ರಾಹುಲ್, ಸಿರಾಜ್ ಬಹುತೇಕ ಹೊರಕ್ಕೆ; ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಗೆ ಟೀಮ್ ಇಂಡಿಯಾ ಪ್ಲೇಯಿಂಗ್ 11
Sep 24, 2024 07:00 AM IST
ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಗೆ ಟೀಮ್ ಇಂಡಿಯಾ ಪ್ಲೇಯಿಂಗ್ 11
- India vs Bangladesh 2nd Test: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಪಂದ್ಯ ಸೆಪ್ಟೆಂಬರ್ 27 ರಿಂದ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಆರಂಭವಾಗಲಿದ್ದು, ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ಆಗುವುದು ಖಚಿತ ಎಂದು ವರದಿಯಾಗಿದೆ.
India Playing 11 vs Bangladesh 2nd Test: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಜರುಗಿದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ಗಳ ದೊಡ್ಡ ವಿಜಯ ಸಾಧಿಸಿತು. ಈ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇದೇ ವೇಳೆ ಕೆಲವರು ತಮ್ಮ ಕಳಪೆ ಪ್ರದರ್ಶನದೊಂದಿಗೆ ಭಾರೀ ನಿರಾಸೆ ಮೂಡಿಸಿದ್ದು, ಅವರಿಗೆ ಎರಡನೇ ಟೆಸ್ಟ್ನ ಪ್ಲೇಯಿಂಗ್ನಲ್ಲೂ ಸ್ಥಾನ ಸಿಗುತ್ತದೆಯೇ ಇಲ್ಲವೇ ಎನ್ನುವ ಅನುಮಾನ ಶುರುವಾಗಿದೆ.
ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 27 ರಿಂದ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ (India vs Bangladesh 2nd Test) ಆರಂಭವಾಗಲಿದೆ. ಅಲ್ಲಿನ ಪಿಚ್ ಚೆನ್ನೈ ಪಿಚ್ಗಿಂತ ಸಂಪೂರ್ಣ ಭಿನ್ನವಾಗಿದೆ. ಹಾಗಾಗಿ ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ಕೆಲ ಬದಲಾವಣೆಗಳು ಕಾಣುವ ನಿರೀಕ್ಷೆ ಇದೆ. ಪ್ರಮುಖವಾಗಿ ಎರಡು ಬದಲಾವಣೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದರೂ ಅವರ ಸ್ಥಾನಕ್ಕೆ ಯಾವುದೇ ಕುತ್ತು ಇಲ್ಲ. ಹಾಗೆಯೇ ಆರಂಭಿಕರ ಸ್ಥಾನದಲ್ಲೂ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವರದಿಯಾಗಿದೆ.
2ನೇ ಟೆಸ್ಟ್‌ನಲ್ಲಿ ಈ ಇಬ್ಬರಿಗೆ ಅವಕಾಶ
ಎರಡನೇ ಪಂದ್ಯಕ್ಕೆ ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. 2ನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಬಿಟ್ಟು ಸರ್ಫರಾಜ್ ಖಾನ್ರನ್ನು ತಮ್ಮ ಆಟದಲ್ಲಿ ಸೇರಿಸಿಕೊಳ್ಳಬೇಕು. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ಕೇವಲ 16 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಭಾರತ ತಂಡವು ಡಿಕ್ಲೇರ್ ಘೋಷಿಸಿತ್ತು. ಕಷ್ಟದ ಸಂದರ್ಭಗಳಲ್ಲಿ ಕೈಕೊಟ್ಟ ರಾಹುಲ್, ತಂಡ ಉತ್ತಮ ಸ್ಥಿತಿಯಲ್ಲಿದ್ದಾಗ ಕ್ರೀಸ್ನಲ್ಲಿ ಉಳಿದಿದ್ದರು.
ಅಗತ್ಯ ಸಮಯದಲ್ಲಿ ರನ್ ಮಾಡಲು ರಾಹುಲ್ ಪರದಾಡಿದ ಸನ್ನಿವೇಶಗಳು ಸಾಕಷ್ಟಿವೆ. ಈ ಹಿಂದೆಯೂ ಅನೇಕ ಸರಣಿಗಳಲ್ಲಿ ಹೀಗೆಯೇ ಮಾಡಿದ್ದಾರೆ. ಹೀಗಾಗಿ ರಾಹುಲ್ ಕೈಬಿಡಲು ಮ್ಯಾನೇಜ್ಮೆಂಟ್ ಯೋಚಿಸುತ್ತಿದೆ ಎಂದು ವರದಿಯಾಗಿದೆ. ಬದಲಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟ್‌ನಿಂದ ವಿಧ್ವಂಸಕ ಸೃಷ್ಟಿಸಿದ್ದ ಸರ್ಫರಾಜ್ ಖಾನ್ ಅವರನ್ನು ಎರಡನೇ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ ಕಣಕ್ಕಿಳಿಸಬೇಕು ಎನ್ನುವ ಚರ್ಚೆಗಳೂ ನಡೆಯುತ್ತಿವೆ.
ಮೊಹಮ್ಮದ್ ಸಿರಾಜ್ ತಂಡದ ಪ್ರಮುಖ ವೇಗದ ಬೌಲರ್. ಆದರೆ, ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಮಾತ್ರ ಕಬಳಿಸಲು ಸಾಧ್ಯವಾಯಿತು. ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಿದರೂ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಕೊಡಲು ಸಾಧ್ಯವಾಗಲಿಲ್ಲ. ಕಾನ್ಪುರ ಪಿಚ್ ಹೆಚ್ಚಾಗಿ ಸ್ಪಿನ್ನರ್‌ಗಳ ಪ್ರಾಬಲ್ಯ ಹೊಂದಿದೆ. ಹೀಗಾಗಿ ಇಬ್ಬರು ವೇಗದ ಬೌಲರ್‌ಗಳು ಹಾಗೂ ಮೂವರು ಸ್ಪಿನ್ನರ್‌ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯುವ ನಿರೀಕ್ಷೆಯಿದೆ. ಸಿರಾಜ್ ಅವರನ್ನು ಬೆಂಚ್ ಮಾಡಿಸಿ ಕುಲ್ದೀಪ್ ಯಾದವ್ ಅವರು ಆಡುವ ಹನ್ನೊಂದರ ಭಾಗವಾಗುವ ಸಾಧ್ಯತೆ ಹೆಚ್ಚಿದೆ.
2ನೇ ಟೆಸ್ಟ್ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್/ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್/ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರತ್ ಬುಮ್ರಾ.