಹಳೆಯ ಫ್ರಾಂಚೈಸಿಗೆ ಗೌತಿ ಮರಳಿದ್ದಾರೆ.

2011ರಲ್ಲಿ ಶಾರುಖ್ ಖಾನ್ ಸಹ ಮಾಲೀಕತ್ವದ ಕೆಕೆಆರ್ ತಂಡಕ್ಕೆ 14.9 ಕೋಟಿ ರೂಪಾಯಿಗೆ ಸೇಲಾಗುವ ಮೂಲಕ, ಐಪಿಎಲ್‌ ಹರಾಜಿನಲ್ಲಿ 10 ಕೋಟಿ ಗಡಿ ದಾಟಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಗಂಭೀರ್ ಪಾತ್ರರಾದರು. ಅದರಂತೆಯೇ 2011ರಿಂದ 2017ರವರೆಗೆ ಗಂಭೀರ್ ಕೆಕೆಆರ್‌ ತಂಡದ ಪ್ರಮುಖ ಆಟಗಾರನಾಗಿದ್ದರು. ಗಂಭೀರ್ ನಾಯಕತ್ವದಲ್ಲಿ 2012ರಲ್ಲಿ ಕೋಲ್ಕತಾ ತಂಡವು ಮೊದಲ ಬಾರಿಗೆ ಐಪಿಎಲ್ ಫೈನಲ್‌ ಪ್ರವೇಶಿಸಿತು. ಚೆಪಾಕ್‌ ಮೈದಾನದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿತು. ಆದರೆ, ಈ ಪಂದ್ಯಕ್ಕೂ ಮುನ್ನ ಗಂಭೀರ್‌ ತಾವು ತೆಗೆದುಕೊಂಡು ದಿಟ್ಟ ಹೆಜ್ಜೆ ಕುರಿತು ಮಾತನಾಡಿದ್ದಾರೆ.

ವೇಗಿ ಲಕ್ಷ್ಮೀಪತಿ ಬಾಲಾಜಿ ಗಾಯದಿಂದ ತಂಡದಲ್ಲಿ ಬದಲಾವಣೆ

ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ ಬದಲಿಗೆ ವೇಗದ ಬೌಲರ್ ಬ್ರೆಟ್ ಲೀ ಅವರನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಬೇಕಾಯ್ತು. ಬ್ರೆಂಡನ್ ಮೆಕಲಮ್ ಅವರನ್ನು ಫೈನಲ್‌ ಪಂದ್ಯದಿಂದ ಹೊರಗಿಡಲು ಗೌತಿ ನಿರ್ಧರಿಸಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಗಂಭೀರ್ ಈ ಬಗ್ಗೆ ಹೇಳಿದ್ದಾರೆ. ಆ ಪಂದ್ಯಕ್ಕೂ ಮುನ್ನ ಸಂಪೂರ್ಣ ತಂಡದ ಮುಂದೆ ಮೆಕಲಮ್‌ ಬಳಿ ಕ್ಷಮೆಯಾಚಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಬ್ರೆಂಡನ್‌ ಮೆಕಲಮ್‌ ಅವರನ್ನು ತಂಡದಿಂದ ಕೈಬಿಡಬೇಕಾಯಿತು

ಚೆಪಾಕ್‌ನಲ್ಲಿ ನಡೆದ ಫೈನಲ್ ಪಂದ್ಯಕ್ಕೆ ತೆರಳುವ ಮೊದಲು, ಇಡೀ ತಂಡದ ಮುಂದೆ ನಾನು ಬ್ರೆಂಡನ್ ಮೆಕಲಮ್ ಗೆ ಕ್ಷಮೆಯಾಚಿಸಿದೆ. ಕ್ಷಮಿಸಿ, ನಾನು ನಿಮ್ಮನ್ನು ಕೈ ಬಿಡಬೇಕಾಯಿತು. ಕಾರಣ ನಿಮ್ಮ ಪ್ರದರ್ಶನವಲ್ಲ. ತಂಡದ ಸಂಯೋಜನೆ ಎಂದು ನಾನು ಹೇಳಿದೆ. ಇದು ಉದ್ದೇಶಪೂರ್ವಕ ಆಗಿರಲಿಲ್ಲ. ಆದರೆ ಇಡೀ ತಂಡದ ಮುಂದೆ ಅವರಲ್ಲಿ ಕ್ಷಮೆಯಾಚಿಸುವ ಧೈರ್ಯ ನನಗೆ ಇತ್ತು. ಕ್ಷಮೆಯಾಚಿಸುವುದರಲ್ಲಿ ಯಾವುದೇ ತಪ್ಪಿಲ್ಲ," ಎಂದು ಗಂಭೀರ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ | ಅತ್ಯಾಚಾರ ಆರೋಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ವರುಣ್ ಕುಮಾರ್; ತುರ್ತು ರಜೆ ಪಡೆದ ಹಾಕಿ ಆಟಗಾರ

ಕೆಕೆಆರ್-ಸಿಎಸ್‌ಕೆ ನಡುವಿನ ಐಪಿಎಲ್ ಫೈನಲ್‌ ಪಂದ್ಯದ ಫಲಿತಾಂಶ

ಮೈಕಲ್ ಹಸ್ಸಿ (54) ಮತ್ತು ಸುರೇಶ್ ರೈನಾ (73*) ಅವರ ಅರ್ಧಶತಕಗಳ ನೆರವಿನಿಂದ ಧೋನಿ ಪಡೆಯು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು. ಗಂಭೀರ್ ಅವರೊಂದಿಗೆ ಕೆಕೆಆರ್ ಪರ ಇನ್ನಿಂಗ್ಸ್ ಪ್ರಾರಂಭಿಸಿದ ಮನ್ವಿಂದರ್ ಬಿಸ್ಲಾ, 48 ಎಸೆತಗಳಲ್ಲಿ ಸ್ಫೋಟಕ 89 ರನ್ ಗಳಿಸಿದರು. ಚೆನ್ನೈ ತವರು ಚೆಪಾಕ್‌ನಲ್ಲಿ ನಡೆದ ಅಂತಿಮ ಓವರ್ ಥ್ರಿಲ್ಲರ್‌ ಪಂದ್ಯದಲ್ಲಿ ಕೋಲ್ಕತ್ತಾ ತಂಡವು ಸಿಎಸ್‌ಕೆ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಅಲ್ಲದೆ ಚೊಚ್ಚಲ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟಿತು. ಫೈನಲ್‌ ಪಂದ್ಯದಲ್ಲಿ ಆಡಿದ ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ, 42 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಇದನ್ನೂ ಓದಿ | ದ್ರಾವಿಡ್ ಸಲಹೆಯಂತೆ ರಣಜಿ ಆಡಲು ಒಲ್ಲದ ಇಶಾನ್ ಕಿಶನ್; ಹಾರ್ದಿಕ್, ಕೃನಾಲ್ ಜೊತೆ ಅಭ್ಯಾಸ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ