Video: ಕೇಶವ್ ಮಹಾರಾಜ್ ಎಂಟ್ರಿಗೆ 'ರಾಮ್ ಸಿಯಾ ರಾಮ್' ಹಾಡು; ಸ್ಟಂಪ್ ಬಳಿ ರಾಹುಲ್ ಸಂಭಾಷಣೆ ವೈರಲ್
Dec 22, 2023 11:19 AM IST
ಕೆಎಲ್ ರಾಹುಲ್ ಮತ್ತು ಕೇಶವ್ ಮಹಾರಾಜ್ ಅವರ ಸಂಭಾಷಣೆ ಸ್ಟಂಪ್-ಮೈಕ್‌ನಲ್ಲಿ ರೆಕಾರ್ಡ್ ಆಗಿದೆ
- KL Rahul: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಕೇಶವ್ ಮಹಾರಾಜ್ ನಡುವಿನ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ.
ದಕ್ಷಿಣ ಆಫ್ರಿಕಾ ವಿರುದ್ಧ (South Africa vs India) ಟಿ20 ಸರಣಿ ಸಮಬಲಗೊಳಿಸಿದ ಟೀಮ್ ಇಂಡಿಯಾ, ಆ ಬಳಿಕ ನಡೆದ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಭಯ ಸರಣಿಯಲ್ಲೂ ಆತಿಥೇಯರ ಗೆಲುವಿಗೆ ಅವಕಾಶ ನೀಡದ ಯುವ ಭಾರತ, ಟೆಸ್ಟ್ ಸರಣಿಗೂ ಮುನ್ನ ವಿಶ್ವಾಸ ಹೆಚ್ಚಿಸಿಕೊಂಡಿದೆ. ಈ ಪಂದ್ಯದ ನಡುವೆ. ವಿಕೆಟ್ ಬಳಿ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಹಾಗೂ ಹರಿಣಗಳ ಬಳಗದ ಸ್ಪಿನ್ನರ್ ಕೇಶವ್ ಮಹಾರಾಜ್ ನಡುವೆ ನಡೆದ ಸಂಭಾಷಣೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಪಡೆ, ಸ್ಯಾಮ್ಸನ್ ಶತಕ (108 ರನ್) ಮತ್ತು ತಿಲಕ್ ವರ್ಮಾ ಅರ್ಧಶತಕದ (52) ನೆರವಿಂದ 8 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿತು. ಬೃಹತ್ ಗುರಿ ಪಡೆದ ದಕ್ಷಿಣ ಆಫ್ರಿಕಾ ಕೇವಲ 218 ರನ್‌ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ | 14 ವರ್ಷಗಳ ಬಳಿಕ ದಾಖಲೆ; ಧೋನಿ ಬಳಿಕ ಪ್ರಮುಖ ಮೈಲಿಗಲ್ಲು ತಲುಪಿದ ಎರಡನೇ ಆಟಗಾರ ಕೆಎಲ್ ರಾಹುಲ್
ಪಂದ್ಯದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾ ಚೇಸಿಂಗ್ ವೇಳೆ, ತಂಡ 33.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದ್ದಾಗ ಆಲ್‌ರೌಂಡರ್ ಕೇಶವ್ ಮಹಾರಾಜ್ ಬ್ಯಾಟಿಂಗ್ ಮಾಡಲು ಬಂದರು. ಈ ವೇಳೆ ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್ ಸ್ಪೀಕರ್‌ಗಳಲ್ಲಿ ‘ರಾಮ್ ಸಿಯಾ ರಾಮ್’ ಹಾಡು ಮೊಳಗಿತು. ಭಾರತ ಮೂಲದವರಾದ ಮಹಾರಾಜ್ ದೈವಭಕ್ತ ಎಂಬುದು ಹೊಸ ವಿಷಯವೇನಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಅವರಿಗೊಪ್ಪುವ ಹಾಡನ್ನೇ ಅವರ ಎಂಟ್ರಿ ವೇಳೆ ಹಾಕಲಾಗಿತ್ತು. ಆದರೆ, ಇಲ್ಲಿ ವಿಷಯ ಅದಲ್ಲ.
ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿದ್ದ ಭಾರತದ ನಾಯಕ ರಾಹುಲ್, ಈ ಹಾಡನ್ನು ಆಲಿಸಿ ವಿಷಯವೊಂದನ್ನು ಗಮನಿಸಿದ್ದಾರೆ. ಕೇಶವ್ ಮಹಾರಾಜ್ ಪ್ರತಿ ಬಾರಿ ಬ್ಯಾಟಿಂಗ್‌ಗೆ ಕಾಲಿಟ್ಟಾಗಲೆಲ್ಲಾ ಈ ಹಾಡನ್ನೇ ನುಡಿಸುತ್ತಾರೆ ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರಲ್ಲೇ ಆ ಪ್ರಶ್ನೆ ಕೇಳಿ ಖಚಿತಪಡಿಸಿಕೊಂಡಿದ್ದಾರೆ. ರಾಹುಲ್ ಮುಗುಳ್ನಗುವಿನೊಂದಿಗೆ ಪ್ರಶ್ನಿಸುತ್ತಿದ್ದಂತೆ ಮಹಾರಾಜ್ ಕೂಡಾ ‘ಹೌದು’ ಎಂದು ಒಪ್ಪಿಕೊಂಡಿದ್ದಾರೆ.
ರಾಹುಲ್ - ಮಹಾರಾಜ್ ಸಂಭಾಷಣೆ ಹೀಗಿದೆ
ಇದನ್ನೂ ಓದಿ | ಯಂಗ್ ಇಂಡಿಯಾ ವಿರುದ್ಧ ತವರಿನಲ್ಲೇ ಮುಗ್ಗರಿಸಿದ ಸೌತ್ ಆಫ್ರಿಕಾ; 2-1 ಅಂತರದಿಂದ ಭಾರತಕ್ಕೆ ಸರಣಿ ಜಯ
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಸರಣಿ ಗೆದ್ದ ಸಾಧನೆ ಮಾಡಿದೆ. ಸಂಜು ಸ್ಯಾಮ್ಸನ್ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಮತ್ತು ಅರ್ಷದೀಪ್ ಸಿಂಗ್ ನೇತೃತ್ವದ ಭಾರತೀಯ ಯುವ ಬೌಲರ್‌ಗಳ ಚಾಣಾಕ್ಷ ಬೌಲಿಂಗ್ ನೆರವಿಂದ, ಡಿ.21ರ ಗುರುವಾರ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಹರಿಣಗಳ ವಿರುದ್ಧ ಟೀಮ್ ಇಂಡಿಯಾ 78 ರನ್‌ಗಳ ಐತಿಹಾಸಿಗ ಗೆಲುವು ತನ್ನದಾಗಿಸಿಕೊಂಡಿದೆ. ಆ ಮೂಲಕ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದು, ಸೌತ್ ಆಫ್ರಿಕಾ ನೆಲದಲ್ಲಿ ಎರಡನೇ ಸರಣಿ ಗೆದ್ದ ಸಾಧನೆ ಮಾಡಿದೆ.
ಪಂದ್ಯದಲ್ಲಿ ಕ್ರೀಸ್‌ಕಚ್ಚಿ ಜವಾಬ್ದಾರಿಯುತ ಆಟವಾಡಿದ ಸ್ಯಾಮ್ಸನ್, ಭಾರತದ ಇನಿಂಗ್ಸ್‌ನ 44ನೇ ಓವರ್‌ನಲ್ಲಿ ಮೂರಂಕಿ ತಲುಪಿದರು. 110 ಎಸೆತಗಳಲ್ಲಿ ತಮ್ಮ ಚೊಚ್ಚಲ ಏಕದಿನ ಶತಕ ಬಾರಿಸಿದರು. 2021ರಲ್ಲಿ ಏಕದಿನ ಸ್ವರೂಪಕ್ಕೆ ಪದಾರ್ಪಣೆ ಮಾಡಿದ ಸ್ಯಾಮ್ಸನ್, ಈ ಸ್ವರೂಪದಲ್ಲಿ ಕೇವಲ 16 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.